ಬಳ್ಳಾರಿ.11.ಫೆ.25:- ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನವು ಭಾರತದ ಪ್ರತಿಯೊಬ್ಬ ನಾಗರಿಕರಿಗೆ ಪವಿತ್ರ ಗ್ರಂಥವಾಗಿದೆ’ ಎಂದು ಸಾಹಿತಿ ಹಾಗೂ ಬಾಬು ಜಗಜೀವನ್ ರಾಂ ಪ್ರಶಸ್ತಿ ಪುರಸ್ಕೃತೆ ಎನ್.ಡಿ.ವೆಂಕಮ್ಮ ಅಭಿಪ್ರಾಯಪಟ್ಟರು.
ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕು ಮತ್ತು ಸಾಧನೆಗಳ ಪರಿಚಯ ಕುರಿತು ಮಂಗಳವಾರ ಏರ್ಪಡಿಸಿದ್ದ ‘ಅಂಬೇಡ್ಕರ್ ಓದು’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷೆ ಎಂ.ಕಾತ್ಯಾಯಿನಿ ಮರಿದೇವಯ್ಯ ಮಾತನಾಡಿ, ‘ಅಂಬೇಡ್ಕರ್ ವಿಚಾರ-ಧಾರೆಗಳನ್ನು ಅರಿತುಕೊಳ್ಳಬೇಕು. ವಿದ್ಯಾರ್ಥಿಗಳು ಅವರ ಪುಸ್ತಕಗಳನ್ನು ಓದಿ ಪ್ರಜ್ಞಾವಂತರಾಗಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕು’ ಎಂದರು.
ಸತ್ಯಂ ಶಿಕ್ಷಣ ಮಹಾವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ಅಲಂಭಾಷ ಮಾತನಾಡಿ, ‘ಅಂಬೇಡ್ಕರ್ ರಚಿತ ಸಂವಿಧಾನವು ವಿವಿಧ ದೇಶಗಳಿಗೆ ಮಾದರಿಯಾಗಿದ್ದು, ಸಂವಿಧಾನದ ಮೂಲಕ ಸಮಾಜಕ್ಕೆ ಬಹಳಷ್ಟು ಕೊಡುಗೆ ನೀಡಿದ್ದಾರೆ’ ಎಂದು ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್‌ರವರ ಬದುಕು ಮತ್ತು ಸಾಧನೆಗಳ ಪರಿಚಯ ಕುರಿತು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಪುಸ್ತಕ ರೂಪದಲ್ಲಿ ಬಹುಮಾನ ವಿತರಣೆ ಮಾಡಲಾಯಿತು.