Home » ಲೈವ್ ನ್ಯೂಸ್ » ಜಿಲ್ಲಾದ್ಯಂತ ಅರಣ್ಯೀಕರಣ ಹಾಗೂ ಹಸಿರು ಹೊದಿಕೆ ಹೆಚ್ಚಳಕ್ಕೆ ಆದ್ಯತೆ ನೀಡಿ-:ಸಚಿವ ರಾಮಲಿಂಗರೆಡ್ಡಿ

ಜಿಲ್ಲಾದ್ಯಂತ ಅರಣ್ಯೀಕರಣ ಹಾಗೂ ಹಸಿರು ಹೊದಿಕೆ ಹೆಚ್ಚಳಕ್ಕೆ ಆದ್ಯತೆ ನೀಡಿ-:ಸಚಿವ ರಾಮಲಿಂಗರೆಡ್ಡಿ

ಬೀದರ್,26.ಆಗಸ್ಟ್ 26 : ಜಿಲ್ಲೆಯಲ್ಲಿ ರಸ್ತೆ ಬದಿ ಹಾಗೂ ಸರ್ಕಾರಿ ಕಚೇರಿ ಆವರಣಗಳ ಖಾಲಿ ಜಾಗಗಳಲ್ಲಿ ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ ಜಿಲ್ಲಾದ್ಯಂತ ಅರಣ್ಯೀಕರಣಕ್ಕೆ ಹೆಚ್ಚು ಒತ್ತು ನೀಡಬೇಕೆಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಾದ ರಾಮಲಿಂಗರೆಡ್ಡಿ ಅವರು ಅಧಿಕಾರಿಗಳಿಗೆ ಸೂಚಿಸಿದರು.


ಬುಧವಾರ ನಗರದ ಹೊರವಲಯದಲ್ಲಿರುವ ಬೀದರ್ ಪ್ರಾದೇಶಿಕ ಅರಣ್ಯ ವಿಭಾಗದ ವ್ಯಾಪ್ತಿಯಲ್ಲಿ ಬರುವ ‘ದೇವ-ದೇವ ವನ’ಕ್ಕೆ ಭೇಟಿ ನೀಡಿದ ಸಚಿವರು, ಇಲ್ಲಿನ ಬೃಹತ್ ಪಂಚವಟಿ, ಜಪಾನೀಸ್ ಗಾರ್ಡನ್, ಶಿವ ಪಂಚಾಯತಿ ವನ, ರಾಶಿ ವನ, ನವನಿಕೇತನ ವನ, ನಂದನ ವನ, ನವಗ್ರಹ ವನ ಹಾಗೂ ನಂದಿನಿ ವನಗಳನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಪ್ರಾಣಿ-ಪಕ್ಷಿ ಸಂಕುಲಕ್ಕೆ ಯಾವುದೇ ತೊಂದರೆಯಾಗದoತೆ ನೋಡಿಕೊಳ್ಳಲು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.


ನಂತರ ಹಳ್ಳದಕೇರಿ ಟ್ರೀ ಪಾರ್ಕ್ ಹಾಗೂ ಪ್ಲಾಂಟೇಷನ್‌ಗೆ ಭೇಟಿ ನೀಡಿ, ವಿವಿಧ ಬಗೆಯ ಗಿಡ-ಮರಗಳನ್ನು ಬೆಳೆಸುತ್ತಿರುವುದನ್ನು ಕಂಡು ಸಂತಸ ವ್ಯಕ್ತಪಡಿಸಿದರು. ನೆಟ್ಟಿರುವ ಗಿಡ-ಮರಗಳ ಸುರಕ್ಷತೆ ಹಾಗೂ ಅವುಗಳಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.


ಜಿಲ್ಲೆಯಲ್ಲಿ ಹಸಿರು ಹೊದಿಕೆಯನ್ನು ಹೆಚ್ಚಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಲ್ಲಿ ಗಿಡ ನೆಡುವ ಮತ್ತು ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸಲು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ರಸ್ತೆಬದಿ ನೆಟ್ಟ ಗಿಡಗಳಿಗೆ ನೀರುಣಿಸಲು ಮತ್ತು ಅವುಗಳ ಸೂಕ್ತ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು. ಪ್ರಕೃತಿಯನ್ನು ರಕ್ಷಿಸಿದರೆ ಮಾತ್ರ ನಮಗೆ ಉತ್ತಮ ಭವಿಷ್ಯ ಸಿಗಲು ಸಾಧ್ಯ” ಎಂದು ಪ್ರತಿಪಾದಿಸಿದರು.


ಬೀದರ್ ಜಿಲ್ಲೆಯ ಅರಣ್ಯ ಪ್ರದೇಶಗಳ ಅಭಿವೃದ್ಧಿಗೆ ಮತ್ತು ಪ್ರವಾಸಿಗರನ್ನು ಆಕರ್ಷಿಸಲು ಟ್ರೀ ಪಾರ್ಕ್ಗಳನ್ನು ಮತ್ತಷ್ಟು ಸುಂದರಗೊಳಿಸಲು ಅಗತ್ಯ ಅನುದಾನ ಹಾಗೂ ಬೆಂಬಲ ನೀಡಲಾಗುವುದು. ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ದೇವ-ದೇವ ವನ ವೀಕ್ಷಣೆಗೂ ಮುನ್ನ ಅರಣ್ಯ ಇಲಾಖೆಯ ಸಿಬ್ಬಂದಿಯಿoದ ಸಚಿವರು ಗೌರವ ವಂದನೆ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮೀತ್ ಸುಭಾಷರಾವ್ ಪಾಟೀಲ್ (IಈS), ಬೀದರ್ ಸಾಮಾಜಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ್ ಎರಡೋಣಿ, ಬೀದರ್ ವಲಯ ಅರಣ್ಯ ಅಧಿಕಾರಿ ಪ್ರವೀಣ್ ಕುಮಾರ ಮೋರೆ, ಬೀದರ್ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ್ ಹೇಮಾ, ಸಾಮಾಜಿಕ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವೀರೇಶ್ ಕಲ್ಯಾಣಿ, ಉಪವಲಯ ಅರಣ್ಯ ಅಧಿಕಾರಿ ಸದಾನಂದ ಸೇರಿದಂತೆ ಇಲಾಖೆಯ ಇತರ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

Author

ಪ್ರಮುಖ ಸುದ್ದಿ

Stock market

Astrology