ಹೊಸ ದೆಹಲಿ.22.ಆಗಸ್ಟ್.26: ದೆಹಲಿಯಲ್ಲಿ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ, ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟಕ್ಕೆ ಭಾರೀ ಶಾಕ್ನೀಡಲು ಬಿಜೆಪಿ ಮುಂದಾಗಿದೆ. ಈ ಸಂಬಂಧ, ಅಂತಿಮ ಹಂತದ ಮಾತುಕತೆಗಳು ಎರಡು ಪ್ರಮುಖ ರಾಜಕೀಯ ಪಾರ್ಟಿಗಳ ನಡುವೆ ಮುಕ್ತಾಯಗೊಂಡಿದೆ ಎಂದು ವ್ಯಕ್ತಪಡಿಸಿದ್ದಾರೆ.
ದೇಶದ ರಾಜಕಾರಣದಲ್ಲಿ ಭಾರೀ ಬದಲಾವಣೆಯಾಗುವ ಸಾಧ್ಯತೆ ದಿನದಿಂದ ದಿನಕ್ಕೆ ದಟ್ಟವಾಗುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿಗಳನ್ನೇ ನಂಬುವುದಾದರೆ, ಶರದ್ ಪವಾರ್ ನೇತೃತ್ವದ ಎನ್ಸಿಪಿ (Naitonalist Congress Party ) ಮತ್ತು ಎಂಕೆ ಸ್ಟಾಲಿನ್ ನೇತೃತ್ವದ ಡಿಎಂಕೆ( Dravida Munnetra Kazhagam), ಎನ್ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಗೊಳ್ಳುವ ಸಂಬಂಧ, ಅಂತಿಮ ಸುತ್ತಿನ ಮಾತುಕತೆ ಈಗಾಗಲೇ ನಡೆದಿದೆ ಎಂದು ಹೇಳಲಾಗುತ್ತಿದೆ. ಡಿಎಂಕೆ ಪಾರ್ಟಿಯು, ಬಿಜೆಪಿ ಮೈತ್ರಿಕೂಟಕ್ಕೆ ಅಧಿಕೃತವಾಗಿ ಸೇರಲಿದೆ ಎಂದು ತಮಿಳುನಾಡು ಆಡಳಿತಾರೂಢ ಪಾರ್ಟಿಯ ನಾಯಕರೊಬ್ಬರು ಹೇಳಿರುವುದು ಈ ಸುದ್ದಿಗೆ ಪುಷ್ಟಿಯನ್ನು ನೀಡುತ್ತಿದೆ.
ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ ಎಂದಿರುವ ಡಿಎಂಕೆ ಸಂಸದೆ ಕನಿಮೊಳಿರಾಷ್ಟ್ರ ರಾಜಕಾರಣದಲ್ಲಿ ಆಗಬಹುದಾದ ಬಹುದೊಡ್ಡ ಬದಲಾವಣೆಯ ಬಗ್ಗೆ ಮಾತನಾಡುತ್ತಾ, “ಹಿಂದೆ ಡಿಎಂಕೆಯು ಬಿಜೆಪಿಗೆ ಪರೋಕ್ಷವಾಗಿ ಬೆಂಬಲವನ್ನು ಆಫ್ ದಿ ರೆಕಾರ್ಡ್ ನೀಡುತ್ತಿತ್ತು, ಈಗ ಏನಿದ್ದರೂ ನೇರಾನೇರ. ಡಿಎಂಕೆಯು ಅಧಿಕೃತವಾಗಿ ಬಿಜೆಪಿ ಮೈತ್ರಿಕೂಟದಲ್ಲಿ ಸೇರ್ಪಡೆಯಾಗಲು ಸಜ್ಜಾಗಿದೆ. ಈ ಹಿನ್ನಲೆಯಲ್ಲಿ ಡಿಎಂಕೆ ಸಂಸದ ತಿರುಚ್ಚಿ ಶಿವ ಶೀಘ್ರದಲ್ಲೇ ಕೇಂದ್ರ ಸಚಿವರಾಗಲಿದ್ದಾರೆ ಎಂದು ಕೇಂದ್ರ ಸಚಿವ ಅನಿತಾ ರಾಧಾಕೃಷ್ಣನ್ ಹೇಳಿರುವುದು. ಡಿಎಂಕೆಯ ಸಂಸದೆ ಕನಿಮೊಳಿ, NVN ಸೋಮು, ರಾಜಕೀಯದಲ್ಲಿ ಯಾರೂ ಶತ್ರುಗಳಿಲ್ಲ ಎಂದು ಹೇಳಿರುವುದರಲ್ಲಿ ತುಂಬಾ ಅರ್ಥವಿದೆ ಎಂದು ತಮಿಳುನಾಡು ಇಂಧನ ಮತ್ತು ಕಾನೂನು ಸಚಿವ ಆರ್. ನಿರ್ಮಲ್ ಕುಮಾರ್, ಸ್ಪೋಟಕ ಹೇಳಿಕೆಯನ್ನು ನೀಡಿದ್ದಾರೆ.
ತಮಿಳುನಾಡು ರಾಜಕೀಯದಲ್ಲಿ ಡಿಎಂಕೆ – ಕಾಂಗ್ರೆಸ್, ಗಳಸ್ಯ ಕಂಠಸ್ಯದ ರೀತಿಯಲ್ಲಿ ಇದ್ದದ್ದು ಗೊತ್ತಿರುವ ವಿಚಾರ. ಈ ಸಂಬಂಧ, ಹಾಳಾಗಿದ್ದು ತಮಿಳುನಾಡು ವಿಧಾನಸಭಾ ಫಲಿತಾಂಶ ಬಂದ ನಂತರ. ಡಿಎಂಕೆ ಜೊತೆಗಿನ ಮೈತ್ರಿಗೆ ಬಹುತೇಕ ಎಳ್ಳುನೀರು ಬಿಟ್ಟು,
ಸಿಎಂ ಜೋಸೆಫ್ ವಿಜಯ್ ಅವರ ಸರ್ಕಾರದ ಭಾಗವಾಗಿ ಕೈ ಪಾರ್ಟಿ ರಾಜಕೀಯ ನಿಲುವನ್ನು ತಾಳಿತ್ತು. ಅಂದಿನಿಂದಲೇ, ಬಿಜೆಪಿ ಜೊತೆ ಡಿಎಂಕೆ ಸೇರಿಕೊಳ್ಳಲಿದೆ ಎನ್ನುವ ಸುದ್ದಿ ಹರಿದಾಡಲು ಆರಂಭಿಸಿತ್ತು. ಈಗ, ಇದು ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಂತಿದೆ ಎಂದು ಹೇಳಲಾಗುತ್ತಿದೆ.
ಪ್ರಧಾನಿ ಜೊತೆ ಉತ್ತಮ ಒಡನಾಟವನ್ನು ಹೊಂದಿರುವ ಶರದ್ ಪವಾರ್
ಇನ್ನೊಂದು ಕಡೆ, ದೇಶದ ಹಿರಿಯ ರಾಜಕಾರಣಿ ಶರದ್ ಪವಾರ್ ಮತ್ತು ಪ್ರಧಾನಿ ಮೋದಿ ಜೊತೆಗೆ ಹಿಂದಿನಿಂದಲೂ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಇವರ ಎನ್ಸಿಪಿ ಕೂಡಾ, ಎನ್ಡಿಎ ಒಕ್ಕೂಟದ ಭಾಗವಾಗಲಿದೆ ಎನ್ನುವ ಸುದ್ದಿಗಳೂ ಹರಿದಾಡುತ್ತಿದ್ದವು. ಆದರೆ, ಪಾರ್ಟಿಯ ನಾಯಕಿ, ಶರದ್ ಪವಾರ್ ಅವರ ಪುತ್ರಿ ಮತ್ತು ಸಂಸದೆ ಸುಪ್ರಿಯಾ ಸುಳೆ ಇದನ್ನು ಅಲ್ಲಗಳೆದಿದ್ದರು. ರಾಜಕೀಯದಲ್ಲಿ ಇಂತಹ ಹೇಳಿಕೆಗಳು ಸಾಮಾನ್ಯ, ಆದರೆ, ಬೆಂಕಿಯಿಲ್ಲದೇ ಹೊಗೆಯಾಡಿತೇ ಎನ್ನುವುದು ಕೂಡಾ ಅಷ್ಟೇ ಸತ್ಯವಾದ ಗಾದೆಮಾತು.
ಲೋಕಸಭೆಯ ಅಧಿವೇಶನವನ್ನು ಗದ್ದಲ ಮಾಡಿಕೊಂಡು ಮುಂದಕ್ಕೆ ಹಾಕಿಕೊಳ್ಳುವುದಕ್ಕೆ ಸುಪ್ರಿಯಾ ಸುಳೆ ವಿರೋಧವನ್ನು ವ್ಯಕ್ತ ಪಡಿಸುತ್ತಲೇ ಬರುತ್ತಿದ್ದರು. ಮಹಾರಾಷ್ಟ್ರದ ಡಿಸಿಎಂ ದಿ.ಅಜಿತ್ ಪವಾರ್ ಅವರಿದ್ದಾಗಲೇ, ಬಿಜೆಪಿ ಮೈತ್ರಿಕೂಟಕ್ಕೆ ಶರದ್ ಪವಾರ್ ಬಣವನ್ನು ಸೇರ್ಪಡೆಗೊಳಿಸಲು ಪ್ರಯತ್ನವನ್ನು ಮಾಡಿದ್ದರು. ಈಗ, ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ, ಅಂತಿಮ ಹಂತದ ಮಾತುಕತೆಯು ಶರದ್ ಪವಾರ್ – ಸುಪ್ರಿಯಾ ಜೊತೆ, ಬಿಜೆಪಿ ನಾಯಕರು ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಮೈತ್ರಿಕೂಟಕ್ಕೆ ಸೇರ್ಪಡೆಗೊಂಡರೆ ಬಿಜೆಪಿಯಿಂದ ಭರ್ಜರಿ ಆಫರ್
ಮೂಲಗಳ ಪ್ರಕಾರ, ತಮ್ಮ ಪಾರ್ಟಿಯ ಜೊತೆಗೆ ಡಿಎಂಕೆಯನ್ನೂ ಎನ್ಡಿಎ ಮೈತ್ರಿಕೂಟದ ಭಾಗವನ್ನಾಗಿ ಮಾಡಲು ಖುದ್ದು ಶರದ್ ಪವಾರ್ ಅವರೇ ನಿಂತಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಜೆಪಿ ಮೈತ್ರಿಕೂಟಕ್ಕೆ ಸೇರ್ಪಡೆಗೊಳ್ಳಲು/ ಬೆಂಬಲಿಸಲು, ಕೆಲವೊಂದು ಷರತ್ತನ್ನು ಶರದ್ ಪವಾರ್ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಅದರಲ್ಲಿ ಒಂದು ಸಚಿವ ಸ್ಥಾನ ಎನ್ಸಿಪಿಗೆ , ಎರಡು ಸಚಿವ ಸ್ಥಾನ ಡಿಎಂಕೆಗೆ ಎಂದು.
ಸುಪ್ರಿಯಾ ಸುಳೆ ಮತ್ತು ಸ್ಟಾಲಿನ್ ಸಹೋದರಿ ಕನಿಮೊಳಿ, ಮೋದಿ ನೇತೃತ್ವದ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವರಾಗುವುದು ಬಹುತೇಕ ಪಕ್ಕಾ ಎಂದು ಹೇಳಲಾಗುತ್ತಿದೆ. ತಮಿಳುನಾಡು ಮಾಜಿ ಸಿಎಂ ಸ್ಟಾಲಿನ್ ಸೂಚಿಸುವ ಇನ್ನೊಬ್ಬರು ಡಿಎಂಕೆ ಸಂಸದರಿಗೆ (ಬಹುತೇಕ ತಿರುಚ್ಚಿ ಶಿವ) ಸಚಿವ ಸ್ಥಾನ ಸಿಗಬಹುದು ಎಂದು ಹೇಳಲಾಗುತ್ತಿದೆ.
ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕ್ಯಾಬಿನೆಟ್ ವಿಸ್ತರಣೆ ವಿಳಂಬಕ್ಕೆ ಇದುವೇ ಕಾರಣ
ಸಿಜೆಪಿಯ ಪ್ರತಿಭಟನೆ ಜಂತರ್’ಮಂತರ್’ನಲ್ಲಿ ಆರಂಭ ಆಗುವುದಕ್ಕೂ ಮುನ್ನವೇ, ಕೇಂದ್ರ ಸಚಿವ ಸಂಪುಟ ವಿಸ್ತರಣೆಯ ಮಾತು ಕೇಳಿ ಬರುತ್ತಿತ್ತು. ಸಿಜೆಪಿ ಬಯಸದಿದ್ದರೂ, ಶಿಕ್ಷಣ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್ ಅವರನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳುವುದರಲ್ಲಿತ್ತು. ಆದರೆ, ವಿದ್ಯಾರ್ಥಿಗಳ ಪ್ರತಿಭಟನೆ ಹಲವು ಆಯಾಮಕ್ಕೆ ತಿರುಗಿದ ಹಿನ್ನಲೆಯಲ್ಲಿ, ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕಾಯಿತು.
ಮಾನ್ಸೂನ್ ಅಧಿವೇಶನ ಮುಗಿದ ನಂತರ, ಕೇಂದ್ರ ಸಚಿವ ಸಂಪುಟ ವಿಸ್ತರಣೆಗೆ ಮಹೂರ್ತ ನಿಗದಿಯಾಗಬಹುದು. ಡಿಎಂಕೆ ಮತ್ತು ಎನ್ಸಿಪಿ ಜೊತೆ ಫೈನಲ್ ಹಂತದ ಮಾತುಕತೆ ಮುಗಿದಿರುವ ಹಿನ್ನಲೆಯಲ್ಲಿ, ಕ್ಯಾಬಿನೆಟ್ ವಿಸ್ತರಣೆ ಸದ್ಯದಲ್ಲೇ ನಡೆಯಬಹುದು ಎಂದು ಹೇಳಲಾಗುತ್ತಿದೆ. ಇಂತಹ ಸುದ್ದಿಗಳು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಾವೆ ಕೂಡಾ..





Any questions related to ಮುಗಿದ ಫೈನಲ್ ರೌಂಡ್ ಮಾತುಕತೆ: ಇಂಡಿಯಾ ಬ್ಲಾಕ್ ಛಿದ್ರ, NDA ತೆಕ್ಕೆಗೆ ಡಿಎಂಕೆ, NCP- 2 ಸಚಿವ ಸ್ಥಾನದ ಆಫರ್??