ಬೀದರ,.03.ಆಗಸ್ಟ್.26: ಸಮಾಜದಲ್ಲಿ ದಿನೇ ದಿನೆ ಹೆಚ್ಚುತ್ತಿರುವ ದುಷ್ಟ ಚಟಗಳನ್ನು ತೊರೆದು, ಆರೋಗ್ಯಕರ ಹಾಗೂ ನೆಮ್ಮದಿಯ ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡಲು ಪ್ರತಿಯೊಬ್ಬರೂ ಒಗ್ಗೂಡಿ ಕೈಜೋಡಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿರೀಶ್ ಬದೋಲೆ ಅವರು ಕರೆ ನೀಡಿದರು.
ಶನಿವಾರ ಬೀದರ ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದೇವರು ರಂಗಮAದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮದ್ಯಪಾನ ಮಂಡಳಿ (ಬೆಂಗಳೂರು), ಬೀದರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಶ್ರೀ ವಿಜಯಮಹಾಂತ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಹಾಗೂ ಜಿಲ್ಲೆಯ ವಿವಿಧ ಸಂಘ-ಸAಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪೂಜ್ಯ ಡಾ. ಮಹಾಂತ ಅಪ್ಪನವರು ಸಾರಿದ ಸಂದೇಶವನ್ನು ಸ್ಮರಿಸಿದ ಸಿಇಒ ಅವರು, ನಮಗೆ ನಿಮ್ಮ ಆಸ್ತಿ-ಪಾಸ್ತಿ ಅಥವಾ ಹಣ ಬೇಡ, ಬದಲಿಗೆ ನಿಮ್ಮಲ್ಲಿರುವ ದುಷ್ಟ ಚಟಗಳನ್ನು ನಮಗೆ ನೀಡಿ, ನೀವು ಸುಖಮಯ ಜೀವನ ನಡೆಸಿ ಎಂದಿದ್ದ ಶ್ರೀಗಳ ವಾಣಿಯನ್ನು ನೆನಪಿಸಿದರು.
ಇಂದಿನ ದಿನಗಳಲ್ಲಿ ಧೂಮಪಾನ, ಮದ್ಯಪಾನ ಹಾಗೂ ಮಾದಕ ದ್ರವ್ಯಗಳ ಸೇವನೆಯಿಂದ ಕೇವಲ ವ್ಯಕ್ತಿಯ ಆರೋಗ್ಯ ಹಾಳಾಗುವುದು ಮಾತ್ರವಲ್ಲದೆ, ಕುಟುಂಬದ ನೆಮ್ಮದಿ ಕೆಟ್ಟು ತೀವ್ರ ಆರ್ಥಿಕ ಬಿಕ್ಕಟ್ಟು ಎದುರಾಗುತ್ತದೆ. ಅಲ್ಲದೆ, ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಮತ್ತು ನಶೆಯಲ್ಲಿ ಅಪರಾಧಗಳನ್ನು ಎಸಗುವುದರಿಂದ ಸಾರ್ವಜನಿಕ ಜೀವಕ್ಕೂ ಅಪಾಯ ಉಂಟಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ದೇಶದ ಭವಿಷ್ಯವಾಗಿರುವ ವಿದ್ಯಾರ್ಥಿಗಳು ತಮ್ಮ ಸ್ನೇಹಿತರು ಹಾಗೂ ಸುತ್ತಮುತ್ತಲಿನವರಲ್ಲಿ ಅರಿವು ಮೂಡಿಸುವ ಮೂಲಕ ವ್ಯಸನಮುಕ್ತ ಸಮಾಜದ ರಾಯಭಾರಿಗಳಾಗಬೇಕು. ಪೂಜ್ಯ ಶ್ರೀ ಮಹಾಂತ ಶಿವಯೋಗಿಗಳ ಕನಸಿನಂತೆ ಪ್ರತಿಯೊಂದು ಮನೆ ಹಾಗೂ ಮನಸ್ಸು ವ್ಯಸನಮುಕ್ತವಾಗಲು ಎಲ್ಲರೂ ಸಂಕಲ್ಪ ಮಾಡಬೇಕೆಂದು ಅವರು ಮನವಿ ಮಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಕರಾಳೆ ಅವರು ಮಾತನಾಡಿ ಸಮಾಜದ ಯುವಕರಲ್ಲಿ ವ್ಯಾಪಕವಾಗಿ ಹರಡುತ್ತಿರುವ ದುಶ್ಚಟಗಳನ್ನು ನಿಯಂತ್ರಿಸಲು ಯುವಕರು ಮುಂದಾಗಬೇಕು, ದುಶ್ಚಟಗಳಿಂದ ಬಾದಿತರಾದವರಿಗೆ ನೀವುಗಳು ಪ್ರೇರಣೆಯಾಗಬೇಕು ದೇಶದ ಭವಿಷ್ಯ ಉಜ್ವಲವಾಗಲು ನಿಮ್ಮ ಪಾತ್ರ ಬಹಳ ಮುಖ್ಯವಾಗಿದೆ. ಇಂದಿನ ಯುವಕರು ಹಾಗೂ ವಿದ್ಯಾರ್ಥಿಗಳು ಯಾವುದೇ ಕೆಟ್ಟ ಚಟಗಳಿಗೆ ಬಲಿಯಾಗದೆ, ಸುಸಂಸ್ಕೃತರಾಗಿ ಹಾಗೂ ಆರ್ಥಿಕವಾಗಿ ಸಬಲರಾಗಿ ಬೆಳೆಯಬೇಕೆಂದು ಹೇಳಿದರು.
ಸರ್ಕಾರರು ಈಗಾಗಲೇ ಹಲವಾರು ಕ್ರಮಗಳನ್ನು ತೆಗೆದುಕೊಂಡಿದ್ದು, ಸಾರ್ವಜನಿಕರ ಸ್ಥಳಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಹಾಗೂ ಸರ್ಕಾರಿ ಕಟ್ಟಡದದಿಂದ 100 ಮೀಟರ್ ವರೆಗಿನ ಸ್ಥಳಗಳನ್ನು ತಂಬಾಕು ರಹಿತ ಹಾಗೂ ಇತರ ಮಾದಕ ವಸ್ತುಗಳ ಮಾರಾಟ ನಿಷೇಧಿಸಿದ ಪ್ರದೇಶವೆಂದು ಘೋಷಿಸಲಾಗಿದೆ. ದುಶ್ಚಟಗಳಿಂದ ಪ್ರಭವಕ್ಕೊಳಗಾದ ವ್ಯಕ್ತಿಗಳನ್ನು ದುಶ್ಚಟಗಳಿಂದ ಮುಕ್ತರನ್ನಾಗಿಸಲು ನಾವು ನೀವೆಲ್ಲರೂ ನಿರ್ಧಾರ ತೆಗೆದುಕೊಳ್ಳಬೇಕು ದೇಶದ ಭವಿಷ್ಯ ಇಂದಿನ ಯುವಕರ ಮೇಲಿದೆ ಇದರಿಂದ ದೇಶ ಆರ್ಥಿಕವಾಗಿ ಬಲಿಷ್ಠವಾಗಲು ಸಾಧ್ಯ ಎಂದು ಹೇಳಿದರು.
ಉಪನ್ಯಾಸಕರಾಗಿ ಆಗಮಿಸಿದ ಸಾಹಿತಿ ಹಾಗೂ ಜಿಲ್ಲಾ ಖಜಾನೆ ಇಲಾಖೆಯ ಸಹಾಯಕ ನಿರ್ದೇಶಕರಾದ ಮಾಣಿಕ ನೇಳಗೆ ಅವರು ಮಾತನಾಡಿ ಮಾನವ ದಾರಿ ತಪ್ಪಿದಾಗ ಗೌತಮ ಬುದ್ಧ ಹಾಗೂ ಜಗಜ್ಯೋತಿ ಬಸವಣ್ಣನವರಂತಹ ಮಹಾತ್ಮರು ಸಮಾಜವನ್ನು ತಿದ್ದುಪಡಿ ಮಾಡಿದಂತೆ, ಆಧುನಿಕ ಕಾಲದಲ್ಲಿ ಸಮಾಜದಲ್ಲಿದ್ದ ದುಶ್ಚಟ ಹಾಗೂ ಕೆಟ್ಟ ಅಭ್ಯಾಸಗಳನ್ನು ನಿವಾರಿಸಲು ಡಾ.ಮಹಾಂತ ಅಪ್ಪನವರು ಅಪಾರವಾಗಿ ಶ್ರಮಿಸಿದರು ಎಂದು ಬಣ್ಣಿಸಿದರು.
1972ರ ಭೀಕರ ಬರಗಾಲದ ಸಮಯದಲ್ಲಿ ಅನ್ನ-ನೀರಿಲ್ಲದೆ ಜನರು ತತ್ತರಿಸುತ್ತಿದ್ದಾಗ ಇಳಕಲ್ ಮಠದ ವತಿಯಿಂದ ಉಚಿತ ಗಂಜಿ ಕೇಂದ್ರಗಳನ್ನು ತೆರೆದು ಪ್ರತಿಯೊಬ್ಬರಿಗೂ ಆಸರೆಯಾಗಿದ್ದ ಮಹಾಂತ ಅಪ್ಪಗಳ ಕರುಣೆಯನ್ನು ಅವರು ಸ್ಮರಿಸಿದರು.
ಇನ್ನು ಹುನಗುಂದದಲ್ಲಿ ಮದ್ಯಪಾನದಿಂದ ಭಕ್ತನೊಬ್ಬ ಮೃತಪಟ್ಟ ಘಟನೆಯಿಂದ ತೀವ್ರ ಭಾವುಕರಾದ ಅಪ್ಪನವರು, ಮಹಾಂತ ಜೋಳಿಗೆಯನ್ನು ಆರಂಭಿಸಿ ಮನೆ ಮನೆಗೆ ತೆರಳಿ ಜನರಲ್ಲಿದ್ದ ಕುಡಿತ, ಗುಟ್ಕಾ ಮುಂತಾದ ದುಶ್ಚಟಗಳನ್ನು ಬಿಡಿಸಿ ಪ್ರಮಾಣ ಮಾಡಿಸಿದ ಪ್ರಸಂಗವನ್ನು ಅವರು ವಿವರಿಸಿದರು.





Any questions related to ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಿ:<br>ಜಿ. ಪ. ಸಿಇಒ ಗಿರೀಶ್ ಬದೋಲೆ ಕರೆ<br>?