ಬೆಂಗಳೂರು.27.ಜುಲೈ.26: ರಾಜ್ಯಾದ್ಯಂತ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಐವಿ ಪರೀಕ್ಷೆ ನಡೆಸಲು ಇಲಾಖೆ ತೀರ್ಮಾನಿಸಿದೆ ಇಂದು ಯುವ ಸಮುದಾಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಹೆಚ್ ಐವಿ ಸೋಂಕಿಗೆ ಆರಂಭಿಕ ಹಂತದಲ್ಲೇ ಬ್ರೇಕ್ ಹಾಕಲು ಕರ್ನಾಟಕ ಆರೋಗ್ಯ ಇಲಾಖೆ ದಿಟ್ಟ ಹೆಜ್ಜೆಯಿಟ್ಟಿದೆ.
ಯುವಜನರಲ್ಲಿ ಸೋಂಕನ್ನು ಶೀಘ್ರವಾಗಿ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಒದಗಿಸುವ ಬೃಹತ್ ಯೋಜನೆಯ ಭಾಗವಾಗಿ, ರಾಜ್ಯಾದ್ಯಂತ ಇರುವ ಕಾಲೇಜು ವಿಧ್ಯಾರ್ಥಿಗಳಿಗೆ HIV test ಮಾಡಲು ನಿರ್ಧರಿಸಿದೆ.
ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆಯ (NACO) ಇತ್ತೀಚಿನ ವರದಿಗಳ ಪ್ರಕಾರ, ದೇಶದಲ್ಲೇ ಅತಿ ಹೆಚ್ಚು ಹೆಚ್ ಐವಿ ಪೀಡಿತರಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದೆ. ಪ್ರಸ್ತುತ ರಾಜ್ಯದಲ್ಲಿ ಸುಮಾರು 2.60 ಲಕ್ಷ ಜನರು ಈ ಸೋಂಕಿನೊಂದಿಗೆ ಜೀವಿಸುತ್ತಿದ್ದು, ಅವರಲ್ಲಿ 2.05 ಲಕ್ಷಕ್ಕೂ ಹೆಚ್ಚು ಮಂದಿ ಆಂಟಿ ರೆಟ್ರೋ ವೈರಲ್ ಥೆರಪಿ (ART) ಪಡೆಯುತ್ತಿದ್ದಾರೆ.
ಇವೆಲ್ಲದರ ನಡುವೆ 18 ರಿಂದ 35 ವರ್ಷದ ಯುವಜನತೆಯಲ್ಲಿ ಸೋಂಕು ಅತ್ಯಂತ ವೇಗವಾಗಿ ಹರಡುತ್ತಿರುವುದು ಆರೋಗ್ಯ ಇಲಾಖೆಯ ನಿದ್ದೆಗೆಡಿಸಿದೆ. ಕೇವಲ 18 ರಿಂದ 25 ವರ್ಷ ವಯೋಮಾನದ ಸುಮಾರು 7 ಸಾವಿರ ಯುವಕ-ಯುವತಿಯರಲ್ಲಿ ಸೋಂಕು ದೃಢಪಟ್ಟಿರುವುದು ಕಳವಳಕ್ಕೆ ಕಾರಣವಾಗಿದೆ. ಇದಕ್ಕಿಂತಲೂ ಆತಂಕಕಾರಿ ವಿಷಯವೆಂದರೆ, ರಾಜ್ಯದಲ್ಲಿ ಸುಮಾರು 54 ಸಾವಿರ ಮಂದಿಗೆ ತಮಗೆ ಸೋಂಕು ತಗಲಿದೆ ಎಂಬ ಸುಳಿವೇ ಇಲ್ಲದೆ ಜೀವನ ನಡೆಸುತ್ತಿದ್ದಾರೆ.
ಪರೀಕ್ಷೆಗೆ ಒಳಗಾಗಲು ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಮುಜುಗರ ಅಥವಾ ಭಯವಾಗಬಾರದು ಎಂಬ ಉದ್ದೇಶದಿಂದ ಇಲಾಖೆ ಸಂಪೂರ್ಣ ಗೌಪ್ಯತೆಗೆ ಆದ್ಯತೆ ನೀಡಿದೆ. ಇದಕ್ಕಾಗಿ ‘ನಿಮ್ಮ ಹೆಚ್ ಐವಿ ಸ್ಥಿತಿ ತಿಳಿದುಕೊಳ್ಳಿ’ ಎಂಬ ವಿಶೇಷ ಕ್ಯೂಆರ್ ಕೋಡ್ (QR Code) ಆಧಾರಿತ ‘ಸ್ವಯಂ ಅಪಾಯ ಮೌಲ್ಯಮಾಪನ’ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತಿದೆ. ವಿದ್ಯಾರ್ಥಿಗಳು ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ತಮ್ಮ ಗೌಪ್ಯತೆಯನ್ನು ಕಾಯ್ದುಕೊಳ್ಳುವ ಮೂಲಕವೇ ಸ್ವತಃ ತಮ್ಮ ಆರೋಗ್ಯದ ಅಪಾಯದ ಮಟ್ಟವನ್ನು ಸುಲಭವಾಗಿ ಪರಿಶೀಲಿಸಿಕೊಳ್ಳಬಹುದು.
ಯುವ ಪೀಳಿಗೆಯ ಆರೋಗ್ಯ ಸುರಕ್ಷತೆಗಾಗಿ ಆರಂಭಿಸಲಾಗುತ್ತಿರುವ ಈ ಮಹತ್ವದ ಅಭಿಯಾನಕ್ಕೆ ರಾಜ್ಯದ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರು, ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳು ಪೂರ್ಣ ಸಹಕಾರ ನೀಡಬೇಕೆಂದು ಆರೋಗ್ಯ ಇಲಾಖೆಯ ಮುಖ್ಯಸ್ಥರು ಕರೆ ನೀಡಿದ್ದಾರೆ.






Any questions related to ರಾಜ್ಯಾದ್ಯಂತ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಐವಿ HIV ಪರೀಕ್ಷೆ ನಡೆಸಲು ತೀರ್ಮಾನ!?