Home » ಲೈವ್ ನ್ಯೂಸ್ » ಎಸ್ಸಿ, ಎಸ್ಟಿ ಯುವಕರಿಗೆ ಉಚಿತ ಲಘು-ಭಾರಿ ವಾಹನ ಚಾಲನಾ ತರಬೇತಿ: ಅರ್ಜಿ ಆಹ್ವಾನ

ಎಸ್ಸಿ, ಎಸ್ಟಿ ಯುವಕರಿಗೆ ಉಚಿತ ಲಘು-ಭಾರಿ ವಾಹನ ಚಾಲನಾ ತರಬೇತಿ: ಅರ್ಜಿ ಆಹ್ವಾನ

Facebook
X
WhatsApp
Telegram

ಕೊಪ್ಪಳ.13.ಜೂನ್.26: ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ (ಎಸ್‌ಸಿ) ಹಾಗೂ ಪರಿಶಿಷ್ಟ ಪಂಗಡ (ಎಸ್‌ಟಿ) ಸಮುದಾಯದ ನಿರುದ್ಯೋಗಿ ಯುವಕ-ಯುವತಿಯರಿಗೆ ಉಚಿತ ಲಘು ಮತ್ತು ಭಾರಿ ವಾಹನ ಚಾಲನಾ ತರಬೇತಿ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.


ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ಕೌಶಲ್ಯ ಮಿಷನ್, ಕೊಪ್ಪಳ ಇವರ ಸಹಯೋಗದಲ್ಲಿ 30 ದಿನಗಳ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ತರಬೇತಿಯೊಂದಿಗೆ ಪ್ರಾದೇಶಿಕ ಸಾರಿಗೆ ಕಚೇರಿಯಿಂದ ಚಾಲನಾ ಪರವಾನಗಿ (ಡಿಎಲ್) ಪಡೆಯಲು ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ತರಬೇತಿ ಅವಧಿಯಲ್ಲಿ ಉಚಿತ ವಸತಿ ಹಾಗೂ ಊಟದ ವ್ಯವಸ್ಥೆಯೂ ಇರಲಿದೆ.


ಶಿಗ್ಗಾಂವಿಯ ಗಂಗಿಬಾವಿ ರಸ್ತೆಯಲ್ಲಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಪ್ರಾದೇಶಿಕ ತರಬೇತಿ ಕೇಂದ್ರ ಹಾಗೂ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಪ್ರಾದೇಶಿಕ ತರಬೇತಿ ಕೇಂದ್ರಗಳಲ್ಲಿ ತರಬೇತಿ ನಡೆಯಲಿದೆ. ಭಾರಿ ವಾಹನ ಚಾಲನಾ ತರಬೇತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 20 ರಿಂದ 40 ವರ್ಷದೊಳಗಿನವರಾಗಿದ್ದು, ಕನಿಷ್ಠ ಒಂದು ವರ್ಷದ ಅನುಭವವಿರುವ ಲಘು ವಾಹನ ಚಾಲನಾ ಪರವಾನಗಿ ಹೊಂದಿರಬೇಕು. ಲಘು ವಾಹನ ಚಾಲನಾ ತರಬೇತಿಗೆ 18 ರಿಂದ 40 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಅಥವಾ ಜನ್ಮದಿನಾಂಕ ಹೊಂದಿರುವ ಅಂಕಪಟ್ಟಿ, ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ನೇರವಾಗಿ ತರಬೇತಿ ಕೇಂದ್ರಗಳಿಗೆ ಅರ್ಜಿ ಸಲ್ಲಿಸಬೇಕು.


ಹೆಚ್ಚಿನ ಮಾಹಿತಿಗಾಗಿ 9449925367, 9663653500, 9449971416 ಹಾಗೂ 7996865758 ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು. ಅಲ್ಲದೆ ಇಮೇಲ್ dsdokoppal@gmail.com ಅಥವಾ 08539-225901 ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology