Home » ಲೈವ್ ನ್ಯೂಸ್ » ಪಿಯು ಮೌಲ್ಯಮಾಪನ ಬಹಿಷ್ಕಾರ: ಪ್ರಾಂಶುಪಾಲರ, ಉಪನ್ಯಾಸಕರ ಸಂಘದ ಸಭೆಯಲ್ಲಿ ನಿರ್ಧಾರ

ಪಿಯು ಮೌಲ್ಯಮಾಪನ ಬಹಿಷ್ಕಾರ: ಪ್ರಾಂಶುಪಾಲರ, ಉಪನ್ಯಾಸಕರ ಸಂಘದ ಸಭೆಯಲ್ಲಿ ನಿರ್ಧಾರ

Facebook
X
WhatsApp
Telegram

ಮಂಗಳೂರು.17.ಮಾರ್ಚ್.26: ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಜವಾಬ್ದಾರಿಯನ್ನು ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ತರುವುದನ್ನು ವಿರೋಧಿಸಿ ದ್ವಿತೀಯ ಪಿ.ಯು. ಪರೀಕ್ಷೆಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಅನಿರ್ದಿಷ್ಟಾವಧಿವರೆಗೆ ಬಹಿಷ್ಕರಿಸಲು ದಕ್ಷಿಣ ಕನ್ನಡ ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ವಿರೋಧ್ ಮಾಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ, ಉಪನ್ಯಾಸಕರ ಸಂಘ, ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ, ಅತಿಥಿ ಉಪನ್ಯಾಸಕರ ಸಂಘ ಹಾಗೂ ವಿವಿಧ ವಿಷಯಗಳ ಉಪನ್ಯಾಸಕರ ಸಂಘಗಳ ಪದಾಧಿಕಾರಿಗಳು ಈ ಕುರಿತು ಇಲ್ಲಿ ಸೋಮವಾರ ವಿಶೇಷ ತುರ್ತು ಸಭೆ ನಡೆಸಿ ಚರ್ಚಿಸಿದ್ದು, ಮೌಲ್ಯಮಾಪನ ಬಹಿಷ್ಕರಿಸುವ ಕುರಿತು ಒಕ್ಕೊರಲ ನಿರ್ಣಯ ಕೈಗೊಂಡರು.

‘ಪದವಿಪೂರ್ವ ಶಿಕ್ಷಣ ಇಲಾಖೆಯನ್ನು ಜಿಲ್ಲಾ ಪಂಚಾಯಿತಿಗೆ ವಹಿಸುವುದು ಪಿ.ಯು. ಉಪನ್ಯಾಸಕರ ಹಕ್ಕುಗಳ ಮೇಲಿನ ಹಸ್ತಕ್ಷೇಪ ನಡೆಸಿದಂತೆ. ಇದು ಉಪನ್ಯಾಸಕರ ಹಕ್ಕುಗಳ ಉಲ್ಲಂಘನೆ. ಪಿ.ಯು. ಕಾಲೇಜಿಗಳ ಎಲ್ಲಾ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಗಂಭೀರವಾಗಿ ಪರಿಗಣಿಸಿ ಮೌಲ್ಯಮಾಪನ ಬಹಿಷ್ಕಾರವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಬೇಡಿಕೆಗಳು ಈಡೇರುವವರೆಗೆ ಮೌಲ್ಯಮಾಪನ ಮಾಡಬಾರದು. ಈ ಕುರಿತು ರಾಜ್ಯಮಟ್ಟದ ಸಂಘಗಳು ಕೈಗೊಳ್ಳುವ ನಿರ್ಣಯಕ್ಕೆ ಬದ್ಧರಾಗಿರಬೇಕು’ ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಈ ಮುಷ್ಕರವನ್ನು ಯಶಸ್ವಿಗೊಳಿಸಲು ಪ್ರತಿ ಮೌಲ್ಯಮಾಪನ ಕೇಂದ್ರಕ್ಕೆ ಅನ್ವಯಿಸುವಂತೆ ಸಮನ್ವಯ ಸಮಿತಿಗಳನ್ನು ಸಭೆಯಲ್ಲಿ ರಚಿಸಲಾಯಿತು. ಪ್ರತಿಭಟನೆಯನ್ನು ಯಶಸ್ವಿಗೊಳಿಸಲು ವಿವಿಧ ಸಂಘಟನೆಗಳ ಸಹಕಾರ ಕೋರಲು ನಿರ್ಧರಿಸಲಾಯಿತು.

‘ಪದವಿ ಪೂರ್ವ ಶಿಕ್ಷಣ ಇಲಾಖೆಯ ಜವಾಬ್ದಾರಿಯನ್ನು ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ತರುವುದನ್ನು ಕೈಬಿಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆವು. ಸರ್ಕಾರವು ಈ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಇದೇ 20ರಿಂದ ಆರಂಭವಾಗುವ ಮೌಲ್ಯಮಾಪನ ಕಾರ್ಯವನ್ನು ಬಹಿಷ್ಕರಿಸಿ ಪ್ರತಿಭಟಿಸುವ ಬಗ್ಗೆಯೂ ಮೊದಲೇ ಮಾಹಿತಿ ನೀಡಿದ್ದೆವು. ನಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸದ ಕಾರಣ ಈ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ’ ಎಂದು ಸಂಘದ ಪ್ರಮುಖರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ನವೀನ್ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಂಘದ ಕಾರ್ಯದರ್ಶಿ ಮಮತಾ, ಖಜಾಂಚಿ ಆದರ್ಶ ಚೊಕ್ಕಾಡಿ, ರಾಜ್ಯ ಪ್ರಾಂಶುಪಾಲರ ಸಂಘದ ಕಾರ್ಯದರ್ಶಿ ಜಯಾನಂದ ಸುವರ್ಣ, ಉಪನ್ಯಾಸಕರ ಸಂಘದ ಅಧ್ಯಕ್ಷ ಹರಿಪ್ರಕಾಶ್ ಬೈಲಾಡಿ, ಕಾರ್ಯಾಧ್ಯಕ್ಷ ಚಂದ್ರನಾಥ ಎಂ., ದಕ್ಷಿಣ ಕನ್ನಡ ಜಿಲ್ಲಾ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಗೌರವಾಧ್ಯಕ್ಷ ವಿಠಲ ಎ., ದಕ್ಷಿಣ ಕನ್ನಡ ಜಿಲ್ಲಾ ಅನುದಾನಿತ ಕಾಲೇಜುಗಳ ನೌಕರರ ಸಂಘದ ಅಧ್ಯಕ್ಷ ಸೋಮಶೇಖರ್ ನಾಯಕ್, ಶಾಲಾ ಶಿಕ್ಷಣ ಇಲಾಖೆಯ ನೌಕರರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಪ್ರೇಮನಾಥ ಶೆಟ್ಟಿ, ಪ್ರಾಂಶುಪಾಲರ ಸಂಘದ ಮಾಜಿ ಅಧ್ಯಕ್ಷರಾದ ಗಂಗಾಧರ ಆಳ್ವ, ಹಿರಿಯ ಪ್ರಾಂಶುಪಾಲರಾದ ಜಯಶ್ರೀ ಹಾಗೂ ವಿವಿಧ ವಿಷಯವಾರು ಸಂಘಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸೇರಿ 250ಕ್ಕೂ ಹೆಚ್ಚು ಮಂದಿ ಸಭೆಯಲ್ಲಿ ಭಾಗವಹಿಸಿದ್ದರು.

ಸಭೆಯಲ್ಲಿ ಕರ್ನಾಟಕ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳ ಆಡಳಿತ ಮಂಡಳಿಗಳ ಸಂಘ (ಕುಪ್ಮಾ) ಹಾಗೂ ನೊಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಸಂಘ (ರುಪ್ಸಾ) ಪ್ರಧಾನ ಪ್ರತಿನಿಧಿ ಮಂಜುನಾಥ ರೇವಣಕರ್ ಹಾಗೂ ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಪದ್ಮಪ್ರಭಾ ಇಂದ್ರ ಭಾಗವಹಿಸಿ ಪಿ.ಯು. ಉಪನ್ಯಾಸಕರ ನಿರ್ಧಾರಕ್ಕೆ ಬೆಂಬಲ ಸೂಚಿಸಿದರು‌.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology