Home » ಲೈವ್ ನ್ಯೂಸ್ » ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಸರ್ಕಾರ ಮಹತ್ವದ ಹೆಜ್ಜೆ

ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಸರ್ಕಾರ ಮಹತ್ವದ ಹೆಜ್ಜೆ

Facebook
X
WhatsApp
Telegram

ಬೆಂಗಳೂರು.17.ಮಾರ್ಚ್.26: ರಾಜ್ಯ ಸರ್ಕಾರ ಇನ್ಮುಂದೆ ಅವಧಿ ಮುಕ್ತಾಯಗೊಂಡಿರುವ ಮತ್ತು ಮುಕ್ತಾಯದ ಹಂತದಲ್ಲಿರುವ ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಈ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ವಿಧಾನ ಪರಿಷತ್ತಿನಲ್ಲಿ ಅಧಿಕೃತ ಮಾಹಿತಿ ತಿಳಿಸಿದ್ದಾರೆ.

ರಾಜ್ಯದ ಒಟ್ಟು 5,686 ಗ್ರಾಮ ಪಂಚಾಯಿತಿಗಳ ಅವಧಿಯು ಜನವರಿ, ಫೆಬ್ರವರಿ ಮತ್ತು ಮಾರ್ಚ್ 2026ರ ಒಳಗೆ ಪೂರ್ಣಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ 2026-31ರ ಸಾಲಿನ ಸಾರ್ವತ್ರಿಕ ಚುನಾವಣೆ ನಡೆಸಲು ಅಗತ್ಯವಿರುವ ಎಲ್ಲಾ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ.ಆಡಳಿತಾತ್ಮಕ ಶೂನ್ಯತೆ (Administrative Vacuum) ಉಂಟಾಗದಂತೆ ತಡೆಯಲು, ಅವಧಿ ಮುಗಿದ ಪಂಚಾಯಿತಿಗಳಿಗೆ ನಿಯಮಾನುಸಾರ ಆಡಳಿತಾಧಿಕಾರಿಗಳನ್ನು ನೇಮಿಸಲು ನಿರ್ದೇಶನ ನೀಡಲಾಗಿದೆ.

ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ವಿಳಂಬವೇಕೆ?

ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳ ಅವಧಿ ಜೂನ್ 2021ಕ್ಕೇ ಮುಕ್ತಾಯಗೊಂಡಿದ್ದರೂ, ಚುನಾವಣೆ ವಿಳಂಬವಾಗಲು ಪ್ರಮುಖ ಕಾರಣಗಳನ್ನು ಸರ್ಕಾರ ಸ್ಪಷ್ಟಪಡಿಸಿದೆ:

ಕೋವಿಡ್ ಸಾಂಕ್ರಾಮಿಕ: 2021ರಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಚುನಾವಣೆ ನಡೆಸಲು ಸಾಧ್ಯವಾಗಿರಲಿಲ್ಲ.

ಸೀಮಾ ನಿರ್ಣಯ: ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗದ ಶಿಫಾರಸ್ಸಿನಂತೆ ಕ್ಷೇತ್ರಗಳ ಮರು ವಿಂಗಡಣೆ ಮಾಡಲಾಗಿದೆ.

ನಗರ ಸ್ಥಳೀಯ ಸಂಸ್ಥೆಗಳಾಗಿ ಪರಿವರ್ತನೆ: ಕೆಲವು ಗ್ರಾಮ ಪಂಚಾಯಿತಿಗಳು ಪಟ್ಟಣ ಪಂಚಾಯಿತಿ ಅಥವಾ ಪುರಸಭೆಗಳಾಗಿ ಮೇಲ್ದರ್ಜೆಗೇರಿರುವುದರಿಂದ ಕ್ಷೇತ್ರಗಳ ಮರು ಹೊಂದಾಣಿಕೆ ಪ್ರಕ್ರಿಯೆ ನಡೆದಿದೆ.

ಮೀಸಲಾತಿ ಪ್ರಕ್ರಿಯೆ: ಪ್ರಸ್ತುತ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ನಿಗದಿಪಡಿಸುವ ಪ್ರಕ್ರಿಯೆ ಜಾರಿಯಲ್ಲಿದ್ದು, ಇದು ಪೂರ್ಣಗೊಂಡ ತಕ್ಷಣ ಚುನಾವಣೆ ನಡೆಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ಅಭಿವೃದ್ಧಿ ಕೆಲಸಗಳಿಗೆ ಅಡ್ಡಿಯಿಲ್ಲ
ಚುನಾವಣೆ ನಡೆಯದ ಕಾರಣ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸಗಳಿಗೆ ತೊಂದರೆಯಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಸರ್ಕಾರ, ಸದ್ಯ ನೇಮಕಗೊಂಡಿರುವ ಆಡಳಿತಾಧಿಕಾರಿಗಳು ಪಂಚಾಯಿತಿಗಳ ಎಲ್ಲಾ ಅಧಿಕಾರ ಮತ್ತು ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದಾರೆ. ಆದ್ದರಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology