ಬೀದರ.25.ಜನವರಿ.26:- ಮಾಹಿತಿ ಬೆರಳ ತುದಿಯಲ್ಲಿ ಸಿಗುವ ಕಾಲವಾಗಿದ್ದರೂ, ಆಳವಾದ ತಿಳುವಳಿಕೆ ಮತ್ತು ವ್ಯಕ್ತಿತ್ವ ವಿಕಾಸಕ್ಕೆ ಪುಸ್ತಕ ಓದುವಿಕೆಯೇ ನಿಜವಾದ ಮಾರ್ಗವೆಂದು ಅರಣ್ಯ, ಜೀವಿಶಾಸ್ತç ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ತಿಳಿಸಿದರು.
ಅವರು ಶನಿವಾರ ಬೀದರ ನಗರದ ಸಾಯಿ ಸ್ಕೂಲ್ ಆವರಣದಲ್ಲಿ ಆಯೋಜಿಸಲಾದ 3 ದಿನಗಳ ರಾಜ್ಯ ಮಟ್ಟದ ವೀರಲೋಕ ಪುಸ್ತಕ ಸಂತೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪುಸ್ತಕಗಳು ನಮ್ಮ ಚಿಂತನೆಗೆ ದಿಕ್ಕು ನೀಡುತ್ತವೆ, ಮನಸ್ಸಿಗೆ ಶಿಸ್ತನ್ನು ಕೊಡುತ್ತವೆ ಮತ್ತು ಬದುಕಿನ ಮೌಲ್ಯಗಳನ್ನು ಅರಿಯುವ ದೃಷ್ಟಿಯನ್ನು ವಿಸ್ತರಿಸುತ್ತವೆ. ಯುವ ಪೀಳಿಗೆ ಹೆಚ್ಚು ಸಮಯವನ್ನು ಮೊಬೈಲ್ ಮತ್ತು ಪರದೆಗಳ ಮುಂದೆ ಕಳೆಯುತ್ತಿರುವ ಸಂದರ್ಭದಲ್ಲಿ, ದಿನವೂ ಸ್ವಲ್ಪ ಸಮಯವನ್ನು ಓದಿಗೆ ಮೀಸಲಿಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಓದುವ ಸಂಸ್ಕೃತಿ ಬೆಳೆದರೆ ಜ್ಞಾನಸಂಪನ್ನ ಮತ್ತು ಜವಾಬ್ದಾರಿಯುತ ಸಮಾಜ ನಿರ್ಮಾಣ ಸಾಧ್ಯವೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿವಿಧ ಮಳಿಗೆಗಳನ್ನು ವೀಕ್ಷಿಸಿ, ವಚನ ಸಾಹಿತ್ಯ, ಡಾ. ಬಾಬಾಸಾಹೇಬ್ ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ಭಗವದ್ಗೀತಾ, ಕುವೆಂಪು ಸೇರಿದಂತೆ ಹಲವಾರು ಮಹನೀಯರ ಕೃತಿಗಳನ್ನು ಖರೀದಿಸಿ ಪುಸ್ತಕ ಸಂಸ್ಕೃತಿಗೆ ಪ್ರೋತ್ಸಾಹ ನೀಡಿದರು.
ಈ ಸಂದರ್ಭದಲ್ಲಿ ಬೀದರ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.






Any questions related to ವ್ಯಕ್ತಿತ್ವ ವಿಕಾಸಕ್ಕೆ ಪುಸ್ತಕ ಓದುವಿಕೆಯೇ ನಿಜವಾದ ಮಾರ್ಗ-ಸಚಿವ ಈಶ್ವರ ಬಿ.ಖಂಡ್ರೆ?