ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಸೂಚನೆ
ಔರಾದ.11.ಜನವರಿ.26: ಗ್ರಾಮ ಸಂಚಾರ ನಿಮಿತ್ಯ ಪ್ರತಿಯೊಂದು ಗ್ರಾಮದ ಎಲ್ಲ ಸರ್ಕಾರಿ ಶಾಲೆಗಳಿಗೆ ಒಳ್ಳೆಯ ಕಟ್ಟಡ ಮತ್ತು ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಿ ಗುಣಮಟ್ಟದ ಶಿಕ್ಷಣ ಕಲ್ಪಿಸಲು ಪ್ರಯತ್ನಿಸುತ್ತಿದ್ದು, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿಯನ್ನು ಹೆಚ್ಚಿಸಲು ಶಾಲೆಯ ಶಿಕ್ಷಕರು ಮತ್ತು ಇಲಾಖೆಯ ಅಧಿಕಾರಿಗಳು ಶ್ರಮಿಸಬೇಕೆಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಶಾಲೆಯ ಮುಖ್ಯಗುರುಗಳು ಮತ್ತು ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.
ಗ್ರಾಮ ಸಂಚಾರದ ನಿಮಿತ್ತ ಜ.8ರಂದು ವಡಗಾಂವ ಹೋಬಳಿ ವ್ಯಾಪ್ತಿಯ ಖಾಶೆಂಪೂರ(ಬಿ), ಜಂಬಗಿ, ಮಹಾರಾಜವಾಡಿ, ಸೋರಳ್ಳಿ ಸೇರಿದಂತೆ ವಿವಿಧ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲಿಸಿದರು.
ಎಲ್ಲ ಶಿಕ್ಷಕರು ಪ್ರತಿದಿನ ಬರುತ್ತಾರಾ ? ಎಲ್ಲ ತರಗತಿಗಳು ಸರಿಯಾಗಿ ನಡೆಯುತ್ತವೆಯೇ ? ಎಲ್ಲರೂ ಸರಿಯಾಗಿ ಪಾಠ ಮಾಡುತ್ತಾರಾ ? ಶಾಲೆಯಲ್ಲಿ ಕುಡಿಯುವ ನೀರು, ಶೌಚಾಲಯ, ಆಟದ ಮೈದಾನ, ಮಧ್ಯಾಹ್ನದ ಬಿಸಿಯೂಟ ಸರಿಯಾಗಿ ಮಾಡುತ್ತಿದ್ದಾರಾ ? ಎಂದು ಮಕ್ಕಳಿಗೆ ವಿವಿಧ ಪ್ರಶ್ನೆಗಳನ್ನು ಕೇಳಿ ಸರ್ಕಾರಿ ಶಾಲೆಗಳ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು.
ಖಾಶೆಂಪೂರ ಹಾಗೂ ಕೆಲವೊಂದು ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಿರುವುದನ್ನು ಗಮನಿಸಿ, ಮುಖ್ಯಗುರುಗಳಿಂದ ವಿವರಣೆ ಪಡೆದರು. ಮಕ್ಕಳ ಸಂಖ್ಯೆ ಕಡಿಮೆಯಿರುವ ಶಾಲೆಗಳನ್ನು ರಾಜ್ಯ ಸರ್ಕಾರ ಮುಚ್ಚಲು ಹೊರಟಿದೆ. ಶಾಲೆ ಮುಚ್ಚಿದರೆ ವಿದ್ಯಾರ್ಥಿಗಳ ಜೊತೆಗೆ ಶಿಕ್ಷಕರಿಗೂ ತೊಂದರೆಯಾಗುತ್ತದೆ. ಹಾಗಾಗಿ ಎಲ್ಲ ಶಾಲೆಗಳಲ್ಲಿ ಕಡ್ಡಾಯವಾಗಿ ಮಕ್ಕಳ ದಾಖಲಾತಿ ಹೆಚ್ಚಿಸಬೇಕು. ಇದಕ್ಕಾಗಿ ಶಿಕ್ಷಕರು ಗ್ರಾಮದ ಪ್ರತಿ ಮನೆಗೆ ಭೇಟಿ ನೀಡಿ ಪೋಷಕರ ಮನವೊಲಿಸುವ ಕೆಲಸ ಮಾಡಬೇಕೆಂದು ಹೇಳಿದರು.
ಸರ್ಕಾರಿ ಶಾಲೆಗಳಿಗೆ ಉತ್ತಮ ಕಟ್ಟಡಗಳು, ಮೂಲಸೌಕರ್ಯ, ಸ್ಮಾರ್ಟ್ ತರಗತಿಗಳು, ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ, ವಿದ್ಯಾರ್ಥಿವೇತನ ಸೇರಿದಂತೆ ಹಲವು ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತಿದೆ. ಬಡ ಮತ್ತು ಮಧ್ಯಮ ವರ್ಗದವರು ಖಾಸಗಿ ಶಾಲೆಗಳಿಗೆ ಲಕ್ಷಾಂತರ ಖರ್ಚು ಮಾಡುವ ಬದಲು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಬೇಕೆಂದು ಮನವಿ ಮಾಡಿದರು.
ಶಿಕ್ಷಣದ ಅಭಿವೃದ್ಧಿ ನನ್ನ ಮೊದಲನೇ ಆದ್ಯತೆಯಾಗಿದ್ದು, ಶಾಲೆ ಕಾಲೇಜುಗಳ ಅಭಿವೃದ್ಧಿಗೆ ಬೇಕಾದಷ್ಟು ಅನುದಾನ ಕೊಡಲು ಸಿದ್ಧನಿದ್ದೇನೆ. ಶಾಲೆ, ಕಾಲೇಜು ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಏನಾದರೂ ಕೊರತೆಯಿದ್ದರೆ ನನಗೆ ಕೇಳಿ, ಎಲ್ಲವನ್ನು ಒದಗಿಸುತ್ತೇನೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಳಕ್ಕೆ ಪ್ರಯತ್ನಿಸಿ ಎಂದು ಮನವಿ ಮಾಡಿದರು.
ಖಾಶೆಂಪೂರ, ವಡಗಾಂವ, ಜಂಬಗಿ, ಮಹಾರಾಜವಾಡಿ, ವಲ್ಲೇಪೂರ, ಸೋರಳ್ಳಿ, ಕಂದಗೂಳ ಹಾಗೂ ಖಾನಾಪೂರನಲ್ಲಿ ಗ್ರಾಮ ಸಂಚಾರ ನಡೆಸಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ ವಿವಿಧ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಿದರು. ಇದೇ ವೇಳೆ ಗ್ರಾಮಸ್ಥರು, ಸಿಸಿ ರಸ್ತೆ, ಚರಂಡಿ, ಸಮುದಾಯ ಭವನ, ಮಂದಿರಗಳ ಜೀರ್ಣೋದ್ಧಾರ, ಶಾಲೆಗಳಲ್ಲಿ ಹೆಚ್ಚುವರಿ ತರಗತಿ ಕೋಣೆಗಳ ನಿರ್ಮಾಣ, ಸ್ಮಶಾನ ಭೂಮಿ ಸಮಸ್ಯೆ, ಫಾರ್ಮೇಶನ್ ರಸ್ತೆ, ಹೊಸ ಓಣಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು ಸೇರಿದಂತೆ ನಾನಾ ಸಮಸ್ಯೆಗಳ ಬಗ್ಗೆ ಶಾಸಕರ ಗಮನಕ್ಕೆ ತಂದರು. ಎಲ್ಲ ಬೇಡಿಕೆಗಳನ್ನು ಆದ್ಯತೆಗೆ ಅನುಗುಣ ಈಡೇರಿಸುವುದಾಗಿ ಶಾಸಕರು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸಿಸಿ ರಸ್ತೆ, ಶಾಲೆ ಉನ್ನತೀಕರಣ ಕಾಮಗಾರಿ, ಹೈ ಮಾಸ್ಟ್ ವಿದ್ಯುತ್ ದೀಪ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರರಾದ ಮಹೇಶ ಪಾಟೀಲ, ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಪಾಟೀಲ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಗಾಯತ್ರಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇಮಲಪ್ಪ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಮಾರುತಿ ರಾಠೋಡ, ಎಡಿಎಲ್ಆರ್ ರಾಜಶ್ರೀ, ಜೆಸ್ಕಾಂ ಎಇಇ ರವಿ ಕಾರಬಾರಿ, ಸಣ್ಣ ನೀರಾವರಿ ಇಲಾಖೆಯ ಸಂಗಮೇಶ ಖಳೂರೆ, ಮುಖಂಡರಾದ ಧೊಂಡಿಬಾ ನರೋಟೆ, ಶಿವಾಜಿರಾವ ಪಾಟೀಲ ಮುಂಗನಾಳ, ಸಚಿನ ರಾಠೋಡ, ಖಂಡೋಬಾ ಕಂಗಟೆ, ಪ್ರಕಾಶ ಮೇತ್ರೆ, ಶಿವರಾಜ ಖಳೂರೆ, ಮಲ್ಲಪ್ಪ ನೇಳಗೆ, ಪ್ರಕಾಶ ಜೀರ್ಗೆ, ನೌನಾಥ, ಸಂದೀಪ ಪಾಟೀಲ, ಪ್ರದೀಪ ಪವಾರ, ಬಾಬುರಾವ ಮಸ್ಕಲೆ, ಅರವಿಂದ ಟೊಣಪೆ, ಪ್ರಕಾಶ ಖಾನಾಪೂರ, ವಿಜಯ ನಾಗೂರ, ಮಂಜು ಸ್ವಾಮಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.






Any questions related to ಮುಂದುವರೆದ ಶಾಸಕ ಪ್ರಭು ಚವ್ಹಾಣ ಗ್ರಾಮ ಸಂಚಾರ?