ಬೀದರ್.04.ಜನವರಿ.26: ಡೀಸೆಲ್ ಬೆಲೆ ಏರಿಕೆ ಹಾಗೂ ನಿರ್ವಹಣಾ ವೆಚ್ಚದ ಹೊರೆಯಿಂದ ಕಂಗಾಲಾಗಿರುವ ಜಿಲ್ಲೆಯ ಬೋರ್ವೆಲ್ ಮಾಲೀಕರು, ದರ ಪರಿಷ್ಕರಣೆಗೆ ಆಗ್ರಹಿಸಿ ಹಮ್ಮಿಕೊಂಡಿರುವ ಪ್ರತಿಭಟನೆಯು ಶನಿವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರವು ದಶಕದ ಹಿಂದಿನ ಹಳೆಯ ದರವನ್ನೇ ಮುಂದುವರಿಸುತ್ತಿರುವುದರಿಂದ ಉದ್ಯಮ ನಡೆಸುವುದು ಅಸಾಧ್ಯವಾಗಿದೆ ಎಂದು ಮಾಲೀಕರು ಅಳಲು ತೋಡಿಕೊಂಡಿದ್ದಾರೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಉಕ್ರೇನ್ ಯುದ್ಧದ ಪರಿಣಾಮವಾಗಿ ಬೋರ್ವೆಲ್ ಕೊರೆಯಲು ಬಳಸುವ ಪ್ರಮುಖ ಬಿಡಿಭಾಗಗಳ ಬೆಲೆ ಗಗನಕ್ಕೇರಿದೆ. ಯಂತ್ರೋಪಕರಣಗಳ ಆಮದು ವೆಚ್ಚ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಇದರ ಜೊತೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ನಿರಂತರವಾಗಿ ಹೆಚ್ಚುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಸರ್ಕಾರವು ಕಳೆದ 10 ವರ್ಷಗಳಿಂದ ಬೋರ್ವೆಲ್ ಕೊರೆಯಲು ಒಂದೇ ದರವನ್ನು ನಿಗದಿಪಡಿಸಿದೆ. ಪ್ರಸ್ತುತ ಸರ್ಕಾರವು ಪ್ರತಿ ಮೀಟರ್ಗೆ ಕೇವಲ 364 ರೂಪಾಯಿ ನೀಡುತ್ತಿದೆ. ಆದರೆ, ಪ್ರಸ್ತುತ ಮಾರುಕಟ್ಟೆಯ ಪರಿಸ್ಥಿತಿಯಲ್ಲಿ ಒಂದು ಮೀಟರ್ ಕೊರೆಯಲು ನಮಗೆ ಕನಿಷ್ಠ 450 ರೂಪಾಯಿಗಳಿಗಿಂತಲೂ ಅಧಿಕ ಖರ್ಚು ಬರುತ್ತಿದೆ. ಇದರಿಂದ ಪ್ರತಿ ಅಡಿಗೂ ನಾವು ನಷ್ಟ ಅನುಭವಿಸುವಂತಾಗಿದೆ” ಎಂದು ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆದ್ದರಿಂದ ಸರ್ಕಾರವು ಕೂಡಲೇ ಪ್ರತಿ ಮೀಟರ್ ಕೊರೆಯುವ ದರವನ್ನು ತಕ್ಷಣವೇ 550 ರೂಪಾಯಿಗಳಿಗೆ ಏರಿಸಬೇಕು, ಇಂಧನ ಬೆಲೆಗೆ ಅನುಗುಣವಾಗಿ ದರ ಪರಿಷ್ಕರಣೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಜಿಲ್ಲೆಯ ಪ್ರಮುಖ ಬೋರ್ವೆಲ್ ಮಾಲೀಕರಾದ ಮಹಾದೇವ ಕುಮಾರ್, ಬಸವರಾಜ ಗೇವಾರೆ, ಲಕ್ಷ್ಮರಾವ್ ಕಾಂಬಳೆ, ಕಲ್ಯಾಣರಾವ್ ಬಿರಾದರ್, ರಾಜರೆಡ್ಡಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.






Any questions related to ದರ ಪರಿಷ್ಕರಣೆಗೆ ಆಗ್ರಹಿಸಿ ಬೋರ್ವೆಲ್ ಮಾಲೀಕರ ಪ್ರತಿಭಟನೆ | ಸತತ 3ನೇ ದಿನವೂ ಸ್ತಬ್ಧವಾದ ಯಂತ್ರಗಳು?