ಬೆಂಗಳೂರು.02.ಜನವರಿ.26.: ಇಂದಿನ ಸಚಿವ ಸಂಪುಟ ಸಭೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಹೊಸ ವರ್ಷದ ಮೊದಲ ರಾಜ್ಯ ಸಚಿವ ಸಂಪುಟ ಸಭೆ ನಡೆದಿದೆ. ಈ ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಸಂಪುಟ ಸಚಿವರು ಭಾಗಿಯಾಗಿದ್ರು. ಸಹೋದ್ಯೋಗಿಗಳಿಗೆ ಹೊಸ ವರ್ಷದ ಶುಭಕೋರಿದ ಸಿಎಂ, ಕೆಲ ಆಡಳಿತಾತ್ಮಕ ವಿಚಾರದ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದಾರೆ.
ಗುಂಡಿನ ಸದ್ದು, ‘ಕೋಗಿಲು’ ಇಕ್ಕಟ್ಟು
ಹೊಸ ವರ್ಷದ ಆರಂಭದಲ್ಲೇ ಬಳ್ಳಾರಿಯನ್ನೇ ನಡುಗಿಸಿದ ಗುಂಡಿನ ಸದ್ದು, ಸರ್ಕಾರಕ್ಕೆ ತಲೆಬಿಸಿ ತಂದಿದೆ. ಜೊತೆಗೆ ಕೋಗಿಲು ಲೇಔಟ್ ನೆಲಸಮ ವಿಚಾರ ಕೂಡ ಸಿದ್ದು ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿದೆ. ಇವುಗಳ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದೆ.
ಬಳ್ಳಾರಿ ಗಲಭೆ ಬಗ್ಗೆಯೂ ಗಂಭೀರ ಚರ್ಚೆ
ಕ್ಯಾಬಿನೆಟ್ನಲ್ಲಿ ಬಳ್ಳಾರಿ ಘರ್ಷಣೆ ಬಗ್ಗೆ ಪ್ರಸ್ತಾಪವಾಗಿದೆ. ಸಣ್ಣ ಪ್ರಕರಣ ದೊಡ್ಡ ಮಟ್ಟಕ್ಕೆ ಹೋಗ್ತಿದೆ. ಪಕ್ಷದ ಕಾರ್ಯಕರ್ತನ ಪ್ರಾಣ ಹೋಗಿದೆ. ಬಿಜೆಪಿಯವರೇ ಇದನ್ನ ದೊಡ್ಡದು ಮಾಡ್ತಿದ್ದಾರೆ ಎಂಬ ಚರ್ಚೆ ನಡೆದಿದೆ ಎನ್ನಲಾಗ್ತಿದೆ.
ಘರ್ಷಣೆ ದೊಡ್ಡ ಮಟ್ಟಕ್ಕೆಹೋಗಿದ್ದು ಸರಿಯಲ್ಲ. ಈ ವಿಚಾರ ಬೆಳೆಯೋದಕ್ಕೆ ಬಿಡಬಾರದಿತ್ತು ಎಂದು ಕೆಲವು ಸಚಿವರು ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದಾರೆ. ಈ ವೇಳೆ ಸಿಎಂ ಮಾತಾಡಿದ್ದು, ನಾನು ಜಮೀರ್, ಡಿಜಿ ಹಾಗೂ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದ್ದೇನೆ. ಪರಿಸ್ಥಿತಿ ಹತೋಟಿಗೆ ತರುವಂತೆ ಸೂಚಿಸಿದ್ದೇನೆ ಎಂದಿದ್ದಾರೆ.
ಕೋಗಿಲು ಲೇಔಟ್ ವಿವಾದದ ಬಗ್ಗೆಯೂ ಚರ್ಚೆ
ರಾಜ್ಯ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಿರುವ ಕೋಗಿಲು ಲೇಔಟ್ ಸರ್ಕಾರಿ ಜಾಗ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಯಾಬಿನೆಟ್ನಲ್ಲಿ ಚರ್ಚೆ ನಡೆದಿದೆ. ಕೋಗಿಲು ಲೇಔಟ್ ನಲ್ಲಿ ಹೆಚ್ಚಿನ ಭದ್ರತೆಗಾಗಿ ಹೆಚ್ಚುವರಿ ಪೋಲಿಸರ ನಿಯೋಜನೆಗೆ ಸೂಚಿಸಲಾಗಿದೆ.
ಕ್ಯಾಬಿನೆಟ್ ನಿರ್ಧಾರದತ್ತ ಕೋಗಿಲು ನಿವಾಸಿಗಳ ಚಿತ್ತ ನೆಟ್ಟಿದೆ. ಯಾವುದೇ ರೀತಿ ಗಲಾಟೆ ಪ್ರತಿಭಟನೆ ನಡೆಸದಂತೆ ನಿಗಾವಹಿಸಲು 30ಕ್ಕೂ ಹೆಚ್ಚು ಪೊಲಿಸರನ್ನ ನಿಯೋಜಿಸಲಾಗಿದೆ.
ಮರ್ಯಾದಾ ಹತ್ಯೆ ತಡೆ ಬಗ್ಗೆಯೂ ಚರ್ಚೆ
ಮರ್ಯಾದಾ ಹತ್ಯೆ ಬಗ್ಗೆಯೂ ಕ್ಯಾಬಿನೆಟ್ನಲ್ಲಿ ಗಂಭೀರ ಚರ್ಚೆ ನಡೆದಿತ್ತು. ಮರ್ಯಾದಾ ಹತ್ಯೆ ತಡೆಗೆ ಇನ್ನಷ್ಟು ಕಠಿಣ ಕ್ರಮಕ್ಕೆ ಸರ್ಕಾರ ಗಂಭೀರ ಚರ್ಚೆ ನಡೆಸಿದೆ. ಸಚಿವರಿಗೆಲ್ಲಾ ಮರ್ಯಾದಾ ಹತ್ಯೆ ಕರಡು ಬಿಲ್ ಕೊಟ್ಟು ಚರ್ಚೆ ನಡೆಸಿದ್ದು, ತಪ್ಪಿಗೆ ಶಿಕ್ಷೆ ಪ್ರಮಾಣ ಕುರಿತು ಮಾತುಕತೆ ನಡೆದಿದೆ.






Any questions related to ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಡೆದಿದ ಚರ್ಚೆಗಳು.?