ಬೆಂಗಳೂರು-ಹೈದರಾಬಾದ್ ವಂದೇ ಭಾರತ್ ರೈಲಿಗೆ ಬೆಂಗಳೂರು ನಗರದ ಯಶವಂತಪುರ ಮತ್ತು ಹೈದರಾಬಾದ್ ಸಮೀಪದ ಕಾಚಿಗುಡ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರವಿದೆ. ಎರಡು ಐಟಿ ನಗರಗಳನ್ನು ಸಂಪರ್ಕಿಸುವ ರೈಲು ಸೇವೆಗೆ ಭಾರೀ ಬೇಡಿಕೆ ಇದೆ. ಈಗ ಈ ರೈಲಿಗೆ ಹಿಂದೂಪುರದಲ್ಲಿ ಪ್ರಾಯೋಗಿಕ ನಿಲುಗಡೆ ನೀಡಲಾಗಿದೆ.
ಡಿಸೆಂಬರ್ 27 ರಿಂದ ಬೆಂಗಳೂರು-ಕಾಚಿಗುಡ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಆಂಧ್ರ ಪ್ರದೇಶದ ಹಿಂದೂಪುರ ನಿಲ್ದಾಣದಲ್ಲಿಯೂ ನಿಲುಗಡೆಯಾಗಲಿದೆ. ರೈಲ್ವೆ ಮಂಡಳಿ 2 ನಿಮಿಷಗಳ ಕಾಲ ಪ್ರಾಯೋಗಿಕ ನಿಲುಗಡೆಗೆ ಅನುಮೋದನೆ ಕೊಟ್ಟಿದೆ.
ರೈಲು ವೇಳಾಪಟ್ಟಿ: ಹಿಂದೂಪುರ ನಿಲ್ದಾಣದಲ್ಲಿ ರೈಲಿನ ಆಗಮನ ಮತ್ತು ನಿರ್ಗಮನದ ವೇಳಾಪಟ್ಟಿ. ರೈಲು ಸಂಖ್ಯೆ 20703 ಕಾಚಿಗುಡ-ಯಶವಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಹಿಂದೂಪುರಕ್ಕೆ ಮಧ್ಯಾಹ್ನ 12:08 ಗಂಟೆಗೆ ತಲುಪಿ, 12:10 ಗಂಟೆಗೆ ಅಲ್ಲಿಂದ ಹೊರಡಲಿದೆ.
ರೈಲು ಸಂಖ್ಯೆ 20704 ಯಶವಂತಪುರ-ಕಾಚಿಗುಡ ವಂದೇ ಭಾರತ್ ಎಕ್ಸ್‌ಪ್ರೆಸ್ ಹಿಂದೂಪುರಕ್ಕೆ ಮಧ್ಯಾಹ್ನ 03:48 ಗಂಟೆಗೆ ಆಗಮಿಸಿ, 03:50 ಗಂಟೆಗೆ ತನ್ನ ಪ್ರಯಾಣ ಮುಂದುವರಿಸಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಈ ಹೊಸ ನಿಲುಗಡೆ ಹಿಂದೂಪುರ ಭಾಗದ ಪ್ರಯಾಣಿಕರಿಗೆ ವೇಗದ ಮತ್ತು ಸುಸಜ್ಜಿತ ಪ್ರಯಾಣದ ಸೌಲಭ್ಯವನ್ನು ಒದಗಿಸುವುದಲ್ಲದೆ, ಈ ಭಾಗದ ಸಂಪರ್ಕ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ ಎಂದು ಇಲಾಖೆ ತಿಳಿಸಿದೆ.
ಯಶವಂತಪುರ-ಕಾಚಿಗುಡ ನಡುವೆ 8 ಬೋಗಿಯ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ನಡೆಸುತ್ತಿತ್ತು. ಆದರೆ ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಕಾರಣ ರೈಲಿನ ಬೋಗಿಯ ಸಂಖ್ಯೆಯನ್ನು ಈ ವರ್ಷದ ಜುಲೈನಲ್ಲಿ 16ಕ್ಕೆ ಏರಿಕೆ ಮಾಡಲಾಗಿತ್ತು. ಈಗ ರೈಲು 14 ಚೇರ್ ಕಾರ್ ಮತ್ತು 2 ಎಕ್ಸಿಕ್ಯುಟಿವ್ ಕ್ಲಾಸ್ ಬೋಗಿಯನ್ನು ಹೊಂದಿದ್ದು, ಒಟ್ಟು 1,128 ಜನರು ಪ್ರಯಾಣಿಸಬಹುದು.
2023ರಲ್ಲಿ ಪ್ರಧಾನಿ ನರೇಂದ್ರ ಮೋದಿ ಯಶವಂತಪುರ-ಕಾಚಿಗುಡ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಗೆ ಹಸಿರು ನಿಶಾನೆ ತೋರಿಸಿದ್ದರು. ಇದು ಕರ್ನಾಟಕದ 3ನೇ ವಂದೇ ಭಾರತ್ ರೈಲು ಸೇವೆಯಾಗಿತ್ತು.
ಬೆಂಗಳೂರು-ಹೈದರಾಬಾದ್ ನಡುವೆ ಸಾಮಾನ್ಯ ರೈಲಿಗಿಂತ 2 ಗಂಟೆ 35 ನಿಮಿಷ ಮುಂಚಿತವಾಗಿ ಈ ರೈಲು ಸಂಚಾತ ನಡೆಸುತ್ತದೆ. ಆದ್ದರಿಂದ ಉಭಯ ಐಟಿ ನಗರದ ನಡುವೆ ಸಂಚಾರ ನಡೆಸುವ ಜನರಿಗೆ ವಂದೇ ಭಾರತ್ ರೈಲು ಸಹಾಯಕವಾಗಿದೆ. ರೈಲಿಗೆ ಬೇಡಿಕೆಯೂ ಹೆಚ್ಚಾಗಿದೆ.
ಯಶವಂತಪುರ-ಕಾಚಿಗುಡ ನಡುವಿನ ಅಂತರ 610 ಕಿ.ಮೀ.ಗಳು. ಈ ವಂದೇ ಭಾರತ್ ರೈಲು 8.30 ತಾಸುಗಳಲ್ಲಿ ಉಭಯ ನಗರವನ್ನು ಸಂಪರ್ಕಿಸುತ್ತದೆ. ರೈಲು ಮೆಹಬೂಬ್ ನಗರ, ಕರ್ನೂಲ್ ಸಿಟಿ, ಅನಂತಪುರ, ಧರ್ಮಾವರಂ ನಿಲ್ದಾಣದಲ್ಲಿ ನಿಲುಗಡೆ ಹೊಂದಿತ್ತು. ಈ ರೈಲು ಕರ್ನಾಟಕಕ್ಕಿಂತ ಆಂಧ್ರ ಪ್ರದೇಶಕ್ಕೆ ಹೆಚ್ಚಿನ ಉಪಯೋಗವಾಗಲಿದೆ ಎಂದು ಟೀಕಿಸಲಾಗಿತ್ತು.
ಈಗ ರೈಲಿಗೆ ಆಂಧ್ರ ಪ್ರದೇಶದ ಹಿಂದೂಪುರದಲ್ಲಿ ಹೊಸ ನಿಲುಗಡೆ ನೀಡುವ ಮೂಲಕ ಮತ್ತಷ್ಟು ಪ್ರಯಾಣಿಕರನ್ನು ಸೆಳೆಯಲು ರೈಲ್ವೆ ಇಲಾಖೆ ಮುಂದಾಗಿದೆ. ಈ ರೈಲು ಸೇವೆಯನ್ನು ದಕ್ಷಿಣ ಮಧ್ಯ ರೈಲ್ವೆ ನಿರ್ವಹಣೆ ಮಾಡುತ್ತದೆ. ಈ ರೈಲು ಗುಂತಕಲ್, ರಾಯಚೂರು, ವಾಡಿ, ಸೇಡಂ ಮೂಲಕ ಸಂಚಾರ ನಡೆಸಿದರೆ ಕರ್ನಾಟಕದ ಜನರಿಗೆ ಹೆಚ್ಚಿನ ಉಪಯೋಗವಾಗಲಿದೆ ಎಂದು ಒತ್ತಾಯಿಸಲಾಗಿತ್ತು. ಆದರೆ ರೈಲಿನ ಮಾರ್ಗ ಬದಲಾವಣೆ ಮಾಡಿಲ್ಲ.






Any questions related to ಬೆಂಗಳೂರು-ಹೈದರಾಬಾದ್ ವಂದೇ ಭಾರತ್ ರೈಲಿಗೆ ಮತ್ತೊಂದು ನಿಲುಗಡೆ?