ಹುಬ್ಬಳ್ಳಿ.02.ಜನವರಿ .26: ಹುಬ್ಬಳ್ಳಿ ತಾಲ್ಲೂಕಿನ ಇನಾಂ ವೀರಾಪುರದಲ್ಲಿ ನಡೆದಿರುವ ಮರ್ಯಾದೆ ಹತ್ಯೆ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಹುಬ್ಬಳ್ಳಿಯಲ್ಲಿ ನಡೆದ ಆರು ತಿಂಗಳ ಗರ್ಭಿಣಿಯ ಮರ್ಯಾದಾ ಹತ್ಯೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಈ ಹಿನ್ನೆಲೆಯಲ್ಲಿ, ಸಿಎಂ ಸಿದ್ದರಾಮಯ್ಯ ರಾಜ್ಯದಲ್ಲಿ ಮರ್ಯಾದಾ ಹತ್ಯೆ ತಡೆಗೆ ಹೊಸ ಕಾನೂನು ಜಾರಿಗೊಳಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ. ಘಟನೆ ನಡೆದ ಗ್ರಾಮದಲ್ಲಿ ಜಿಲ್ಲಾಡಳಿತ ಶಾಂತಿ ಸಭೆ ನಡೆಸಿ, ಸೌಹಾರ್ದತೆ ಕಾಪಾಡಲು ಕ್ರಮ ಕೈಗೊಳ್ಳಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಂಜೆ ಸಚಿವ ಸಂಪುಟ ಸಭೆ ನಡೆಯಲಿದೆ. ಸಭೆಯಲ್ಲಿ ಇನಾಂ ವೀರಾಪುರದಲ್ಲಿ ನಡೆದಿರುವ ಮರ್ಯಾದೆ ಹತ್ಯೆ ಪ್ರಕರಣದ ತನಿಖೆಗಾಗಿ ವಿಶೇಷ ಅಭಿಯೋಜಕರ ನೇಮಕ, ತ್ವರಿತ ನ್ಯಾಯಾಲಯ ಸ್ಥಾಪನೆ ಮತ್ತು ದೊಡಮನಿ ಕುಟುಂಬಕ್ಕೆ ವಸತಿ, ಉದ್ಯೋಗ ಹಾಗೂ ಪರಿಹಾರ ಪ್ಯಾಕೇಜ್ ಸೇರಿದಂತೆ ವಿವಿಧ ಸೌಲಭ್ಯಗಳ ಪುನರ್ವಸತಿ ಕಲ್ಪಿಸುವ ಕುರಿತು ಚರ್ಚಿಸಲಾಗುತ್ತದೆ.
ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಈ ಕುರಿತು ಮಾತನಾಡಿದ್ದಾರೆ. ಧಾರವಾಢ ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಭವನದಲ್ಲಿ ಅಧಿಕಾರಿಗಳ ಸಭೆಯಲ್ಲಿ ಸಚಿವರು ಮಾತನಾಡಿದರು.
“ಹುಬ್ಬಳ್ಳಿ ತಾಲೂಕಿನ ಇನಾಂವೀರಾಪೂರ ಗ್ರಾಮದಲ್ಲಿ ಜರುಗಿರುವ ಘಟನೆಗೆ ಸಂಬಂಧಿಸಿದಂತೆ ಅಂತರ್ಜಾತಿ ವಿವಾಹ ಆಗಿದ್ದ ಯುವತಿಯ ಹತ್ಯೆ ಮತ್ತು ದಲಿತ ಕುಟುಂಬದ ಮೇಲೆ ಆಗಿರುವ ದೌರ್ಜನ್ಯ ಕುರಿತು ಜಿಲ್ಲಾಡಳಿತದಿಂದ ಇಲಾಖೆಗಳು ಕೈಗೊಂಡ ಕ್ರಮಗಳ ಬಗ್ಗೆ ಪಾರದರ್ಶಕ ತನಿಖೆ ಕೈಗೊಂಡು ತ್ವರಿತವಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲು ಸೂಚಿಸಲಾಗಿದೆ” ಎಂದರು.
“ಇಂತಹ ದುರ್ಘಟನೆಗಳು ಜರುಗದಂತೆ ಇನ್ನಷ್ಟೂ ಕಠಿಣ ಕ್ರಮ ಕೈಗೊಳ್ಳಲು ಅಗತ್ಯವಿದ್ದರೆ, ಮುಂಬರುವ ಅಧಿವೇಶನದಲ್ಲಿ ವಿಶೇಷ ಕಾನೂನು ರಚನೆಗೆ ಕ್ರಮವಹಿಸಲಾಗುವುದು. ಈ ಕುರಿತು ಜಿಲ್ಲಾಡಳಿತ ವರದಿ ಸಲ್ಲಿಸಲಿ. ಆಧುನಿಕ ಸಾಮಾಜದಲ್ಲಿ ಇಂತಹ ಅಮಾನವೀಯ ಘಟನೆ ಜರುಗಬಾರದಾಗಿತ್ತು. ಘಟನೆಯ ಕುರಿತು ದೂರುಗಳು ಬಂದಿದ್ದು, ಸಮರ್ಪಕ ತನಿಖೆಗೆ ಆದೇಶಿಸಲಾಗಿದೆ” ಎಂದು ಹೇಳಿದರು.
“ಜಿಲ್ಲೆಯಲ್ಲಿ ಜರುಗಿರುವ ಅಂತರ್ಜಾತಿ ವಿವಾಹಗಳ ಕುರಿತು ಮಾಹಿತಿ ಪಡೆಯಬೇಕು. ಸಂಬಂಧಿಸಿದ ಇಲಾಖೆಗಳ ಸಮನ್ವಯ ಸಾಧಿಸಿ, ಜನರಿಗೆ ತಿಳುವಳಿಕೆ ಮತ್ತು ಮನವರಿಕೆ ಮಾಡಿ, ಸಂವಿಧಾನದ ಆಶಯಗಳನ್ನು ತಿಳಿಸಲು ಕ್ರಮವಹಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ದೇಶದ ಕಾನೂನಿನ ಪ್ರಕಾರ ವಯಸ್ಸಿಗೆ ಬಂದ ಯುವಕ ಮತ್ತು ಯುವತಿಯರು ತಮ್ಮಿಷ್ಟದ ಸಂಗಾತಿಯನ್ನು ಮದುವೆಯಾಗಲು ಯಾವುದೇ ನಿರ್ಬಂಧಗಳಿಲ್ಲ” ಎಂದು ಸಚಿವರು ತಿಳಿಸಿದರು.
“ಸಾಮಾನ್ಯವಾಗಿ ಇಂತಹ ಅಮಾನವೀಯ ಕೃತ್ಯಗಳು ಮತ್ತು ದೌರ್ಜನ್ಯ ಪ್ರಕರಣಗಳು ಉತ್ತರ ಭಾರತದಲ್ಲಿ ಅತಿ ಹೆಚ್ಚಾಗಿ ವರದಿಯಾಗುತ್ತಿದ್ದವು. ಆದರೆ, ಪ್ರಗತಿಪರ ಚಿಂತನೆಯ ದಕ್ಷಿಣ ಭಾರತದಲ್ಲಿ, ಅದರಲ್ಲೂ ವಿಶೇಷವಾಗಿ ನಮ್ಮ ಕರ್ನಾಟಕದಲ್ಲಿ ಇಂತಹ ಘಟನೆ ಸಂಭವಿಸಿರುವುದು ವಿಷಾದನೀಯ ಸಂಗತಿಯಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು. “ಇನಾಂವೀರಾಪೂರ ಪ್ರಕರಣದ ಗಾಯಾಳುಗಳಿಗೆ ಅಗತ್ಯ ಚಿಕಿತ್ಸೆ, ಭದ್ರತೆ, ಪರಿಹಾರ ಕುರಿತು ಪೊಲೀಸ್ ಹಾಗೂ ಜಿಲ್ಲಾಡಳಿತಕ್ಕೆ ಸೂಕ್ತ ನಿರ್ದೇಶನಗಳನ್ನು ನೀಡಲಾಗಿದೆ. ದೌರ್ಜನ್ಯಕ್ಕೆ ಒಳಗಾದ ಕುಟುಂಬದವರು ಪ್ರಕರಣದ ಕುರಿತು ತ್ವರಿತ ತನಿಖೆ, ಪುನರ್ವಸತಿ ಸೌಲಭ್ಯ, ಉದ್ಯೋಗ ಮತ್ತು ಭದ್ರತೆಯನ್ನು ಕೇಳಿದ್ದಾರೆ. ಈ ಕುರಿತು ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸರ್ಕಾರದ ಹಂತದಲ್ಲಿ ಚರ್ಚಿಸಿ, ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲಾಗುವುದು” ಎಂದು ಸಚಿವರು ವಿವರಣೆ ನೀಡಿದರು.
ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, “ಇನಾಂವೀರಾಪೂರ ಗ್ರಾಮದ ಪ್ರಕರಣದಲ್ಲಿ ಎಲ್ಲ ಇಲಾಖೆಗಳು ಸೂಕ್ತ ಕ್ರಮ ವಹಿಸಿವೆ. ಜಿಲ್ಲಾಡಳಿತ, ಪೊಲೀಸ್ ಮತ್ತು ಸಮಾಜ ಕಲ್ಯಾಣ ಇಲಾಖೆ ನಿಯಮಾನುಸಾರ ಪರಿಹಾರ ಹಾಗೂ ಸಂತ್ರಸ್ತ ಕುಟುಂಬಕ್ಕೆ ನೆರವು ನೀಡಲಾಗಿದ್ದು, ಅವರಿಗೆ ಬೇಕಾದ ದಿನಸಿ ಹಾಗೂ ಅವಶ್ಯಕ ಗೃಹೋಪಯೋಗಿ ಸಾಮಗ್ರಿಗಳನ್ನು ತಲುಪಿಸಲಾಗಿದೆ” ಎಂದು ತಿಳಿಸಿದರು.
“ಪ್ರಕರಣವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ಘಟನೆಯ ದಿನದಿಂದ ಜಿಲ್ಲಾಡಳಿತದೊಂದಿಗೆ ಪೊಲೀಸ್ ಇಲಾಖೆ ಹಾಗೂ ಇತರ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯ ಮಾಡುತ್ತಿವೆ. ಜಿಲ್ಲಾಡಳಿತದಿಂದ ಗ್ರಾಮದಲ್ಲಿ ಶಾಂತಿ ಸಭೆ ಜರುಗಿಸಿ, ಎಲ್ಲ ಸಮುದಾಯದವರು ಪರಸ್ಪರ ಶಾಂತಿ, ಸೌಹಾರ್ದತೆಯಿಂದ ಇರುವಂತೆ ಮನವರಿಕೆ ಮಾಡಿ ಭರವಸೆ ಮೂಡಿಸಲಾಗಿದೆ. ಅಲ್ಲದೇ ದೌರ್ಜನ್ಯಕ್ಕೆ ಒಳಗಾಗಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಗುಣಮುಖರಾಗಿದ್ದ ವಿವೇಕಾನಂದ ದೊಡಮನಿ ಕುಟುಂಬಸ್ಥರನ್ನು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಮರಳಿ ಮನೆಗೆ ಸೇರಿಸಲಾಗಿದೆ. ಗ್ರಾಮದ ಶಾಂತಿ ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮಕೈಗೊಳ್ಳಲಾಗಿದೆ” ಎಂದರು.






Any questions related to ಇಂದು ಸಚಿವ ಸಂಪುಟ ಸಭೆಯಲ್ಲಿ: ಮರ್ಯಾದೆ ಹತ್ಯೆ ಕೇಸ್ ಬಗ್ಗೆ ಮಹತ್ವದ ಚರ್ಚಿಸಿ ತೀರ್ಮಾನ ಮಾಡಲಾಗುವುದು??