ಬೆಂಗಳೂರು.02.ಜನವರಿ.26: ರಾಜ್ಯದಲ್ಲಿ ವಿಶೇಷ ಚೇತನರ ಉದ್ಯೋಗ ಮತ್ತು ಶಿಕ್ಷಣದಲ್ಲಿ 2016ರ ವಿಶೇಷ ಚೇತನ ವ್ಯಕ್ತಿಗಳ ಹಕ್ಕುಗಳ ಕಾಯ್ದೆ ಮತ್ತು ವಿಶ್ವಸಂಸ್ಥೆ ವಿಶೇಷ ಚೇತನ ವ್ಯಕ್ತಿಗಳ ಹಕ್ಕುಗಳ ಸಬಲೀಕರಣ ಉದ್ದೇಶದಿಂದ ರಾಜ್ಯ ಸರ್ಕಾರ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ವಿಶೇಷ ಚೇತನರಿಗಾಗಿಯೇ ಖಾಸಗಿ ಕ್ಷೇತ್ರದಲ್ಲಿಯೂ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸಿ ಜಾರಿಗೊಳಿಸುವ ನಿಟ್ಟಿನಲ್ಲಿ ಕರಡು ಮಸೂದೆಯೊಂದನ್ನು ಸಿದ್ಧಪಡಿಸಿದೆ.
ಉದ್ಯೋಗ ತಾರತಮ್ಯ ನಿವಾರಣೆ ಜತೆಗೆ ವಿಶೇಷ ಚೇತನರ ಗೌರವಯುತ ಬದುಕು ಮತ್ತು ಹಕ್ಕುಗಳ ಸಂರಕ್ಷಣೆ ಭಾಗವಾಗಿ ‘ಕರ್ನಾಟಕ ಉದ್ಯೋಗ ಮತ್ತು ಶಿಕ್ಷಣದಲ್ಲಿ ವಿಶೇಷ ಚೇತನ ವ್ಯಕ್ತಿಗಳ ಹಕ್ಕುಗಳ ಮಸೂದೆ 2025’ ಕರಡು ಸಿದ್ಧಪಡಿಸಿ ರಾಜ್ಯ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಈ ಕಾಯ್ದೆ ಪ್ರಕಾರ 20 ಅಥವಾ ಅದಕ್ಕಿಂತ ಹೆಚ್ಚು ಸಿಬ್ಬಂದಿ ಹೊಂದಿರುವ ಯಾವುದೇ ಖಾಸಗಿ ಅಥವಾ ವಾಣಿಜ್ಯ ವಲಯದ ಕಂಪನಿ, ಕಾರ್ಖಾನೆಗಳಲ್ಲಿ ನೇರ ನೇಮಕಾತಿ ಅಥವಾ ಮಂಜೂರು ಹುದ್ದೆಗಳಲ್ಲಿ ವಿಶೇಷ ಚೇತನರಿಗೆ ಪ್ರತ್ಯೇಕವಾಗಿ ಶೇ.5ರಷ್ಟು ಸ್ಥಾನಗಳನ್ನು ಮೀಸಲಿಡುವಂತೆ ಈ ಕರಡು ಪ್ರಸ್ತಾಪಿಸುತ್ತದೆ.
2016ರ ವಿಶೇಷ ಚೇತನ ವ್ಯಕ್ತಿಗಳ ಹಕ್ಕುಗಳ ಕಾಯ್ದೆ ಮತ್ತು ವಿಶ್ವಸಂಸ್ಥೆ ವಿಶೇಷ ಚೇತನ ವ್ಯಕ್ತಿಗಳ ಹಕ್ಕುಗಳ ಸಮಾವೇಶಕ್ಕೆ ಅನುಗುಣವಾಗಿ ಇವರ ರಕ್ಷಣೆ ಬಲಪಡಿಸುವ ಗುರಿಯನ್ನು ಈ ವಿಧೇಯಕ ಹೊಂದಿದೆ. ರಾಜ್ಯ ನಿಯಂತ್ರಣ ಪ್ರಾಧಿಕಾರವು ಸೂಚಿಸಿದ ಸೂತ್ರದ ಆಧಾರದ ಮೇಲೆ ಉದ್ಯೋಗದಾತರು ವಿಶೇಷ ಚೇತನ ವರ್ಗಗಳಲ್ಲಿ ಮೀಸಲಾದ ಹುದ್ದೆಗಳನ್ನು ನೀಡಬೇಕು. ಅಲ್ಲದೆ, ವಾರ್ಷಿಕ ಅನುಸರಣಾ ವರದಿಗಳು ಕಡ್ಡಾಯವಾಗಿದ್ದು ಕೋಟಾವನ್ನು ಹಂತ ಹಂತವಾಗಿ ಜಾರಿಗೆ ತರಲಾಗುತ್ತದೆ. ಸಮಂಜಸ ವಸತಿ ಸೌಕರ್ಯದ ಹೊರತಾಗಿಯೂ ವಿಶೇಷ ಚೇತನರು ಕಾರ್ಯನಿರ್ವಹಿಸಲು ಸಾಧ್ಯವಾಗದಿದ್ದಾಗ ಅಂತಹ ಹುದ್ದೆಗಳ ಭರ್ತಿಗೆ ನಿಗದಿತ ಕಾಲಾವಕಾಶ ನೀಡಲಾಗುತ್ತದೆ.
ಅಂಗವಿಕಲರೆಂದು ತಾರತಮ್ಯ ಮಾಡುವಂತಿಲ್ಲ:
ಈ ಕರಡು ವಿಧೇಯಕ ಪ್ರಕಾರ ಯಾವುದೇ ಖಾಸಗಿ ಸಂಸ್ಥೆಗಳ ಉದ್ಯೋಗದಾತರು ನೇಮಕಾತಿ, ಆಯ್ಕೆ, ಬಡ್ತಿ, ತರಬೇತಿ, ವರ್ಗಾವಣೆ ಸೇರಿದಂತೆ ಇತರ ಸೇವಾ ಷರತ್ತುಗಳಲ್ಲಿ ವಿಶೇಷ ಚೇತನ ವ್ಯಕ್ತಿಯ ವಿರುದ್ಧ ತಾರತಮ್ಯ ಮಾಡುವಂತಿಲ್ಲ. ಕಾಯ್ದೆ ಮತ್ತು ನಿಯಮಗಳಿಗೆ ಅನುಸಾರವಾಗಿ ಸಮಂಜಸವಾದ ಕೆಲಸ ನಿರ್ವಹಿಸುವ ಸ್ಥಳಕ್ಕೆ ತಕ್ಕಂತೆ ವಸತಿ ಸೌಕರ್ಯ ಒದಗಿಸಬೇಕು. ಅಂಗವೈಕಲ್ಯದ ಕಾರಣದಿಂದ ಯಾವುದೇ ಕಾರಣಕ್ಕೂ ಬಡ್ತಿಯನ್ನು ನಿರಾಕರಿಸುವಂತಿಲ್ಲ. ಉದ್ಯೋಗಿಯ ಶ್ರೇಣಿಯಲ್ಲಿ ಕಡಿತ ಅಥವಾ ವಜಾಗೊಳಿಸುವಂತಿಲ್ಲ. ವಿಶೇಷ ಚೇತನರು ಉದ್ಯೋಗದಾತನ ವಸತಿ ಸೌಕರ್ಯ ಕೋರಿದ್ದಲ್ಲಿ 7 ದಿನಗಳಲ್ಲಿ ಲಿಖಿತ ವಿನಂತಿ ಅಂಗೀಕರಿಸಿ 30 ದಿನದೊಳಗೆ ನಿರ್ಧಾರ ಕೈಗೊಳ್ಳಬೇಕು ಎಂದು ಕರಡು ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ.
ಶಿಕ್ಷಣದ ಪ್ರತಿ ಕೋರ್ಸ್‌ನಲ್ಲಿ ಶೇ.10 ಸೀಟು ಮೀಸಲು:
ರಾಜ್ಯದ ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳು ಕೂಡ ಅಂಗವೈಕಲ್ಯ ಹೊಂದಿರುವ ವಿದ್ಯಾರ್ಥಿಗಳಿಗೆ ಪ್ರತಿ ಕೋರ್ಸ್‌ನಲ್ಲಿ ಶೇ.10ರಷ್ಟು ಸೀಟುಗಳನ್ನು ಕಾಯ್ದಿರಿಸಬೇಕೆಂದು ಈ ಕರಡು ಪ್ರಸ್ತಾಪಿಸುತ್ತದೆ. ಅಲ್ಲದೆ, ವಿಶೇಷ ಚೇತನರಿಗೆ ವಿಸ್ತೃತ ಸಮಯ, ಬರಹಗಾರರು ಮತ್ತು ಪರ್ಯಾಯ ಪ್ರಶ್ನೆಪತ್ರಿಕೆಗಳು ಸೇರಿದಂತೆ ಪ್ರವೇಶ, ತರಗತಿಗಳು ಮತ್ತು ಪರೀಕ್ಷೆಗಳ ಸಮಯದಲ್ಲಿ ಸಂಸ್ಥೆಗಳು ಸಮಂಜಸ ವಸತಿ ಸೌಕರ್ಯವನ್ನು ಕಲ್ಪಿಸಬೇಕು. ಅಂಗವಿಕಲರು ಸುಲಭವಾಗಿ ಪ್ರವೇಶಿಸಬಹುದಾದ ಮೂಲಸೌಕರ್ಯ ಮತ್ತು ಡಿಜಿಟಲ್ ವೇದಿಕೆಯನ್ನು ಒದಗಿಸಬೇಕು, 6 ತಿಂಗಳೊಳಗೆ ಪ್ರವೇಶ ಮತ್ತು ಸೇರ್ಪಡೆ ಯೋಜನೆಗಳನ್ನು ಅಭಿವೃದ್ಧಿಪಡಿಸಬೇಕು ಮತ್ತು ಐದು ವರ್ಷಗಳಲ್ಲಿ ಪೂರ್ಣ ಪ್ರವೇಶ ಸಾಧಿಸಬೇಕು. ವಿಶೇಷ ಚೇತನ ವಿದ್ಯಾರ್ಥಿಗಳು ಐದು ವರ್ಷಗಳ ವಯಸ್ಸಿನ ಸಡಿಲಿಕೆ ಮತ್ತು ಶೇ.5 ಕಟ್ ಆಫ್ ಸಡಿಲಿಕೆ ರಿಯಾಯಿತಿ ಪಡೆಯಲಿದ್ದಾರೆ. ಮೀಸಲಾದ, ಭರ್ತಿ ಮಾಡದ ಸೀಟುಗಳಿದ್ದಲ್ಲಿ ಮೂರು ವರ್ಷಗಳವರೆಗೆ ಮುಂದುವರಿಸಬಹುದಾಗಿದೆ. ಅಂಗವಿಕಲರ ಉದ್ಯೋಗ, ಶಿಕ್ಷಣದಲ್ಲಿ ಸಮಾನ ಹಕ್ಕು ಕಲ್ಪಿಸುವ ನಿಟ್ಟಿನಲ್ಲಿ ಈ ಕಾಯ್ದೆ ರೂಪುಗೊಂಡಿವೆ.
5 ಲಕ್ಷದವರೆಗೂ ದಂಡ ವಿಧಿಸಲು ಅವಕಾಶ:
ರಾಜ್ಯ ಸರ್ಕಾರವು ಅಧಿಸೂಚನೆಯ ಮೂಲಕ ರಾಜ್ಯ ನಿಯಂತ್ರಣ ಪ್ರಾಧಿಕಾರ ಸ್ಥಾಪಿಸಲಿದೆ. ಇದರಲ್ಲಿ ಅಧ್ಯಕ್ಷರು ಒಳಗೊಂಡಂತೆ ಸರ್ಕಾರದಿಂದ ನೇಮಕಗೊಂಡ 6ರಿಂದ 10 ಮಂದಿ ಶಿಕ್ಷಣ, ಸಾಮಾಜಿಕ ಕಲ್ಯಾಣ, ಕಾನೂನು, ವೈದ್ಯಕೀಯ ಕ್ಷೇತ್ರದ ತಜ್ಞರು, ವಿಶೇಷ ಚೇತನ ವ್ಯಕ್ತಿಗಳ ಸಂಘಟನೆಗಳ ಇಬ್ಬರು ಪ್ರತಿನಿಧಿಗಳು ಸಮಿತಿಯಲ್ಲಿ ಇರಲಿದ್ದಾರೆ. ಪ್ರಾಧಿಕಾರವು ಉದ್ಯಮ ಸಂಸ್ಥೆಗಳ ಮೇಲ್ವಿಚಾರಣೆ, ಉದ್ಯೋಗ, ಶಿಕ್ಷಣದ ಅಂಗವಿಕಲರ ನೇಮಕಾತಿ ಸಂಬಂಧಿಸಿದ ಅಂಕಿ ಅಂಶಗಳು ವಾರ್ಷಿಕ ವರದಿಗಳನ್ನು ಪ್ರಕಟಿಸಲಿದೆ. ನಿಯಮ ಮಾರ್ಗಸೂಚಿ ಉಲ್ಲಂಘಿಸಿದ್ದಲ್ಲಿ ಪ್ರಾಧಿಕಾರಕ್ಕೆ ದಂಡ ವಿಧಿಸಲು ಅವಕಾಶವಿರಲಿದೆ. ಸುಳ್ಳು ಮಾಹಿತಿ ನೀಡುವುದು, ಉಲ್ಲಂಘನೆಗಳು ಕಂಡು ಬಂದಲ್ಲಿ 10 ಸಾವಿರದಿಂದ 5 ಲಕ್ಷದವರೆಗೆ ದಂಡ ವಿಧಿಸಬಹುದು. ವಂಚನೆಯ ಅಂಗವೈಕಲ್ಯ ಹಕ್ಕುಗಳಿಗೆ 1 ಲಕ್ಷದವರೆಗೆ ದಂಡ ಮತ್ತು ಎರಡು ವರ್ಷಗಳವರೆಗೆ ಜೈಲು ಶಿಕ್ಷೆಗೆ ಗುರಿಪಡಿಸಬಹುದಾಗಿದೆ. ಈ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆಯು ವಿಧೇಯಕ ಕರಡು ರೂಪಿಸಿದೆ.
ಸದ್ಯ ಕಳೆದ ತಿಂಗಳು ರಾಜ್ಯ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿ ಒಂದು ತಿಂಗಳ ಕಾಲವಕಾಶದೊಂದಿಗೆ ಆಕ್ಷೇಪಣೆ ಮತ್ತು ಸಲಹೆಗಳನ್ನು ಆಹ್ವಾನಿಸಿತ್ತು. ಇದಕ್ಕೆ ವಿಭಿನ್ನ ರೀತಿಯ ಆಕ್ಷೇಪಣೆಗಳು ಬಂದಿವೆ.
ಆಕ್ಷೇಪಣೆಗಳೇನು?:
ವಿಶೇಷ ಚೇತನ ಸಬಲೀಕರಣದ ಭಾಗವಾಗಿ ಈ ಕಾಯ್ದೆಯು ಸಮಂಜಸವಾಗಿದೆ. ಆದರೆ, ಪ್ರಸ್ತುತ ವಿಧೇಯಕದಲ್ಲಿ ಕರ್ನಾಟಕ ಅಂಗಡಿಗಳ ವಾಣಿಜ್ಯ ಮತ್ತು ವ್ಯವಹಾರ ಕಾಯ್ದೆ 1961ರ ಸೆಕ್ಷನ್ (3) ಹಾಗೂ ಸಬ್ ಸೆಕ್ಷನ್(8) ರಲ್ಲಿ ಬ್ಯಾಂಕುಗಳು, ವಿಮಾ ಕಂಪನಿಗಳನ್ನು ವಿನಾಯಿತಿ ನೀಡಲಾಗಿದೆ. 1961ರಲ್ಲಿ ದೇಶದಲ್ಲಿ ಎಸ್‌ಬಿಐ, ಕೆನರಾ ಬ್ಯಾಂಕ್ ಸೇರಿದಂತೆ ಕೆಲವು ರಾಷ್ಟ್ರೀಕೃತ ಬ್ಯಾಂಕುಗಳ ಹೊರತುಪಡಿಸಿ ಯಾವುದೇ ಖಾಸಗಿ ಬ್ಯಾಂಕು, ವಿಮಾಕಂಪನಿಗಳು, ಮ್ಯೂಚುಯಲ್ ಫಂಡ್ ಸಂಸ್ಥೆಗಳು ಇರಲಿಲ್ಲ. ಇಂದು ದೇಶದಲ್ಲಿ ಬ್ಯಾಂಕ್, ಖಾಸಗಿ ವಿಮಾ ಕಂಪನಿಗಳು, ಮ್ಯೂಚುವಲ್ ಫಂಡ್‌ಗಳಲ್ಲಿ ಲಕ್ಷಾಂತರ ಮಂದಿ ವಿಶೇಷ ಚೇತನರು ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಾಗಿ ಸ್ಥಳದಲ್ಲಿಯೇ ಕೆಲಸ ನಿರ್ವಹಿಸಲು ಅನುಕೂಲವಾಗುವಂತೆ ಕಾಯ್ದೆ ವಿನಾಯಿತಿ ಕುರಿತು ವಿಧೇಯಕ ಪರಿಶೀಲಿಸಬೇಕು ಕರ್ನಾಟಕ ರಾಜ್ಯ ವಿಕಲಚೇತನರ ರಕ್ಷಣಾ ಸಮಿತಿ ಸಲಹೆ ನೀಡಿದೆ.
ಕರಡಿನಲ್ಲಿ ಏನಿದೆ?:
ಕರ್ನಾಟಕ ಉದ್ಯೋಗ ಮತ್ತು ಶಿಕ್ಷಣದಲ್ಲಿ ವಿಶೇಷ ಚೇತನ ವ್ಯಕ್ತಿಗಳ ಹಕ್ಕುಗಳ ಮಸೂದೆ ಕರಡು ಸಿದ್ಧ
ಖಾಸಗಿ ಕಂಪನಿ ನೇರ ನೇಮಕಾತಿಯಲ್ಲಿ ಶೇ.5ರಷ್ಟು ಮೀಸಲು ನೀಡಬೇಕು
ನೇಮಕಾತಿ, ಬಡ್ತಿ ಮತ್ತು ವರ್ಗಾವಣೆಯಲ್ಲಿ ತಾರತಮ್ಯ ಮಾಡಬಾರದು
ಮೇಲ್ವಿಚಾರಣೆಗೆ ರಾಜ್ಯ ನಿಯಂತ್ರಣಾ ಪ್ರಾಧಿಕಾರ ಸ್ಥಾಪನೆ
ನಿಯಮ ಮಾರ್ಗಸೂಚಿ ಉಲ್ಲಂಘಿಸಿದರೆ ಪ್ರಾಧಿಕಾರಕ್ಕೆ ದಂಡ ವಿಧಿಸಲು ಅವಕಾಶ
ವಿಶೇಷ ಚೇತನರ ಉದ್ಯೋಗ, ಶಿಕ್ಷಣದಲ್ಲಿ ಸಬಲೀಕರಣ ನಿಟ್ಟಿನಲ್ಲಿ ದೇಶದಲ್ಲಿ ಮೊದಲ ಬಾರಿಗೆ ಕರ್ನಾಟಕ ಈ ಕಾಯ್ದೆ ರೂಪಿಸಿದೆ. ಕರಡು ವಿಧೇಯಕ ಹೊರಡಿಸಿದ್ದು ಉದ್ಯಮಿಗಳು, ಮಾಲೀಕರಿಂದ ಆಕ್ಷೇಪಣೆ, ಸಲಹೆ ಪಡೆದು ಚರ್ಚಿಸಲಾಗುವುದು. ಆರ್ಥಿಕ ಇಲಾಖೆಯ ಅನುಮೋದನೆ ಬಳಿಕ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಮುಂದಿನ 4 ವಾರದೊಳಗೆ ಮಸೂದೆ ಜಾರಿಯಾಗಲಿದೆ.- ಸಂತೋಷ್ ಲಾಡ್ ಕಾರ್ಮಿಕ ಸಚಿವ
- ರಘು ಕೆ.ಜಿ.






Any questions related to ರಾಜ್ಯಾದ್ಯಂತ ಖಾಸಗಿ ವಲಯದಲ್ಲಿ ಅಂಗವಿಕಲರಿಗೆ ಶೇ.5, ಶಿಕ್ಷಣದಲ್ಲಿ ಶೇ.10 ಮೀಸಲು: ಕರಡು ಸಿದ್ಧ?