ಬೀದರ.31.ಡಿಸೆಂಬರ್.25:- ಅರ್ಹತಾ ದಿನಾಂಕ 01-11-2025 ಕ್ಕೆ ಅನ್ವಯಿಸುವಂತೆ ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದ ಅಂತಿಮ ಮತದಾರರ ಪಟ್ಟಿಯನ್ನು ಇಂದು ದಿನಾಂಕ:30-12-2025 ರಂದು ಸಂಪೂರ್ಣ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚೂರಪಡಿಸಲಾಗಿದೆ ಎಂದು ಚುನಾವಣಾಧಿಕಾರಿ, ಮತದಾರರ ನೋಂದಣಾಧಿಕಾರಿ ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರ ಹಾಗೂ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಜಹೀರಾ ನಸೀಮ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮತದಾರರು ತಮ್ಮ ಹೆಸರನ್ನು ಆಯಾ ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಹಾಗೂ ತಾಲ್ಲೂಕಿನ ಮಹಾನಗರ ಪಾಲಿಕೆ / ತಹಸೀಲ್ದಾರ ಕಾರ್ಯಾಲಯದಲ್ಲಿ ಪರಿಶೀಲಿಸಿಕೊಳ್ಳಬಹುದಾಗಿದೆ.
ಅಂತಿಮ ಮತದಾರರ ಪಟ್ಟಿಯ ಮತದಾರರ ವಿವರ: ಬಳ್ಳಾರಿ, ವಿಜಯನಗರ, ಬೀದರ, ಕಲಬುರಗಿ, ಯಾದಗಿರಿ, ಕೊಪ್ಪಳ, ರಾಯಚೂರ ಜಿಲ್ಲೆಗಳಿಂದ 18194-ಪುರುಷ, 13020-ಮಹಿಳೆ ಒಟ್ಟು 31214 ಮತದಾರರು ನೋಂದಣಿಯಾಗಿರುತ್ತಾರೆಂದು ಅವರು ತಿಳಿಸಿದ್ದಾರೆ.
ಭಾರತ ಚುನಾವಣಾ ಆಯೋಗವು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರನ್ನು ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ನೋಂದಣಾಧಿಕಾರಿಯನ್ನಾಗಿ ಹಾಗೂ ಈ ಚುನಾವಣಾ ಕ್ಷೇತ್ರ ವ್ಯಾಪ್ತಿಗೊಳಪಡುವ ವಿಭಾಗದ ಎಲ್ಲಾ ಜಿಲ್ಲಾಧಿಕಾರಿಗಳನ್ನು, ಆಯುಕ್ತರು ಮಹಾನಗರ ಪಾಲಿಕೆ ಕಲಬುರಗಿ / ಬಳ್ಳಾರಿ, ಕಲಬುರಗಿ ವಿಭಾಗದ ಆಯಾ ಉಪ ವಿಭಾಗಕ್ಕೆ ಸಂಬಂಧಪಟ್ಟ ಎಲ್ಲಾ ಸಹಾಯಕ ಆಯುಕ್ತರು, ವಿಭಾಗದ ಎಲ್ಲಾ ಸಂಬಂಧಪಟ್ಟ ತಾಲೂಕಿನ ತಹಸೀಲ್ದಾರರನ್ನು ಹಾಗೂ ಇತರೆ ತತ್ಸಮಾನ ಅಧಿಕಾರಿಯವರನ್ನು ಸಹಾಯಕ ಮತದಾರರ ನೊಂದಣಾಧಿಕಾರಿಯನ್ನಾಗಿ ನೇಮಿಸಿರುತ್ತದೆ.
ಆಯೋಗದ ಮಾರ್ಗಸೂಚಿಗಳನ್ವಯ 16ಕೀ.ಮೀ ವ್ಯಾಪ್ತಿಗೊಳಪಡುವ ಕನಿಷ್ಟ 30 ಮತದಾರರು ಒಳಪಡುವ ಮತದಾರರಿಗೆ ಮತಗಟ್ಟೆ ಸ್ಥಾಪಿಸಲು ಅವಕಾಶ ಕಲ್ಪಿಸಿದ್ದು, ಅದರಂತೆ ಪ್ರಸ್ತುತವಾಗಿ 145 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ನಿರಂತರ ನೋಂದಣಿ ಪ್ರಕ್ರಿಯೆಯಲ್ಲಿ ನೋಂದಾಯಿಸಲ್ಪಡುವ ಮತದಾರರಿಗನುಗುಣವಾಗಿ, ಆಯೋಗದ ಮಾರ್ಗಸೂಚಿಗಳನ್ವಯ ಮತದಾನ ಕೇಂದ್ರಗಳನ್ನು ಮುಂದಿನ ದಿನಗಳಲ್ಲಿ ಚುನಾವಣಾ ಸಮಯದಲ್ಲಿ ಅಂತಿಮಗೊಳಿಸಲಾಗುವುದು.
ಇದೊಂದು ನಿರಂತರ ನೋಂದಣಿ ಪ್ರಕ್ರಿಯೆಯಾಗಿರುವ ಹಿನ್ನೆಲೆಯಲ್ಲಿ, ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕದವರೆಗೂ ಅರ್ಹ ಮತದಾರರು ಅವಶ್ಯಕ ದಾಖಲೆಗಳೊಂದಿಗೆ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಲು ಅವಕಾಶವಿರುತ್ತದೆ. ಕಾರಣ ಅರ್ಹ ಶಿಕ್ಷಕರು ಹೆಚ್ಚಿನ ಆಸಕ್ತಿ ವಹಿಸಿ ಈ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡು, ಸುಭದ್ರ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕೆಂದು ತಿಳಿಸಿದ್ದಾರೆ.






Any questions related to ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದ ಅಂತಿಮ ಮತದಾರರ ಪಟ್ಟಿ ಪ್ರಕಟ?