23/08/2025 3:51 AM

Translate Language

Home » ಲೈವ್ ನ್ಯೂಸ್ » ಪಿಎಚ್‌ಡಿ ಪ್ರವೇಶಕ್ಕೆ ಅರ್ಜಿ ಆಹ್ವಾನ

ಪಿಎಚ್‌ಡಿ ಪ್ರವೇಶಕ್ಕೆ ಅರ್ಜಿ ಆಹ್ವಾನ

Facebook
X
WhatsApp
Telegram

ಮಂಗಳೂರು.20.ಆಗಸ್ಟ್.25:- ಸ್ನಾತಕೋತ್ತರ ಪದವಿ ಮುಗಿಸುವರಿಗೆ ಮಂಗಳೂರು ವಿವಿಯ ವಿವಿಧ ಸ್ನಾತಕೋತ್ತರ ವಿಭಾಗಗಳು, ವಿವಿ ಕಾಲೇಜು ಮಂಗಳೂರು ಹಾಗೂ ಮಾನ್ಯತೆ ಪಡೆದ ಸಂಶೋಧನಾ ಕೇಂದ್ರಗಳಲ್ಲಿ ಪಿಎಚ್.ಡಿ ಕಾರ್ಯಕ್ರಮಕ್ಕೆ ಲಭ್ಯವಿರುವ ಖಾಲಿ ಸೀಟುಗಳಿಗೆ ನೋಂದಾಯಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ನಿಗದಿತ ಅರ್ಜಿ ನಮೂನೆಯನ್ನು ವಿವರವಾದ ಅಧಿಸೂಚನೆಯೊಂದಿಗೆ ಸಂಬಂಧಪಟ್ಟ ವಿಭಾಗಗಳು ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ ಕ್ಯಾಂಪಸ್‌ ಅಥವಾ ಹಂಪನಕಟ್ಟೆ ವಿವಿ ಕಾಲೇಜಿನಿಂದ 1,500 (ಎಸ್‍ಸಿ/ಎಸ್‍ಟಿ ಅಭ್ಯರ್ಥಿಗಳು ಜಾತಿ ಪ್ರಮಾಣ ಪತ್ರ ಸಲ್ಲಿಸಿದರೆ 750 ರು.) ಚಲನ್ ಅಥವಾ ರಾಷ್ಟ್ರೀಕೃತ ಬ್ಯಾಂಕಿನಿಂದ ಹಣಕಾಸು ಅಧಿಕಾರಿ, ಮಂಗಳೂರು ವಿಶ್ವವಿದ್ಯಾನಿಲಯ ಇವರ ಹೆಸರಿನಲ್ಲಿ ಪಡೆದ ಡಿ.ಡಿ.ಮುಖಾಂತರ ಪಾವತಿಸಿ ಪಡೆಯಬಹುದು.

ಭರ್ತಿ ಮಾಡಿದ ಅರ್ಜಿಗಳನ್ನು ದ್ವಿಪ್ರತಿಗಳಲ್ಲಿ ಅಗತ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ಸ್ನಾತಕೋತ್ತರ ವಿಭಾಗದ ಅಧ್ಯಕ್ಷರು/ ಮಾನ್ಯತೆ ಪಡೆದ ಸಂಶೋಧನಾ ಕೇಂದ್ರದ ಮುಖ್ಯಸ್ಥರಿಗೆ ಆ.30ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿ ಮತ್ತು ಅರ್ಜಿ ನಮೂನೆಗಳಿಗೆ ಮಂಗಳೂರು ವಿಶ್ವವಿದ್ಯಾನಿಲಯದ ವೆಬ್‍ಸೈಟ್ ಮೂಲಕ ಪಡೆದುಕೊಳ್ಳಬಹುದು ಎಂದು ಕುಲಸಚಿವರ ಪ್ರಕಟಣೆ ತಿಳಿಸಿದೆ.

ರಥಬೀದಿ ಕಾಲೇಜಿನಲ್ಲಿ ಮುಕ್ತ ವಾಚನಾಲಯ ಉದ್ಘಾಟನೆ

ಕಾಲೇಜುಗಳಲ್ಲಿ ಮುಕ್ತ ವಾಚನಾಲಯ ಎನ್ನುವ ನೂತನ ಪರಿಕಲ್ಪನೆ ಅನುಕರಣಾರ್ಹ. ಪ್ರತಿನಿತ್ಯ ಗ್ರಂಥಾಲಯದ ಸದ್ಬಳಕೆ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಜ್ಞಾನದ ಜತೆಗೆ ಶಿಸ್ತು ಕೂಡ ಲಭ್ಯವಾಗುತ್ತದೆ ಎಂದು ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ಹೇಳಿದ್ದಾರೆ.

ನಗರದ ರಥಬೀದಿಯ ಡಾ.ಪಿ. ದಯಾನಂದ ಪೈ- ಪಿ.ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ, ಗ್ರಂಥಾಲಯ ಹಾಗೂ ಕನ್ನಡ ವಿಭಾಗ ಸಂಯುಕ್ತವಾಗಿ ಏರ್ಪಡಿಸಿದ ರಾಷ್ಟ್ರೀಯ ಗ್ರಂಥಾಲಯ ದಿನಾಚರಣೆ ಮತ್ತು ಹೊಸದಾಗಿ ಪ್ರಾರಂಭಿಸಲಾದ ಮುಕ್ತ ವಾಚನಾಲಯ ಉದ್ಘಾಟಿಸಿ ಅವರು ಮಾತನಾಡಿದರು.

ಇಂಟರ್ನೆಟ್ ಇಲ್ಲದ ಸಂದರ್ಭದಲ್ಲಿ ಎಲ್ಲರೂ ಹೆಚ್ಚಾಗಿ ಗ್ರಂಥಾಲಯವನ್ನು ಅವಲಂಬಿಸುತ್ತಿದ್ದುದರಿಂದ ನಮ್ಮ ಜ್ಞಾನ, ಕೌಶಲ್ಯ ವೃದ್ಧಿಗೆ ಗ್ರಂಥಾಲಯ ಬಹಳ ಮುಖ್ಯ ಪಾತ್ರ ವಹಿಸುತ್ತಿತ್ತು. ನಾವು ಅತಿಯಾಗಿ ಪುಸ್ತಕವನ್ನು ಉಪಯೋಗಿಸಿಕೊಂಡಾಗ ನಮ್ಮ ಜ್ಞಾನ ಮತ್ತೊಂದು ಸ್ತರಕ್ಕೆ ಏರಲು ಸಾಧ್ಯ ಎಂದು ಅವರು ಹೇಳಿದರು.

ವಿಶ್ರಾಂತ ಪ್ರಾಧ್ಯಾಪಕ ಹಾಗೂ ಲೇಖಕ ಡಾ. ನರೇಂದ್ರ ರೈ ದೇರ್ಲ ಮಾತನಾಡಿ, ಓದು ನಮ್ಮಲ್ಲಿ ಸೂಕ್ಷ್ಮತೆ, ಸಹನೆ, ಸೃಜನಶೀಲತೆ ಮತ್ತು ಬಹುತ್ವದ ಬಗ್ಗೆ ಅರಿವನ್ನು ಮೂಡಿಸುತ್ತದೆ. ಈ ಗುಣಗಳಿಲ್ಲದ ಯುವ ಜನತೆಯ ಭವಿಷ್ಯದ ಬಗ್ಗೆ ನಾವು ಭಯಪಡಬೇಕಿದೆ ಎಂದರು.

ವಿಶ್ವವಿದ್ಯಾನಿಲಯ ಕಾಲೇಜಿನ ಗ್ರಂಥಪಾಲಕಿ ಡಾ.ವನಜಾ ಅವರು ಗ್ರಂಥಾಲಯ ವಿಜ್ಞಾನ ಪಿತಾಮಹ ಎಸ್.ಆರ್. ರಂಗನಾಥನ್ ಅವರ ಜೀವನ ಮತ್ತು ಸಾಧನೆಗಳ ಬಗ್ಗೆ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ಜಯಕರ ಭಂಡಾರಿ ಎಂ. ಅಧ್ಯಕ್ಷತೆ ವಹಿಸಿದ್ದರು. ಮುಕ್ತ ವಾಚನಾಲಯದಲ್ಲಿ ಸುಮಾರು 15 ವಿವಿಧ ಭಾಷೆಗಳ ದಿನಪತ್ರಿಕೆಗಳು, 25ಕ್ಕೂ ಹೆಚ್ಚು ನಿಯತಕಾಲಿಕೆಗಳು ಲಭ್ಯವಿದ್ದು, ವಿದ್ಯಾರ್ಥಿಗಳು ಬಿಡುವಿನ ವೇಳೆಯಲ್ಲಿ ಬಳಸಬಹುದಾಗಿರುತ್ತದೆ ಎಂದು ಹೇಳಿದರು. ಐಕ್ಯೂಎಸಿ ಸಂಯೋಜಕ ದೇವಿಪ್ರಸಾದ್, ಸಹ ಸಂಯೋಜಕಿ ಡಾ.ಜ್ಯೋತಿಪ್ರಿಯಾ, ಕಾಲೇಜಿನ ಗ್ರಂಥಪಾಲಕಿ ಉಮಾ ಎ.ಬಿ. ಮತ್ತಿತರರು ಇದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!

Featuring Advanced Search Functions plugin by YD