ರಾಯಚೂರು.09.ಆಗಸ್ಟ್.25: ಇಲ್ಲಿನ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ 2025-26ನೇ ಸಾಲಿನ ವಿವಿಧ ಯೋಜನೆಗಳಡಿ ವೃತ್ತಿನಿರತ ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಸಲಕರಣೆ ವಿತರಣೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಜಿಲ್ಲೆಯ ಗ್ರಾಮೀಣ ಪ್ರದೇಶದ ಹೊಲಿಗೆ ವೃತ್ತಿಯಲ್ಲಿ ತರಬೇತಿ ಹೊಂದಿರುವ ಹಾಗೂ ವೃತ್ತಿಪರ ಮಹಿಳೆಯರಿಗೆ ಉಚಿತವಾಗಿ ಮೋಟಾರ್ ಸಹಿತ ಹೊಲಿಗೆಯಂತ್ರ ವಿತರಣೆಗೆ ಹಾಗೂ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಸಲಕರಣೆ ಸರಬರಾಜು ಯೋಜನೆಯಡಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಗಾರೆಕೆಲಸ, ಮರಗೆಲಸ, ಕಮ್ಮಾರಿಕೆ, ದೋಭಿ, ಕ್ಷೌರಿಕ ಹಾಗೂ ಕಲ್ಲುಕುಟಿಕ ವೃತ್ತಿನಿರತ ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಸಲಕರಣೆಯನ್ನು ವಿತರಿಸಲಾಗುವುದು.
ದಾಖಲಾತಿಗಳು: ಜನ್ಮ ದಿನಾಂಕ ನಮೂದಿಸಿರುವ ದಾಖಲೆ (ಅಂಕಪಟ್ಟಿ ಅಥವಾ ವರ್ಗಾವಣೆ ಪ್ರಮಾಣ ಪತ್ರ), ಹೊಲಿಗೆಯಂತ್ರಕ್ಕಾಗಿ ಕನಿಷ್ಠ 7ನೇ ತರಗತಿ ಪಾಸಾಗಿರಬೇಕು. (ಅಂಕಪಟ್ಟಿ ಅಥವಾ ವರ್ಗಾವಣೆ ಪ್ರಮಾಣ ಪತ್ರ) (ದಾಖಲಾತಿಗಳು ನಕಲಿ ಎಂದು ಕಂಡುಬಂದಲ್ಲಿ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು) ಮತ್ತು ಸುಧಾರಿತ ಸಲಕರಣೆಗೆ ಯಾವುದೇ ಶೈಕ್ಷಣಿಕ ಅರ್ಹತೆ ಇರುವುದಿಲ್ಲ., ಜಾತಿ ಪ್ರಮಾಣ ಪತ್ರ (ಪ.ಜಾತಿ, ಪಂ.ಪಂಗಡ & ಅಲ್ಪಸಂಖ್ಯಾತರಿಗೆ ಮಾತ್ರ), ವಿಕಲಚೇತನ ಅಥವಾ ವಿಧವೆ ಪ್ರಮಾಣ ಪತ್ರ (ವಿಕಲಚೇತನ/ವಿಧವೆಯರಾಗಿದ್ದಲ್ಲಿ), ಚಾಲ್ತಿಯಲ್ಲಿರುವ ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ, ವೃತ್ತಿ ದೃಢೀಕರಣ ಪತ್ರ (ಲೇಬರ್ ಕಾರ್ಡ್/ತರಬೇತಿ ಸಂಸ್ಥೆಯವರು ನೀಡಿದ ಪತ್ರ) ಪಂಚಾಯತ್ ಅಭಿವೃಧ್ಧಿ ಅಧಿಕಾರಿ ಇವರಿಂದ ಪಡೆದ ವೃತ್ತಿ ದೃಢೀಕರಣ ಪತ್ರ ನಮೂನೆಗಾಗಿ ವೆಬ್‌ಸೈಟ್‌ಗೆ ಭೇಟಿ ನೀಡಿಬೇಕು.
ಷರತ್ತುಗಳು: ಜಿಲ್ಲೆಯ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳು ಮಾತ್ರ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸತಕ್ಕದ್ದು. (ಮಹಾನಗರಪಾಲಿಕೆ/ನಗರಸಭೆ ಮತ್ತು ಪುರಸಭೆಗೊಳಪಡುವ ಅಭ್ಯರ್ಥಿಗಳಿಗೆ ಅವಕಾಶವಿರುವುದಿಲ್ಲ).
ಸರ್ಕಾರಿ ನೌಕರರು ಅಥವಾ ಅವರ ಅವಲಂಬಿತರು ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. (ಒಂದು ವೇಳೆ ಅರ್ಜಿ ಸ್ವೀಕೃತವಾದಲ್ಲಿ ಅಂತಹವರನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ). ಈ ಇಲಾಖೆಯಿಂದ ಹೊಲಿಗೆಯಂತ್ರ/ ಗಾರೆಕೆಲಸ/ ಮರಗೆಲಸ/ ಕಮ್ಮಾರಿಕೆ/ ದೋಭಿ/ ಕ್ಷೌರಿಕ/ ಕಲ್ಲುಕುಟಿಕ ವೃತ್ತಿ ಸಲಕರಣೆಗಳನ್ನು ಪಡೆದಿದ್ದರೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ (ಒಂದು ವೇಳೆ ಅರ್ಜಿ ಸ್ವೀಕೃತವಾದಲ್ಲಿ ಅಂತಹವರನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ).
ಹೊಲಿಗೆಯಂತ್ರಕ್ಕಾಗಿ ಅರ್ಜಿ ಸಲ್ಲಿಸುವ ಮಹಿಳೆಯರು ತರಬೇತಿ ಹೊಂದಿದ ಬಗ್ಗೆ ತರಬೇತಿ ಸಂಸ್ಥೆಯವರು ನೀಡಿದ ಪ್ರಮಾಣ ಪತ್ರ ಮತ್ತು ಸುಧಾರಿತ ಸಲಕರಣೆಗಳಿಗಾಗಿ ಅರ್ಜಿ ಸಲ್ಲಿಸುವ ಗಾರೆಕೆಲಸ/ ಮರಗೆಲಸ/ ಕಮ್ಮಾರಿಕೆ/ ದೋಭಿ/ ಕ್ಷೌರಿಕ/ ಕಲ್ಲುಕುಟಿಕ ವೃತ್ತಿಯಲ್ಲಿ ತೊಡಗಿರುವ ಕುಶಲಕರ್ಮಿಗಳು ಕಾರ್ಮಿಕ ಇಲಾಖೆಯಿಂದ ಪಡೆದ ಲೇಬರ್ ಕಾರ್ಡ್ ಅಥವಾ ಆಯಾ ಗ್ರಾಮ ಪಂಚಾಯತಿಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಂದ ವೃತ್ತಿ ನಿರ್ವಹಿಸುತ್ತಿರುವ ಬಗ್ಗೆ ವೃತ್ತಿ ದೃಢೀಕರಣ ಪ್ರಮಾಣ ಪತ್ರ ಸಲ್ಲಿಸುವುದು (ನಮೂನೆಗಾಗಿ ವೆಬ್‌ಸೈಟ್ ನೋಡಿ).
ಹೊಲಿಗೆಯಂತ್ರಕ್ಕಾಗಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಹೊಲಿಗೆ ವೃತ್ತಿ ತರಬೇತಿ ಪಡೆದ/ವೃತ್ತಿನಿರತ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸತಕ್ಕದ್ದು. (ಒಂದು ವೇಳೆ ಪುರುಷ ಅಭ್ಯರ್ಥಿಗಳಿಂದ ಅರ್ಜಿಗಳು ಸ್ವೀಕೃತವಾದಲ್ಲಿ ಅವರನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ). ಒಬ್ಬ ಫಲಾನುಭವಿಯು ಕೇವಲ ಒಂದು ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
ಒಂದು ಕುಟುಂಬದಲ್ಲಿ ಒಬ್ಬರು ಮಾತ್ರ ಒಂದು ವೃತ್ತಿಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. (ಒಂದೇ ಕುಟುಂಬದಿಂದ/ಒಬ್ಬರಿಂದ ಒಂದಕ್ಕಿಂತ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿರುವುದು ಕಂಡುಬಂದಲ್ಲಿ ಅಂತಹವರ ಅರ್ಜಿಗಳನ್ನು ತಿರಸ್ಕರಿಸಲಾಗುವುದು).
ಅಪ್ಲೋಡ್ ಮಾಡುವ ಮೂಲ ದಾಖಲಾತಿಗಳು ಸ್ಪಷ್ಟವಾಗಿರಬೇಕು ಇಲ್ಲವಾದಲ್ಲಿ ಅರ್ಜಿಯನ್ನು ತಿರಸ್ಕರಿಸಲಾಗುವುದು. ಆಯಾ ತಾಲೂಕಿನ ಅರ್ಜಿದಾರರು ತಮ್ಮದೇ ತಾಲೂಕಿನಲ್ಲಿ ಅರ್ಜಿ ಸಲ್ಲಿಸಬೇಕು ತಾಲೂಕಾ ಹೆಸರು ಬದಲಾವಣೆಯಾದಲ್ಲಿ ಅಂತಹವರ ಅರ್ಜಿಯನ್ನು ತಿರಸ್ಕರಿಸಲಾಗುವುದು.
ಅಲ್ಲದೆ ಹೊಲಿಗೆಯಂತ್ರಕ್ಕಾಗಿ ಅರ್ಜಿ ಸಲ್ಲಿಸುವವರು ಕನಿಷ್ಠ 18 ವರ್ಷ ತುಂಬಿರಬೇಕು. ಗರಿಷ್ಠ 45 ವರ್ಷ ಮೀರಿರಬಾರದು. ಸುಧಾರಿತ ಸಲಕರಣೆಗಾಗಿ ಅರ್ಜಿ ಸಲ್ಲಿಸುವವರು 18 ವರ್ಷ ತುಂಬಿರಬೇಕು, ಗರಿಷ್ಠ 55 ವರ್ಷ ಮೀರಿರಬಾರದು. ನಿಗದಿಪಡಿಸಿದ ವಯಸ್ಸಿಗಿಂತ ಕಡಿಮೆ ಅಥವಾ ಹೆಚ್ಚು ಇರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ನಿಗದಿಪಡಿಸಲಾದ ಗುರಿಗಿಂತ ಹೆಚ್ಚಿನ ಅರ್ಜಿಗಳು ಸ್ವೀಕೃತವಾದಲ್ಲಿ ಆಯ್ಕೆ ಸಮಿತಿ ವತಿಯಿಂದ ಲಾಟರಿ ಎತ್ತುವ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು (ಆಯ್ಕೆ ಸಮಿತಿಯ ನಿರ್ಣಯವೇ ಅಂತಿಮವಾಗಿರುತ್ತದೆ).
ಅರ್ಜಿದಾರರು ಆನ್‌ಲೈನ್‌ನಲ್ಲಿ ಸಲ್ಲಿಸಿದ ಅರ್ಜಿಯ ಮೂಲ ಪ್ರತಿಯನ್ನು ಮತ್ತು ಅಪ್ಲೋಡ್ ಮಾಡಿದ ದಾಖಲಾತಿಗಳ ಒಂದು ಝರಾಕ್ಸ್ ಪ್ರತಿಯನ್ನು ಆಯ್ಕೆ ಪ್ರಕ್ರಿಯೆ ಮುಗಿಯುವವರೆಗೆ ತಮ್ಮಲ್ಲಿ ಕಾಯ್ದಿರಿಸಿಕೊಳ್ಳತಕ್ಕದ್ದು ಹಾಗೂ ಅಂತಿಮ ಆಯ್ಕೆ ಪಟ್ಟಿಯಲ್ಲಿ ತಮ್ಮ ಹೆಸರು ಆಯ್ಕೆಯಾದಲ್ಲಿ ಹೊಲಿಗೆಯಂತ್ರ/ಸುಧಾರಿತ ಸಲಕರಣೆ ಪಡೆದುಕೊಳ್ಳುವಾಗ ಆನ್‌ಲೈನ್‌ನಿಂದ ಸ್ವೀಕೃರಿಸಿದ ಅರ್ಜಿಯೊಂದಿಗೆ ಅಪ್ಲೋಡ್ ಮಾಡಿದ ಮೂಲ ದಾಖಲಾತಿಗಳ ತೋರಿಸಿ, ಒಂದು ಸೆಟ್ ಝರಾಕ್ಸ್ ಪ್ರತಿಯನ್ನು ಹಂಚಿಕೆ ಮಾಡುವ ಅಧಿಕಾರಿ ಅಥವಾ ಸಿಬ್ಬಂದಿಗಳಿಗೆ ಒದಗಿಸಬೇಕು.
ಆಸಕ್ತರು ಸಪ್ಟೆಂಬರ್ 8ರೊಳಗಾಗಿ ವೆಬ್‌ಸೈಟ್: http://www.raichur.nic.in ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ ಅಥವಾ ಉಪ ನಿರ್ದೇಶಕರ ಕಚೇರಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಪಂಚಾಯತ್, ಹೈದರಾಬಾದ್ ರಸ್ತೆ, ರಾಯಚೂರು ದೂರವಾಣಿ ಸಂಖ್ಯೆ: 08532-200946 ಅಥವಾ ಆಯಾ ತಾಲೂಕಿನ ಕೈಗಾರಿಕಾ ವಿಸ್ತರಣಾಧಿಕಾರಿಗಳ ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.