04/08/2025 2:42 AM

Translate Language

Home » ಲೈವ್ ನ್ಯೂಸ್ » ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳ ರಕ್ಷಣಾ ನೀತಿ ಅನುಷ್ಠಾನ ಕಡ್ಡಾಯ- ಡಾ. ಸುರೇಶ ಇಟ್ನಾಳ

ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳ ರಕ್ಷಣಾ ನೀತಿ ಅನುಷ್ಠಾನ ಕಡ್ಡಾಯ- ಡಾ. ಸುರೇಶ ಇಟ್ನಾಳ

Facebook
X
WhatsApp
Telegram

ಮಕ್ಕಳ ಹಕುಗಳು, ಕಾನೂನುಗಳು & ಮಕ್ಕಳ ರಕ್ಷಣಾ ನೀತಿಗಳು: ಪ.ಪೂ ಕಾಲೇಜು ಪ್ರಾಂಶುಪಾಲರಿಗೆ ತರಬೇತಿ

ಕೊಪ್ಪಳ.03.ಆಗಸ್ಟ್.25: ಕೊಪ್ಪಳ ಜಿಲ್ಲೆಯ ಎಲ್ಲಾ ಕಾಲೇಜು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳ ರಕ್ಷಣಾ ನೀತಿಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು ಎಂದು ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಹೇಳಿದರು.

ಅವರು ಶನಿವಾರ ಕೊಪ್ಪಳ ಜಿಲ್ಲಾ ಪಂಚಾಯತ್ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯುನಿಸೆಫ್-ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಮಕ್ಕಳ ಹಕ್ಕುಗಳು, ಮಕ್ಕಳಿಗೆ ಸಂಬಂಧಿಸಿದ ಕಾನೂನುಗಳು ಮತ್ತು ಮಕ್ಕಳ ರಕ್ಷಣಾ ನೀತಿಗಳ ಕುರಿತು ಜಿಲ್ಲೆಯ ಎಲ್ಲಾ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರಿಗೆ’ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿನ ಪ್ರತಿ ಮಗುವು ಸುರಕ್ಷಿತ, ರಕ್ಷಣಾತ್ಮಕ ಮತ್ತು ಸಶಕ್ತ ಪರಿಸರದಲ್ಲಿ ಬೆಳೆಯುವುದರೊಂದಿಗೆ, ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ಹಾಗೂ ಮಗುವು ತನ್ನ ಸಾಮರ್ಥ್ಯವನ್ನು ತಲುಪಲು ಅವಕಾಶಗಳನ್ನು ಒದಗಿಸುತ್ತದೆ. ಮಕ್ಕಳು ತಮ್ಮ ಹಕ್ಕುಗಳನ್ನು ಅನುಭವಿಸಲು ಮತ್ತು ಆನಂದಿಸಲು ಅನುಕೂಲಕರವಾದ ಪರಿಸರವನ್ನು ನಿರ್ಮಿಸಲು ರಾಜ್ಯದಲ್ಲಿನ ಎಲ್ಲಾ ಭಾಗೀದಾರರು ಅಂದರೆ, ಪೋಷಕರು, ಆರೈಕೆ ಸೇವೆಗಳನ್ನು ನೀಡುವವರು ಮತ್ತು ಸಮುದಾಯ ಒಟ್ಟುಗೂಡಿ ಕೆಲಸ ಮಾಡುವುದರೊಂದಿಗೆ ಮಕ್ಕಳ ಕುರಿತಾದ ತಾರತಮ್ಯಗಳನ್ನು ನಿವಾರಿಸುವ ಹಾಗೂ ಮಕ್ಕಳ ಭಾಗವಹಿಸುವಿಕೆ, ಸಂಭಾಷಣೆ ಮತ್ತು ಅಭಿಪ್ರಾಯಗಳನ್ನು ಗೌರವಿಸುವುದರೊಂದಿಗೆ ಮಗುವಿನ ಘನತೆಯನ್ನು ಎತ್ತಿ ಹಿಡಿಯುವುದಾಗಿದೆ ಎಂದರು.

ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ (ಕೆಎಸ್‌ಸಿಪಿಪಿ)ಯು ಮಕ್ಕಳ ಅಧಿಪತ್ಯದ ತತ್ವವನ್ನಾಧರಿಸಿದ ಮಕ್ಕಳ ರಕ್ಷಣೆಯ ಒಂದು ಸಮಗ್ರ ಭಾಗವಾಗಿದ್ದು, ಪ್ರಾಂಶುಪಾಲರು ನಿಮ್ಮ ಕಾಲೇಜು ಅಥವಾ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಮಕ್ಕಳ ರಕ್ಷಣಾ ನೀತಿ-2016 ಪರಿಷ್ಕರಣೆ-2023ನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸುವುದು ಮತ್ತು ಮಕ್ಕಳಿಗೆ ಸಂಬಂಧಿಸಿದ ಕಾನೂನುಗಳ ಬಗ್ಗೆ ಜಾಗೃತಿಯನ್ನು ಮೂಡಿಸುವ ಮೂಲಕ ಮಕ್ಕಳ ಮೇಲಾಗುವ ವಿವಿಧ ರೀತಿಯ ಅಪರಾಧಗಳನ್ನು ತಡೆಗಟ್ಟಬೇಕು ಎಂದು ಸೂಚನೆ ನೀಡಿದರು.

ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ ನೇಗಿ ಅವರು ಮಾತನಾಡಿ, ರಾಜ್ಯವನ್ನು ಬಾಲ್ಯವಿವಾಹ ಮುಕ್ತ ರಾಜ್ಯವನ್ನಾಗಿಸುವ ಸಂಕಲ್ಪದೊಂದಿಗೆ “ಬಾಲ್ಯವಿವಾಹ ನಿಷೇಧ ಕಾಯ್ದೆ-2006”ಕ್ಕೆ ತಿದ್ದುಪಡಿಯನ್ನು ತಂದಿದ್ದು, ಈ ತಿದ್ದುಪಡಿಯು ಘನತೆ ವೆತ್ತ ರಾಷ್ಟçಪತಿಗಳ ಅನುಮೋದನೆಯೊಂದಿಗೆ 2018 ರಿಂದ ಜಾರಿಯಲ್ಲಿದೆ. ಈ ಕಾಯ್ದೆಯನ್ವಯ ಅಪ್ರಾಪ್ತ ವಯಸ್ಸಿನ ಮಗುವಿನ ಮದುವೆಯು ಅಸಿಂಧು ವಿವಾಹವಾಗಿರುತ್ತದೆ. ಅಪ್ರಾಪ್ತ ವಯಸ್ಸಿನ ಮಗುವನ್ನು ಮದುವೆಯಾದವರಿಗೆ, ಮದುವೆಯನ್ನು ಮಾಡಿದವರಿಗೆ, ನಿರ್ದೇಶಿಸಿದವರಿಗೆ ಅಥವಾ ಭಾಗವಹಿಸಿದವರಿಗೆ 1 ರಿಂದ 2 ವರ್ಷಗಳ ಜೈಲು ಶಿಕ್ಷೆ ಮತ್ತು ರೂ. 1 ಲಕ್ಷದವರೆಗೆ ದಂಡ ವಿಧಿಸಬಹುದಾಗಿದೆ. ರಾಜ್ಯ ಸರಕಾರವು ಈ ಕಾಯ್ದೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಹಾಗೂ ಬಾಲ್ಯವಿವಾಹಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರನ್ನು ಸಹ “ಬಾಲ್ಯವಿವಾಹ ನಿಷೇದಾಧಿಕಾರಿಗಳನ್ನಾಗಿ” ನೇಮಿಸಿ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ತಾವುಗಳು ತಮ್ಮ ವ್ಯಾಪ್ತಿಯಲ್ಲಿ ನಡೆಯಬಹುದಾದ ಬಾಲ್ಯವಿವಾಹಗಳನ್ನು ತಡೆಗಟ್ಟಿ, ಬಾಲ್ಯವಿವಾಹ ಜರುಗಿದಲ್ಲಿ ಪ್ರಕರಣವನ್ನು ಕಡ್ಡಾಯವಾಗಿ ದಾಖಲಿಸಿ ತನ್ಮೂಲಕ ಬಾಲ್ಯವಿವಾಹ ಮುಕ್ತ ಕೊಪ್ಪಳ ಜಿಲ್ಲೆಯನ್ನಾಗಿಸಲು ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಿ ಎಂದು ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ ಎಸ್. ದರಗದ ಅವರು ಮಾತನಾಡಿ, ಮಕ್ಕಳು ಎಂದರೆ 18 ವರ್ಷದೊಳಗಿನ ಎಲ್ಲಾ ಮಾನವ ಜೀವಿಗಳು ಸಹ ಮಕ್ಕಳಾಗಿದ್ದು, ಮಕ್ಕಳ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ಕರ್ನಾಟಕ ರಾಜ್ಯದ ಮಾನ್ಯ ಉಚ್ಛ ನ್ಯಾಯಾಲಯ, ಎಲ್ಲಾ ಶೈಕ್ಷಣಿಕ ಸಂಸ್ಥೆಗಳಲ್ಲಿ ಮಕ್ಕಳ ರಕ್ಷಣಾ ನೀತಿ-2016 ಪರಿಷ್ಕರಣೆ-2023 ಅಳವಡಿಕೆ ಕಡ್ಡಾಯವೆಂದು ನಿರ್ದೇಶಿಸಿದೆ. ಆದ್ದರಿಂದ ಮಕ್ಕಳ ರಕ್ಷಣಾ ನೀತಿಯನ್ನು ಕಡ್ಡಾಯವಾಗಿ ತಮ್ಮ ಶೈಕ್ಷಣಿಕ ಸಂಸ್ಥೆಗಳಲ್ಲಿ ಅನುಷ್ಟಾನಗೊಳಿಸಿ, ಮಕ್ಕಳಿಗೆ ಮಕ್ಕಳ ಹಕ್ಕುಗಳ ಮತ್ತು ಮಕ್ಕಳ ಪರವಾದ ಕಾನೂನುಗಳ ಕುರಿತು ವ್ಯಾಪಕ ಜಾಗೃತಿಯನ್ನು ಮೂಡಿಸಬೇಕು. ಈ ಯಾವುದೇ ರೀತಿಯ ಸಹಕಾರಬೇಕಾಗಿದ್ದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ನೀಡಲಾಗುವುದು ಎಂದರು.

ಯುನಿಸೆಫ್-ಮಕ್ಕಳ ರಕ್ಷಣಾಯೋಜನೆಯ ವಿಭಾಗೀಯ ಸಂಯೋಜಕ ಡಾ. ಕೆ.ರಾಘವೇಂದ್ರ ಭಟ್ ಅವರು ಮಕ್ಕಳ ಹಕ್ಕುಗಳು & ಮಕ್ಕಳ ರಕ್ಷಣಾ ನೀತಿ-2006 ಪರಿಷ್ಕರಣೆ-2023ರ ಕುರಿತು, ಯುನಿಸೆಫ್-ಮಕ್ಕಳ ರಕ್ಷಣಾಯೋಜನೆ ಕೊಪ್ಪಳ ವ್ಯವಸ್ಥಾಪಕ ಹರೀಶಜೋಗಿ ಅವರು ಬಾಲ್ಯವಿವಾಹ ನಿಷೇಧ ಕಾಯ್ದೆ-2006 ಕರ್ನಾಟಕ ತಿದ್ದುಪಡಿ-2023ರ ಕುರಿತು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಾಹಾಂತ ಸ್ವಾಮಿ ಪೂಜಾರ ಅವರು ಮಿಷನ್ ವಾತ್ಸಲ್ಯ ಕುರಿತು ತರಬೇತಿ ನೀಡಿದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪರಶುರಾಮ ವ್ಹಾಯ್ ಶೆಟೆಪ್ಪನವರ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಪ್ರಕಾಶ ಕಡಗದ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಗದೀಶ, ಶಾಲಾ ಶಿಕ್ಷಣ & ಸಾಕ್ಷರತಾ ಇಲಾಖೆಯ ಎ.ಬಸವರಾಜ ಸೇರಿದಂತೆ ಜಿಲ್ಲೆಯ ಎಲ್ಲಾ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು.
ಶಿವಲೀಲಾ ವನ್ನೂರು ಕಾರ್ಯಕ್ರಮ ನಿರೂಪಿಸಿದರು, ಪ್ರಶಾಂತ ರೆಡ್ಡಿ ಸ್ವಾಗತಿಸಿದರು. ರವಿಕುಮಾರ ಪವಾರ ಪ್ರಸ್ತಾವಿಕವಾಗಿ ಮಾತನಾಡಿದರ. ಪ್ರತಿಭಾ ಅವರು ಪ್ರಾರ್ಥನೆ ಗೀತೆ ಹಾಡಿದರು ಮತ್ತು ರವಿ ಬಡಿಗೇರ ವಂದಿಸಿದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!