ಕೊಪ್ಪಳ.03.ಆಗಸ್ಟ್.25: ಕೊಪ್ಪಳ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ವಿಕಲಚೇತನರ ಕಲ್ಯಾಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಮತ್ತು ಸೇವೆ ಸಲ್ಲಿಸಿರುವ ವ್ಯಕ್ತಿ, ಸಂಸ್ಥೆ ಹಾಗೂ ವಿಶೇಷ ಶಿಕ್ಷಕರಿಗೆ ರಾಜ್ಯ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಪ್ರತಿ ವರ್ಷ ಡಿಸೆಂಬರ್ 3 ರಂದು “ವಿಶ್ವ ವಿಕಲಚೇತನರ ದಿನಾಚರಣೆಯ” ಅಂಗವಾಗಿ ವಿಕಲಚೇತನರ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಮತ್ತು ಸೇವೆ ಸಲ್ಲಿಸಿರುವ ವೈಯಕ್ತಿಕ ವಿಭಾಗ, ಸಂಸ್ಥೆ ಮತ್ತು ವಿಶೇಷ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಥವಾ ಸಲ್ಲಿಸಿರುವ ಶಿಕ್ಷಕರಿಗೆ ರಾಜ್ಯ ಪ್ರಶಸ್ತಿಯನ್ನು ನೀಡಲು ಪ್ರಸ್ತಾವನೆಗಳನ್ನು ಆಹ್ವಾನಿಸಿದ್ದು, ನಿಗದಿತ ಅರ್ಜಿ ನಮೂನೆಗಳನ್ನು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಇಲಾಖೆಯಿಂದ ಪಡೆದು ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವಾಗ ಈ ಹಿಂದೆ ವಿಕಲಚೇತನರ ಕ್ಷೇತ್ರದಲ್ಲಿ ರಾಜ್ಯ ಪ್ರಶಸ್ತಿ ಪಡೆಯದಿರುವ ಬಗ್ಗೆ ಸ್ವಯಂ ದೃಢೀಕರಣ ಪ್ರಮಾಣ ಪತ್ರ ಹಾಗೂ ಯಾವುದೇ ಪೊಲೀಸ್ ಪ್ರಕರಣಗಳು ಇಲ್ಲದಿರುವ ಬಗ್ಗೆ ಪೋಲಿಸ್ ಇಲಾಖೆಯಿಂದ ದೃಢೀಕರಣಗಳೊಂದಿಗೆ ದ್ವಿ-ಪ್ರತಿಗಳಲ್ಲಿ ಅಕ್ಟೋಬರ್ 15 ರೊಳಗೆ ನಗರಾಭಿವೃದ್ಧಿ ಪ್ರಾಧಿಕಾರ ಕಾರ್ಯಾಲಯ ಆವರಣದಲ್ಲಿನ ಕೊಠಡಿ ಸಂಖ್ಯೆ 31 ಮತ್ತು 32ರ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಛೇರಿಗೆ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ತಾಲೂಕು ಪಂಚಾಯತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಂ.ಆರ್.ಡಬ್ಲ್ಯೂ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಯು.ಆರ್.ಡಬ್ಲ್ಯೂ ಹಾಗೂ ಗ್ರಾಮ ಪಂಚಾಯತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿ.ಆರ್.ಡಬ್ಲ್ಯೂ ರವರನ್ನು ಸಂಪರ್ಕಿಸಬಹುದು ಎಂದು ಕೊಪ್ಪಳ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.