ಕಾರವಾರ.23.ಜುಲೈ.25:- ರಾಜ್ಯಾದ್ಯಂತ ಸುಳ್ಳು ದಾಖಲೆ ಮೂಲಕ ಸಾಮಾಜಿಕ ಭದ್ರತಾ ಪಿಂಚಣಿ ಪಡೆಯುತ್ತಿರುವ 11.80 ಲಕ್ಷ ಅನುಮಾನಾಸ್ಪದ ಪ್ರಕರಣಗಳು ಬಹಿರಂಗ.
ಸಾಮಾಜಿಕ ಭದ್ರತಾ ಪಿಂಚಣಿ ಪಡೆಯುತ್ತಿರುವ 11.80 ಲಕ್ಷ ಅನುಮಾನಾಸ್ಪದ ಪ್ರಕರಣಗಳು ಕಂಡು ಬಂದಿದ್ದು, ಇವುಗಳ ನೈಜತೆ ಪರಿಶೀಲಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಅವರು ಮಾತನಾಡಿ, ಅರ್ಹ ವ್ಯಕ್ತಿಗಳಿಗೆ ಸರಕಾರದ ಸಾಮಾಜಿಕ ಭದ್ರತ ಪಿಂಚಣಿ ಪ್ರಯೋಜನ ದೊರೆಯಬೇಕು.
ಆದರೆ ರಾಜ್ಯದಲ್ಲಿ 11.80 ಲಕ್ಷ ಮಂದಿ ಅನುಮಾನಾಸ್ಪದವಾಗಿ ಸುಳ್ಳು ದಾಖಲೆ ಸಲ್ಲಿಸಿ ವೃದ್ಧಾಪ್ಯ ಪಿಂಚಣಿ ಪಡೆಯುತ್ತಿರುವುದು ಪ್ರಾಥಮಿಕ ಮಾಹಿತಿಯಲ್ಲಿ ತಿಳಿದುಬಂದಿದ್ದು, ಇದರಲ್ಲಿ 13,702 ಮಂದಿ ಆದಾಯ ತೆರಿಗೆ ಪಾವತಿದಾರರು, 117 ಮಂದಿ ಸರಕಾರಿ ನೌಕರರು ಮತ್ತು ಎಪಿಎಲ್ ಕಾರ್ಡ್‌ದಾರರಿದ್ದಾರೆ ಎಂದರು.
ಆಧಾರ್ ಪರಿಶೀಲನೆ ವೇಳೆ ಇವರ ವಯಸ್ಸು ಯೋಜನೆಗೆ ಅರ್ಹವಾದ ವಯಸ್ಸಿಗಿಂತ ಕಡಿಮೆ ಇರುವುದು ಕಂಡು ಬಂದಿದೆ. ಅಲ್ಲದೇ ಆರೋಗ್ಯಕರವಾಗಿ ಇರುವವರು ಕೂಡ ಅಂಗವಿಕಲ ಪ್ರಮಾಣ ಪತ್ರ ಪಡೆದು ಅಂಗವಿಕಲ ಪಿಂಚಣಿ ಪಡೆಯುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಇಂತಹ ಪ್ರಕರಣಗಳ ಬಗ್ಗೆ ಪುನರ್ ಪರಿಶೀಲನೆ ಮಾಡಲಾಗುವುದು ಎಂದರು.
ರಾಜ್ಯದಲ್ಲಿ ಪೌತಿ ಖಾತೆ ಆಂದೋಲನವನ್ನು ಆನ್‌ಲೈನ್ ಮೂಲಕ ಆರಂಭಿಸಲಾಗಿದ್ದು, ರಾಜ್ಯದಲ್ಲಿ 52.55 ಲಕ್ಷ ಜಮೀನುಗಳು ಮೃತ ರೈತರ ಹೆಸರಿನಲ್ಲಿ ಮುಂದುವರಿದಿದ್ದು ಕೇಂದ್ರ ಸರಕಾರ ಮೃತರ ಹೆಸರಿನಲ್ಲಿ ಇರುವ ಜಮೀನುಗಳಿಗೆ ಪಿಎಂ ಕಿಸಾನ್ ಸೇರಿದಂತೆ ಇತರ ಯೋಜನೆಗಳ ಸಬ್ಸಿಡಿ ನೀಡದಂತೆ ಸೂಚಿಸಿದೆ. ಇದರಿಂದಾಗಿ ಮೃತರ ಹೆಸರಿನಲ್ಲಿರುವ ಜಮಿನುಗಳನ್ನು ಅವರ ವಾರಸುದಾರಿಗೆ ಖಾತೆ ಬದಲಾವಣೆ ಮಾಡುವ ಅನಿವಾರ್ಯತೆ ಇದೆ. ಇದಕ್ಕಾಗಿ ಕಂದಾಯ ಇಲಾಖೆ ಅಧಿಕಾರಿಗಳ ಮೂಲಕ ಜನರ ಮನೆ ಬಾಗಿಲಿಗೆ ತೆರಳಿ ಖಾತೆ ಬದಲಾವಣೆ ಮಾಡಲಾಗುತ್ತಿದೆ.
ರಾಜ್ಯದಲ್ಲಿ ಒಂದು ತಿಂಗಳಲ್ಲಿ 20 ಸಾವಿರ ರೈತರ ಜಮೀನುಗಳನ್ನು ಮೃತರ ವಾರಸುದಾರರಿಗೆ ವರ್ಗಾವಣೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಈ ಕಾರ್ಯವನ್ನು ಆದಷ್ಟು ಶೀಘ್ರ ಮಾಡಲಾಗುವುದು ಎಂದರು.