ಬೆಂಗಳೂರು.23.ಜುಲೈ.25:- ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮುಖ ಚಹರೆ ಗುರುತಿಸುವಿಕೆ (ಎಫ್‌ಆರ್‌ಎಸ್) ವ್ಯವಸ್ಥೆಯಿಂದ ಪ್ರಯೋಜನವಿಲ್ಲ. ಹಾಗಾಗಿ ಎಫ್‌ಆರ್‌ಎಸ್ ರದ್ದುಗೊಳಿಸಬೇಕು ಎಂದು ವಿವಿಧ ಕ್ಷೇತ್ರದ ತಜ್ಞರು ಒತ್ತಾಯಿಸಿದರು. ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಹಾಜರಾತಿ ಖಚಿತಪಡಿಸಿಕೊಳ್ಳಲು ಮುಖ ಚಹರೆ ಗುರುತಿಸುವಿಕೆ ಯೋಜನೆ ರದ್ದುಗೊಳಿಸಬೇಕು.
ನಗರದಲ್ಲಿ ಮಂಗಳವಾರ ರಾಜ್ಯ ಅಂಗನವಾಡಿ ನೌಕರರ ಸಂಘ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ ಜಂಟಿಯಾಗಿ ಮುಖ ಚಹರೆ ಗುರುತಿಸುವಿಕೆ ವ್ಯವಸ್ಥೆಯ ಅನುಷ್ಠಾನದಿಂದ ಆಹಾರ ಮತ್ತು ಶಿಕ್ಷಣದ ಹಕ್ಕಿನ ಮೇಲೆ ಯಾವ ಪರಿಣಾಮ ಬೀಳುತ್ತದೆ ಎಂಬುದರ ಕುರಿತು ಆಯೋಜಿಸಿದ್ದ ಸಮಾಲೋಚನಾ ಸಭೆಯಲ್ಲಿ ಎಫ್‌ಆರ್‌ಎಸ್ ಜಾರಿಗೆ ವಿರೋಧ ವ್ಯಕ್ತವಾಯಿತು.
ಒಂದೆಡೆ, ಕೇಂದ್ರ ಸರ್ಕಾರ ಪಿಎಂ-ಪೋಷಣ್ ಯೋಜನೆಯಡಿ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಪೌಷ್ಟಿಕ ಆಹಾರ ನೀಡಲು ಮುಖ ಚಹರೆ ಗುರುತಿಸುವಿಕೆ ವ್ಯವಸ್ಥೆ ಜಾರಿಗೊಳಿಸಿದೆ.
ಮತ್ತೊಂದೆಡೆ, ರಾಜ್ಯ ಸರ್ಕಾರವು ಎಫ್‌ಆರ್‌ಎಸ್ ಜಾರಿಗೆ ತರುವ ಮುನ್ನ ಸಾರ್ವಜನಿಕ ಚರ್ಚೆಗಳನ್ನಾಗಲೀ, ಪಾಲುದಾರರ ಅಭಿಪ್ರಾಯವನ್ನಾಗಲಿ ಆಲಿಸದೆ ಏಕಾಏಕಿ ಜಾರಿಗೊಳಿಸಿದೆ. ಮೊದಲು ಖಾಲಿಯಿರುವ 55 ಸಾವಿರ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು ಹಾಗೂ ಕಲ್ಯಾಣ ಕಾರ್ಯಕ್ರಮಗಳಿಗೆ ಪೂರಕವಲ್ಲದ ಎಫ್‌ಆರ್‌ಎಸ್ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಭಾರತ ಜ್ಞಾನ ವಿಜ್ಞಾನ ಸಮಿತಿಯ ಉಪಾಧ್ಯಕ್ಷ ಶುಭಂಕರ್ ಚಕ್ರವರ್ತಿ ಮಾತನಾಡಿ, ‘ಶಿಕ್ಷಕರ ಗೈರುಹಾಜರಾತಿ ಅತ್ಯಂತ ಕಡಿಮೆ ಪ್ರಮಾಣ ಇರುವ ಕರ್ನಾಟದಲ್ಲಿ ಎಫ್‌ಆರ್‌ಎಸ್ ಪರಿಚಯಿಸಲಾಗಿದೆ. ಇದು ಅವಶ್ಯವೇ ಅಲ್ಲ. ನಾಗರಿಕ ಸಮಾಜ ಒಗ್ಗೂಡಿ ಇದರ ವಿರುದ್ಧ ಹೋರಾಡಬೇಕು’ ಎಂದು ಕರೆ ನೀಡಿದರು.
ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್.ವರಲಕ್ಷ್ಮಿ ಮಾತನಾಡಿ, ‘ಐಸಿಡಿಎಸ್ ಯೋಜನೆಯನ್ನು ಕೆಲವೇ ಫಲಾನುಭವಿಗಳಿಗೆ ಸೀಮಿತಗೊಳಿಸುವ ಹುನ್ನಾರವಾಗಿದೆ. ಎಫ್‌ಆರ್‌ಎಸ್ ವ್ಯವಸ್ಥೆ ಜಾರಿಗೆ ತರುವಲ್ಲಿ ಬಹಳ ಸಮಸ್ಯೆಗಳು ತಲೆದೋರಿದ್ದು, ಇದನ್ನು ಜಾರಿಗೊಳಿಸದ ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಇಲಾಖೆ ಕ್ರಮಗಳನ್ನು ಜರುಗಿಸಲು ಮುಂದಾಗಿದೆ. ಇದರಿಂದ ನೌಕರರಿಗೆ ಕೆಲಸದ ಒತ್ತಡ ಹೆಚ್ಚಾಗಿದೆ’ ಎಂದು ತಿಳಿಸಿದರು.
ಶಿಕ್ಷಣ ತಜ್ಞೆ ಡಾ.ದೀಪಾ ಸಿನ್ಹಾ ಮಾತನಾಡಿ, ‘ಐಸಿಡಿಎಸ್ ಯೋಜನೆಯಲ್ಲಿ ಎಫ್‌ಆರ್‌ಎಸ್ ಪರಿಚಯಿಸುತ್ತಿರುವುದು ಸಾಮಾಜಿಕ ಭದ್ರತಾ ಯೋಜನೆಗಳ ಮೇಲೆ ನಡೆಸುತ್ತಿರುವ ದಾಳಿಯಾಗಿದೆ. ಸಮಸ್ಯೆ ಬಗೆಹರಿಸಲು ಅನುದಾನ ಹೆಚ್ಚಿಸುವ ಬದಲು, ಎಫ್‌ಆರ್‌ಎಸ್ ಹೆಸರಿನಲ್ಲಿ ಫಲಾನುಭವಿಗಳನ್ನು ಹೊರದೂಡುವ ಮಾರ್ಗಗಳನ್ನು ಸರ್ಕಾರ ಕಂಡುಕೊಳ್ಳಲು ಪ್ರಯತ್ನಿಸಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಸಭೆಯಲ್ಲಿ ಫ್ರೀ ಸಾಫ್ಟ್‌ವೇರ್ ಮೂವ್‌ಮೆಂಟ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ನವೀನ್, ವಕೀಲ ವಿನಯ್ ಶ್ರೀನಿವಾಸ್, ಕಾನೂನು ಕೇಂದ್ರದ ಸುಧಾ, ಸಿವಿಕ್ ಸಂಸ್ಥೆಯ ಕಾತ್ಯಾಯಿನಿ ಚಾಮರಾಜ್ ಪಾಲ್ಗೊಂಡಿದ್ದರು.
ಎಫ್‌ಆರ್‌ಎಸ್: ಸಾಂವಿಧಾನಿಕ ಮೌಲ್ಯಗಳ ಮೇಲಿನ ದಾಳಿ’ ‘ಎಫ್‌ಆರ್‌ಎಸ್ ಪದ್ಧತಿಯು ಸ್ವಾತಂತ್ರ‍್ಯ ಸಮಾನತೆ ಭ್ರಾತೃತ್ವ ಮತ್ತು ಘನತೆಯ ಸಾಂವಿಧಾನಿಕ ಮೌಲ್ಯಗಳ ಮೇಲಿನ ದಾಳಿಯಾಗಿದೆ. ಇದು ಒಂದು ಕಣ್ಗಾವಲು ವ್ಯವಸ್ಥೆಯಾಗಿದೆ. ಅಲ್ಲದೇ ಅದನ್ನು ಮೊಟ್ಟ ಮೊದಲು ರೂಪಿಸಿದ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿಯೇ ಈ ತಂತ್ರಜ್ಞಾನವನ್ನು ಬಳಸದಿರಲು ನಿರ್ಣಯ ಕೈಗೊಳ್ಳಲಾಗಿದೆ. ಹೀಗಿರುವಾಗ ಎಫ್‌ಆರ್‌ಎಸ್‌ನ್ನು ನಮ್ಮ ಹಳ್ಳಿಗಳಲ್ಲಿ ಯಾಕೆ ಜಾರಿಗೊಳಿಸಬೇಕು’ ಎಂದು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ರಾಜೇಂದ್ರನ್ ನಾರಾಯಣನ್ ಪ್ರಶ್ನಿಸಿದರು.