ಬೀದರ.22.ಜುಲೈ.25:- ಜಿಲ್ಲೆಯ ಸಾರ್ವಜನಿಕರು ಭಿಕ್ಷೆ ಬೇಡುತ್ತಿರುವವರು ಕಂಡು ಬಂದರೆ ಅವರಿಗೆ ಭಿಕ್ಷೆ ನೀಡಿ ಪ್ರೋತ್ಸಾಹಿಸದೇ ಅದನ್ನು ಬಹಿಷ್ಕರಿಸಿ, ಬೀದರ ಜಿಲ್ಲೆಯನ್ನು “ಭಿಕ್ಷಾಟನೆ ಮುಕ್ತ” ಜಿಲ್ಲೆಯನ್ನಾಗಿಸಲು ಸಾರ್ವಜನಿಕರು ಸಹಕರಿಸಬೇಕೆಂದು ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಭಿಕ್ಷೆ ಬೇಡುತ್ತಿರುವವರು ಕಂಡು ಬಂದರೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಅಥವಾ ಟೋಲ್ ಫ್ರೀ ಸಂಖ್ಯೆ 10581 ಮತ್ತು ಸಹಾಯವಾಣಿ ಸಂಖ್ಯೆ: 9482300400, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದಡಿ ನಡೆಯುವ ಮಕ್ಕಳ ಸಹಾಯವಾಣಿ 1098 ಹಾಗೂ ಪೊಲೀಸ ಸಹಾಯವಾಣಿ 112ಗೆ ಅಥವಾ ಸಮೀಪದ ಪೊಲೀಸ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಭಿಕ್ಷಾಟನೆಯನ್ನು ತಡೆಗಟ್ಟಲು ಸರ್ಕಾರವು ಕರ್ನಾಟಕ ಭಿಕ್ಷಾಟನೆ ನಿಷೇಧ ಕಾಯ್ದೆ 1975ರ ಪ್ರಕಾರ ಮೂರು ತಿಂಗಳು ಕಠಿಣ ಕಾರಗೃಹವಾಸ ಹಾಗೂ ದಂಡವನ್ನು ವಿಧಿಸಲಾಗುವುದು. ಅದೇ ರೀತಿ ಮಕ್ಕಳನ್ನು ಭಿಕ್ಷಾಟನೆಗೆ ಬಳಸಿದ್ದಲ್ಲಿ ಬಾಲನ್ಯಾಯ (ಮಕ್ಕಳ ರಕ್ಷಣೆ ಮತ್ತು ಪೋಷಣೆ) ಕಾಯ್ದೆ 2015 ಮತ್ತು ತಿದ್ದುಪಡಿ ಕಾಯ್ದೆ 2021ರ 76ರ ಪ್ರಕಾರ 05 ವರ್ಷ ಕಾರಾಗೃಹ ವಾಸ ಮತ್ತು ರೂ. 1.00 ಲಕ್ಷದ ವರೆಗೆ ದಂಡವನ್ನು ವಿಧಿಸಲಾಗುವುದೆಂದರು.
ಬೀದರ ಜಿಲ್ಲೆಯಲ್ಲಿ ವಿವಿಧ ತಾಲ್ಲೂಕು ಮತ್ತು ನಗರ ಪ್ರದೇಶಗಳ ವಿವಿಧ ಪ್ರಮುಖ ವೃತ್ತಗಳು, ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣ ಮತ್ತು ಜನ ಸಂದಣಿಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಅಧಿಕ ಸಂಖ್ಯೆಯಲ್ಲಿ ಭಿಕ್ಷೆ ಬೇಡುತ್ತ, ಸಾರ್ವಜನಿಕರಿಗೆ ಉಪದ್ರವ ನೀಡುತ್ತಿರುವುದು ಕಂಡು ಬಂದಿರುತ್ತದೆ. ಅದರಲ್ಲಿ ವಿಶೇಷವಾಗಿ ಮಹಿಳೆಯರು ಹಣ ಸಂಪಾದನೆಗಾಗಿ ಶಿಶುಗಳನ್ನು ತಮ್ಮ ಮಡಿಲಲ್ಲಿ ಹಾಕಿಕೊಂಡು ಭಿಕ್ಷೆ ಬೇಡುವುದು ನಾಗರೀಕ ಸಮಾಜಕ್ಕೆ ತಲೆ ತಗ್ಗಿಸುವಂತಾಗಿದೆ ಹಾಗೂ ಅಮಾನವೀಯ ವಿಷಯವಾಗಿದೆ.
ಭಿಕ್ಷಾಟನೆ ಒಂದು ಸಾಮಾಜಿಕ ಪಿಡುಗು. ಇದು ಬಡತನ, ನಿರುದ್ಯೋಗ, ಸಾಮಾಜಿಕ ಅಸಮಾನತೆಯಿಂದ ಉಂಟಾಗಿರುತ್ತದೆ. ಭಿಕ್ಷಾಟನೆಯು ವ್ಯಕ್ತಿಗಳ ಆತ್ಮ ಗೌರವವನ್ನು ಕುಗ್ಗಿಸುತ್ತದೆ. ಮತ್ತು ಸಮಾಜದ ಮೇಲೆ ನಕರಾತ್ಮಕ ಪರಿಣಾಮಗಳನ್ನು ಬೀರುತ್ತದೆ.
ಭಿಕ್ಷಾಟನೆಯನ್ನು ತಡೆಗಟ್ಟಲು ಮತ್ತು ನಿರ್ಮೂಲನೆ ಮಾಡಲು ಸಾಮೂಹಿಕ ಪ್ರಯತ್ನಗಳು ಮತ್ತು ಪರಿಹಾರ ಕ್ರಮಗಳು ಅಗತ್ಯವಾಗಿವೆ. ಹಾಗಾಗಿ ಜಿಲ್ಲೆಯಲ್ಲಿ ಭಿಕ್ಷಾಟನೆಯನ್ನು ತಡೆಗಟ್ಟಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಈಗಾಗಲೇ ಪತ್ರ ಬರೆದು ಭಿಕ್ಷಾಟನೆಯನ್ನು ನಿರ್ಮೂಲನೆ ಮಾಡಲು ಕಾರ್ಯಪ್ರವೃತ್ತರಾಗುವಂತೆ ಸೂಚಿಸಲಾಗಿದೆ. ಅದೇ ರೀತಿ ಸಾರ್ವಜನಿಕರು ಸಹ ಭಿಕ್ಷಾಟನೆಯನ್ನು ಪ್ರೋತ್ಸಾಹಿಸದೇ ಇದನ್ನು ನಿರ್ಮೂಲನೆಯನ್ನು ಮಾಡಲು ಭಿಕ್ಷಾಟನೆಯನ್ನು ಬಹಿಷ್ಕರಿಸಬೇಕೆಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.