ಬೀದರ.20.ಜುಲೈ.25:-ರಾಷ್ಟ್ರೀಯ ಸೇವಾ ಯೋಜನೆ ಶಿಬಿರಗಳಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದೊಂದಿಗೆ, ಸರ್ವತೋಮುಖ ಕ್ರಿಯಾಶೀಲ ಮನೋಭಾವ ಬೆಳೆಯುತ್ತದೆ ಎಂದು ಬೀದರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಬಿ.ಎಸ್.ಬಿರಾದಾರರ ನುಡಿದರು.
ಅವರು ಇತ್ತೀಚಿಗೆ ಬೀದರ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಮಳಚಾಪೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಅಭ್ಯಾಸದ ಸಂದರ್ಭದಲ್ಲಿ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ರಾಷ್ಟ್ರೀಯ ಸೇವಾ ಯೋಜನೆ ಅವಕಾಶ ಕಲ್ಪಿಸುತ್ತದೆ. ಯುವ ಜನಾಂಗದ ಮೇಲೆ ಮಹತ್ವದ ಜವಾಬ್ದಾರಿಯಿದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕೆಂದರು.
ಬೀದರ ವಿಶ್ವವಿದ್ಯಾಲಯದ ಆಡಳಿತ ಕುಲಸಚಿವರಾದ ಸುರೇಖಾ ಕೆ.ಎ.ಎಸ್. ಮಾತನಾಡಿ, ಶ್ರಮ ಸಂಸ್ಕೃತಿ, ನಿಸ್ವಾರ್ಥ ಮನೋಭಾವ ಬೆಳೆಸಿಕೊಳ್ಳಬೇಕು. ಮನುಷ್ಯನಲ್ಲಿ ಅಹಂ ಬರಬಾರದು, ಸೂರ್ಯ-ಚಂದ್ರ, ನಕ್ಷತ್ರಗಳು ನಿಸ್ವಾರ್ಥದಿಂದ ಈ ಜಗತ್ತನ್ನು ಬೆಳಗುತ್ತಿವೆ. ಈ ಜಗತ್ತಿನಲ್ಲಿ ಮನುಷ್ಯ ಒಂದು ಕಣ ಮಾತ್ರ. ಮನುಷ್ಯ ಜನ್ಮವೇ ಕ್ಷಣಿಕ. ಹೀಗಾಗಿ ನಿರಹಂಕಾರದಿಂದ ಬಾಳುತ್ತಾ ಪರಿಪೂರ್ಣ ವ್ಯಕ್ತಿತ್ವ ರೂಪಿಸಿಕೊಳ್ಳಬೇಕಾಗಿದೆ. ಪದವಿಗಿಂತ ವ್ಯಕ್ತಿತ್ವ ಮುಖ್ಯವಾಗುತ್ತದೆ. ಜೀವನದಲ್ಲಿ ಶಿಸ್ತು ಮುಖ್ಯವಾಗುತ್ತದೆ.
ಜೀವನದಲ್ಲಿ ತಾಳ್ಮೆ, ಸಹನೆ, ನಿಷ್ಠೆ ಮುಖ್ಯವಾಗಿದೆ. ಹೀಗಾಗಿ ಎಲ್ಲರೂ ಉತ್ತಮ ಜೀವನ ರೂಪಿಸಿಕೊಳ್ಳಬೇಕಾಗಿದೆ ಎಂದರು.
ಬೀದರ ತಾಲ್ಲೂಕು ಪಂಚಾಯತ್‌ನ ಅಧಿಕಾರಿ ಚಂದ್ರಶೇಖರ ಮಾತನಾಡಿ, ವಿದ್ಯಾರ್ಥಿಗಳು ಈ ಮಹತ್ವದ ಜೀವನವನ್ನು ವ್ಯರ್ಥ ಮಾಡಿಕೊಳ್ಳದೆ ಸಾರ್ಥಕ ಮಾಡಿಕೊಳ್ಳಬೇಕು. ಜೀವನದ ಪ್ರತಿ ಕ್ಷಣವೂ ಸಹ ಮಹತ್ವದ್ದಾಗಿದೆ. ಕಳೆದ ಸಮಯ ಬಾರದು ಹಾಗಾಗಿ ಸಮಯಕ್ಕೆ ಮಹತ್ವ ನೀಡಬೇಕೆಂದರು.
ಈ ಸಂದರ್ಭದಲ್ಲಿ ಬೀದರ ವಿಶ್ವವಿದ್ಯಾಲಯದ ವಾಣಿಜ್ಯ ನಿಕಾಯದ ಡೀನರಾದ ಡಾ.ಶರಣಪ್ಪ ಮಲಗೊಂಡ, ಬೀದರ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕರಾದ ಡಾ.ರವೀಂದ್ರನಾಥ ವಿ.ಗಬಾಡಿ ಬೀದರ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಕಾರ್ಯಕ್ರಮ ಅಧಿಕಾರಿ ಡಾ.ರಾಮಚಂದ್ರ ಗಣಾಪೂರ, ಮಳಚಾಪೂರ ಗ್ರಾಮದ ಮುಖಂಡರಾದ ಪ್ರಭು ಪಾಟೀಲ, ಗುಂಡಪ್ಪ ಜ್ಯಾಂತೆ ಸೇರಿದಂತೆ ಬೀದರ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾರ್ಥಿಗಳು, ಗ್ರಾಮಸ್ಥರು, ವಿಶ್ವವಿದ್ಯಾಲಯದ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಾಣಿಶ್ರೀ ಪ್ರಾರ್ಥಿಸಿದರು, ಅಭಿಷೇಕರವರು ಕಾರ್ಯಕ್ರಮ ನಿರೂಪಿಸಿದರು.