ಬೆಂಗಳೂರು.18.ಜುಲೈ.25:- ರಾಜ್ಯದ ಶಾಲೆಗಳಲ್ಲಿ ಸಹ ಪಂಕ್ತಿ ಭೋಜನ ವ್ಯವಸ್ಥೆ ಪಾಲಿಸುವ ಕುರಿತು ಶಿಕ್ಷಣ ಇಲಾಖೆ ವತಿಯಿಂದ ಆದೇಶ ಹೊರಡಿಸಿದೆ.
ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಪಿ.ಎಂ.ಪೋಷಣ್ ಶಕ್ತಿ ನಿರ್ಮಾಣ್ ಯೋಜನೆಯಡಿಯಲ್ಲಿ ನೀಡಲಾಗುತ್ತಿರುವ ಬಿಸಿಯೂಟ ಮತ್ತು ಕ್ಷೀರಭಾಗ್ಯ ಯೋಜನೆಯನ್ನು ಅನುಷ್ಠಾನ ಮಾಡುವ ಸಂದರ್ಭದಲ್ಲಿ ಸರ್ಕಾರದ SOP ಮಾರ್ಗಸೂಚಿಗಳನ್ನು ಪಾಲಿಸುವಂತೆ ಅನೇಕ ಬಾರಿ ತಿಳಿಸಿದಾಗ್ಯೂ ಶಾಲಾ ಸಂದರ್ಶನ ಸಮಯದಲ್ಲಿ ಮಕ್ಕಳನ್ನು ಸಹ ಪಂಕ್ತಿಯಲ್ಲಿ ಕುಳ್ಳಿರಿಸದೇ ಇರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ.
ಉಲ್ಲೇಖಿತ ಆದೇಶವನ್ನು ಈ ಪತ್ರಕ್ಕೆ ಲಗತ್ತಿಸಿದೆ, ಸರ್ಕಾರ/ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಸಹ ಪಂಕ್ತಿಯಲ್ಲಿ ಮಕ್ಕಳನ್ನು ಕುಳ್ಳಿರಿಸಿ ಬಿಸಿಯೂಟ ಮತ್ತು ಕ್ಷೀರಭಾಗ್ಯ ಯೋಜನೆಯನ್ನು ಅನುಷ್ಠಾನಗೊಳಿಸದೇ ಇದ್ದಲ್ಲಿ ಅಥವಾ ಉಲ್ಲೇಖಿತ ಆದೇಶದ ಮಾರ್ಗಸೂಚಿಗಳನ್ನು ಪಾಲಿಸದೇ ಇದ್ದಲ್ಲಿ ಸದರಿ ಕರ್ತವ್ಯ ಲೋಪಕ್ಕೆ ಕಾರಣರಾದ ಮುಖ್ಯ ಶಿಕ್ಷಕರ ಮೇಲೆ ಶಿಸ್ತಿನ ಕ್ರಮವಹಿಸಲಾಗುವುದು.
ಮುಂದುವರೆದು ಶಾಲೆಗಳಿಗೆ ಸಂದರ್ಶನ ನೀಡುವ ಸಿ.ಆರ್.ಪಿ/ಬಿ.ಆರ್.ಪಿ/ಬಿ.ಆರ್.ಸಿ/ಇ.ಸಿ. ಕ್ಷೇತ್ರ ಶಿಕ್ಷಣಾಧಿಕಾರಿಗಳು/ ವಿಷಯ ನಿರ್ವಾಹಕರು/ ಶಿಕ್ಷಣಾಧಿಕಾರಿಗಳು/ ಹಿರಿಯ ಉಪನ್ಯಾಸಕರುಗಳು ಜಿಲ್ಲಾ ಶಿಕ್ಷಣಾಧಿಕಾರಿಗಳು ಮತ್ತು ಸಹಾಯಕ ನಿರ್ದೇಶಕರುಗಳು (ಅದಾ) ರವರು ಕಡ್ಡಾಯವಾಗಿ ಪಿ.ಎಂ.ಪೋಷಣ್ ಶಕ್ತಿ ನಿರ್ಮಾಣ್ ಯೋಜನೆಯಲ್ಲಿ ಮಾರ್ಗಸೂಚಿಗಳನ್ನು ಪಾಲಿಸುವಂತೆ ನೋಡಿಕೊಳ್ಳತಕ್ಕದ್ದು ಸದರಿ ವಿಷಯದಲ್ಲಿ ಬೇಜವಾಬ್ದಾರಿ ತೋರುವ ಅಧಿಕಾರಿಗಳ ಮೇಲೆ ಶಿಸ್ತಿನ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಈ ಮೂಲಕ ತಿಳಿಸಿದೆ.
