ಬೆಂಗಳೂರು.14.ಜುಲೈ.25:- ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿದ್ಯಾರ್ಥಿ ಚುನಾವಣೆ ನಡೆಸುವಂತೆ ಪತ್ರ ಬರೆದಿದ್ದು, ಈ ವಿಷಯ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ರಾಜ್ಯ ಸರ್ಕಾರಿ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಕಳೆದ 33 ವರ್ಷಗಳಿಂದ ನಿಷೇಧಿತವಾಗಿದ್ದ ವಿದ್ಯಾರ್ಥಿ ಚುನಾವಣೆಗಳನ್ನು ಪುನಃ ಆರಂಭಿಸುವ ಕುರಿತು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ.
ರಾಜ್ಯದಲ್ಲಿ ವಿದ್ಯಾರ್ಥಿ ಚುನಾವಣೆಗೆ ಸಂಬಂಧಪಟ್ಟಂತೆ ರಾಜಕೀಯ ವಲಯದಲ್ಲಿ ಪರ-ವಿರೋಧದ ಧ್ವನಿಗಳು ಕೇಳಿಬರುತ್ತಿವೆ.
ಇತ್ತ, ಎನ್ ಎಸ್ ಯು ಐ ಘಟಕವೂ ಸರ್ಕಾರಕ್ಕೆ ವಿದ್ಯಾರ್ಥಿ ಚುನಾವಣೆ ನಡೆಸುವಂತೆ ಅಧಿಕೃತವಾಗಿ ಮನವಿ ಸಲ್ಲಿಸಿದೆ. ವಿದ್ಯಾರ್ಥಿ ಪ್ರತಿನಿಧಿಗಳ ಆಯ್ಕೆ ಮೂಲಕ ಶೈಕ್ಷಣಿಕ ಸಂಸ್ಥೆಗಳಲ್ಲಿ ನಾಯಕತ್ವ, ಹೊಣೆಗಾರಿಕೆ ಹಾಗೂ ಜನತಾಂತ್ರಿಕ ಶಿಸ್ತನ್ನು ಬೆಳೆಸಲು ಅವಕಾಶ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇದೀಗ, ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿ ಚುನಾವಣೆಗೆ ಸಂಬಂಧಿಸಿದಂತೆ ಸರ್ಕಾರ ಸ್ಪಷ್ಟ ನಿರ್ಣಯ ಕೈಗೊಳ್ಳುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
ಈ ಹಿಂದೆ ಕೂಡ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿ ಘಟಕಗಳ ಚುನಾವಣೆಯನ್ನು ಪುನಃ ಜಾರಿಗೆ ತರಲು ಮುಂದಾಗಿರುವ ಉನ್ನತ ಶಿಕ್ಷಣ ಇಲಾಖೆಯ ಕ್ರಮಕ್ಕೆ ಶಿಕ್ಷಣ ತಜ್ಞರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳಲ್ಲಿ ಶೈಕ್ಷಣಿಕ ವಾತಾವರಣ ಹಾಳಾಗಲಿದ್ದು, ವಿದ್ಯಾರ್ಥಿಗಳು ರಾಜಕಾರಣಿಗಳು ಹಾಗೂ ಸಮಾಜಘಾತುಕ ಶಕ್ತಿಗಳ ಕೈಗೊಂಬೆಗಳಾಗಲಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಶೈಕ್ಷಣಿಕ ಚಟುವಟಿಕೆಗಳು ಮತ್ತು ವಿದ್ಯಾರ್ಥಿಗಳ ಸಮಸ್ಯೆಗಳ ಬಗ್ಗೆ ಚರ್ಚೆ, ವಿಚಾರ, ವಿಮರ್ಶೆ ನಡೆಸಬೇಕೇ ಹೊರತು, ಪರಸ್ಪರ ದ್ವೇಷ ಬಿತ್ತುವ ತಾಣಗಳಾಗಿ ಮಾರ್ಪಾಡಾಗಬಾರದು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಈ ಹಿಂದೆ ಕೂಡ ಚುನಾವಣೆಗೆ ಬಾಹ್ಯವಾಗಿ ಇತರ ಪಕ್ಷಗಳು ಬೆಂಬಲ ವ್ಯಕ್ತಪಡಿಸಿ, ಹಣ ಕೂಡ ನೀಡುತ್ತವೆ ಎಂಬ ಆರೋಪ ಕೇಳಿಬಂದಿತ್ತು.