ಬೀದರ.11.ಜುಲೈ.25:- ಕೊಳಾದ ಕೈಗಾರಿಕಾ ಪ್ರದೇಶದಲ್ಲಿರುವ ನೂರಾರು ಕೈಗಾರಿಕಾ ಘಟಕಗಳು ಚೆಸ್ಕಾಂ ಅಧಿಕಾರಿ ಮತ್ತು ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ತೀವ್ರ ತೊಂದರೆ ಎದುರಿಸುತ್ತಿವೆ. ನೂರಾರು ಸಂಪೆನಿಗಳಿರುವ ಈ ಪ್ರದೇಶದಲ್ಲಿನ ಕೈಗಾರಿಕಾ ಚಟುವಟಿಕೆಗೆ ನಿರಂತರ ವಿದ್ಯುತ್ ಪೂರೈಸುವ ಅಗತ್ಯವಿದೆ. ಆದರೆ, ಹಲವು ತಿಂಗಳುಗಳಿಂದ ಈ ಪ್ರದೇಶದಲ್ಲಿನ ಉದ್ಯಮಿಗಳು, ವಿದ್ಯುತ್ ಬಳಕೆದಾರರು ತೀವ್ರ ತೊಂದರೆಗೆ ಒಳಗಾಗಿದ್ದಾರೆ.
ಕೊಳಾರ ಕೈಗಾರಿಕಾ ಪ್ರದೇಶ ಸಾಕಷ್ಟು ದೊಡ್ಡದಾಗಿದೆ. ನೂರಾರು ಕೈಗಾರಿಕಾ ಘಟಕಗಳಿವೆ. ಆದರೆ, ಜೆಸ್ಕಾಂನವರು ಈ ಪ್ರದೇಶದಲ್ಲಿ ಒಂದು ಸಣ್ಣ ಕಚೇರಿ ಹೊಂದಿಲ್ಲ, ವಿದ್ಯುತ್ ಪೂರೈಕೆಗೆ ಸಂಬಂಧಿಸಿದ ಸಮಸ್ಯೆಗಳ ನಿವಾರಣೆಗೆ ದೂರು ಸ್ವೀಕರಿಸುವ ಕೇಂದ್ರ ಆರಂಭಿಸಿಲ್ಲ. ಮಳೆ,ಗಾಳಿ ಅಥವಾ ಇತರೆ ಕಾರಣದಿಂದ ವಿದ್ಯುತ್ ಪೂರೈಕೆ ಸ್ಥಗಿತವಾದಾಗ, ತ್ವರಿತವಾಗಿ ಅದನ್ನು ಸರಿಪಡಿಸಲು ಸಿಬ್ಬಂದಿಯನ್ನೂ ನಿಯೋಜಿಸಿಲ್ಲ.
ಇತ್ತೀಚಿಗೆ ರಾತ್ರಿ ಸಮಯಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳುವುದು ಸಾಮಾನ್ಯವಾಗಿದೆ. ವಿದ್ಯುತ್ ಪೂರೈಕೆ ನಿಲ್ಲುತ್ತಲೇ ಈ ಪ್ರದೇಶದಲ್ಲಿನ ಕಂಪೆನಿಗಳಲ್ಲಿನ ಉತ್ಪಾದನಾ ಚಟುವಟಿಕೆ ನಿಲ್ಲುತ್ತದೆ. ಚೆಸ್ಕಾಂನವರಿಗೆ ದೂರು ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ. ಯಾಕೆಂದರೆ, ವಿದ್ಯುತ್ ನಿಲುಗಡೆಗೆ ಕಾರಣವಾದ ದೋಷಗಳನ್ನು ತ್ವರಿತವಾಗಿ ಪತ್ತೆ ಮಾಡಿ, ದುರಸ್ತಿ ಮಾಡಲು ಸಿಬ್ಬಂದಿಯೇ ಇಲ್ಲ. ಹೀಗಾಗಿ ರಾತ್ರಿಯಿಡೀ ವಿದ್ಯುತ್ಗಾಗಿ ಕಾಯುತ್ತ ಕೂಡಬೇಕಾದ ಕಷ್ಟದ ಸ್ಥಿತಿ ಇದೆ.
ಕೈಗಾರಿಕಾ ಪ್ರದೇಶದಲ್ಲಿ ನಿರಂತರ ವಿದ್ಯುತ್ ಪೂರೈಕೆ ಇರಬೇಕಾಗುತ್ತದೆ. ಯಾವುದೋ ಕಾರಣಕ್ಕೆ ವಿದ್ಯುತ್ ಪೂರೈಕೆ ನಿಲುಗಡೆ ಆದಲ್ಲಿ, ತಕ್ಷಣ ದೋಷ ಗುರುತಿಸಿ, ಸರಿಪಡಿಸಬೇಕಾಗುತ್ತದೆ. ವಿಶೇಷವಾಗಿ ರಾತ್ರಿ ಸಮಯದಲ್ಲಿ ಈ ಪ್ರದೇಶದಲ್ಲಿನ ವಿದ್ಯುತ್ ಸಮಸ್ಯೆ ಪರಿಹರಿಸಲು ಪ್ರತ್ಯೇಕ ಸಿಬ್ಬಂದಿಯನ್ನು ನಿಯೋಜಿಸುವ ಅಗತ್ಯವಿದೆ. ಜೊತೆಗೆ ಕೊಳಾರ ಕೈಗಾರಿಕಾ ಪ್ರದೇಶದಲ್ಲಿನ ಕೈಗಾರಿಕಾ ಘಟಕಗಳ ಅನುಕೂಲಕ್ಕಾಗಿ ಪ್ರತ್ಯೇಕ ದೂರು ಸ್ವೀಕಾರ ಕೇಂದ್ರ ಆರಂಭಿಸಿ, ಸಿಬ್ಬಂದಿಯನ್ನು ನಿಯೋಜಿಸಬೇಕು. ದಿನದ 24 ತಾಸು ಈ ಕೇಂದ್ರವು ಕಾರ್ಯನಿರ್ವಹಿಸುವಂತಹ ವ್ಯವಸ್ಥೆ ಮಾಡಬೇಕಾಗಿದೆ.
ಕೊಳಾರ ಕೈಗಾರಿಕಾ ಪ್ರದೇಶವು ಕಮಠಾಣಾ ವಿಭಾಗದ ವ್ಯಾಪ್ತಿಯಲ್ಲಿದ್ದು, ವಿದ್ಯುತ್ ಸಮಸ್ಯೆಗೆ ಸಂಬಂಧಿಸಿದ ದೂರುಗಳಿಗೆ ಯಾರೂ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ರಾತ್ರಿ ಹೊತ್ತಿನಲ್ಲಿ ವಿದ್ಯುತ್ ಪೂರೈಕೆ ನಿಲುಗಡೆ ಆದಲ್ಲಿ, ಮರುದಿನದವರೆಗೆ ಕಾಯಬೇಕಾಗುತ್ತದೆ. ರಾತ್ರಿಯೂ ಕಾರ್ಯನಿರ್ವಹಿಸುವ ಕೈಗಾರಿಕಾ ಘಟಕಗಳಿಗೆ ಇದರಿಂದ ತೊಂದರೆಯಾಗುತ್ತಿದ್ದು, ದೊಡ್ಡ ಪ್ರಮಾಣದಲ್ಲಿ ನಷ್ಟ ಅನುಭವಿಸುವಂತಾಗಿದೆ.
ಕೊಳಾರ ಕೈಗಾರಿಕಾ ಪ್ರದೇಶದಲ್ಲಿನ ವಿದ್ಯುತ್ ಬಳಕೆದಾರರ ಅನುಕೂಲಕ್ಕಾಗಿ ಪ್ರತ್ಯೇಕ ದೂರು ಸ್ವೀಕಾರ ಮತ್ತು ಪರಿಹಾರ ಕೇಂದ್ರವನ್ನು ಆರಂಭಿಸುವಂತೆ ಈ ಮೂಲಕ ತಮ್ಮಲ್ಲಿ ಕೋರಲಾಗುತ್ತಿದೆ. ವಿದ್ಯುತ್ ಬಳಕೆದಾರರ ಸಮಸ್ಯೆ ಕೊನೆಗೊಳಿಸಲು ತಾವು ಸೂಕ್ತ ಕ್ರಮ ಕೈಗೊಳ್ಳುವ ವಿಶ್ವಾಸವಿದೆ.