ಬೀದರ.09.ಜುಲೈ.25:- ಕ್ರೈಸ್ ವಸತಿ ಶಾಲೆಗಳ 6ನೇ ತರಗತಿಯ ಉಳಿಕೆ ಸ್ಥಾನಗಳ ತುಂಬಲು ವಿಶೇಷ ವರ್ಗದ ಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಬೀದರ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದ ಬೀದರ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ/ಕಿತ್ತೂರು ರಾಣಿ ಚೆನ್ನಮ್ಮ/ಅಟಲ್ ಬಿಹಾರಿ ವಾಜಪೇಯಿ/ಡಾ.ಬಿ.ಆರ್ ಅಂಬೇಡ್ಕರ ಮತ್ತು ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಗಳಲ್ಲಿ 2025-26ನೇ ಶೈಕ್ಷಣಿಕ ಸಾಲಿನ 6ನೇ ತರಗತಿ ಸ್ಥಾನಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಪ್ರವೇಶ ಪರೀಕ್ಷೆ ಮತ್ತು ಕೌನ್ಸಲಿಂಗ್ ಮೂಲಕ ಹಂಚಿಕೆ ಮಾಡಲಾಗಿದ್ದು, ಮಕ್ಕಳು ಪ್ರವೇಶ ಕೂಡ ಪಡೆದಿರುತ್ತಾರೆ.
ಉಳಿದ ಸ್ಥಾನಗಳ ಭರ್ತಿ ಮಾಡಲು ವಿಶೇಷ ವರ್ಗದಲ್ಲಿ ಆಯ್ಕೆ ಬಯಸುವ ವಿಧವಾ/ವಿಧುರ, ಅನಾಥ ಮಕ್ಕಳು, ಆತ್ಮಹತ್ಯ ಮಾಡಿಕೊಂಡ ರೈತರ ಮಕ್ಕಳು, 25% ಕ್ಕಿಂತ ಹೆಚ್ಚು ಅಂಗವೀಕಲತೆ ಹೊಂದಿದ ದಿವ್ಯಾಂಗ ಮಕ್ಕಳು, ಹೆಚ್.ಐ.ವಿ ತುತ್ತಾದ ಪೋಷಕರ ಮಕ್ಕಳು, ಸರ್ಕಾರದ ಯೋಜನೆಗಳಿಂದ ಸ್ಥಳಾಂತರಗೊಂಡ ಯೋಜನಾ ನಿರಾಶ್ರಿತರ ಮಕ್ಕಳು, ಚಿಂದಿ ಆಯುವವರು, ಸ್ಮಶಾನ ಕಾರ್ಮಿಕರ ಮಕ್ಕಳು, ಬಾಲ ಕಾರ್ಮಿಕರು, ಮಾಜಿ ದೇವದಾಸಿಯರ ಮಕ್ಕಳು, ಆಶ್ರಮ ಶಾಲೆ ಮಕ್ಕಳು, ಸಂಚಾರಿ ಕುರಿಗಾಹಿರವರ ಮಕ್ಕಳು, ಮಾಜಿ ಸೈನಿಕ, ಅಲೆಮಾರಿ, ಅರೆ ಅಲೆಮಾರಿ, ಪೌರಕಾರ್ಮಿಕರು, ಸಪಾಯಿ ಕರ್ಮಚಾರಿಗಳು, ಮ್ಯಾನ್ವೆಲ್ ಸ್ಕ್ಯಾವೆಂಜರ್ ಅವರ ಮಕ್ಕಳು ಇತ್ಯಾದಿ ವರ್ಗದವರು ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಅರ್ಹರು ದಿನಾಂಕ 10-07-2025 ರೊಳಗೆ ಆಯಾ ತಾಲೂಕಿನ ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಇಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ, ನಿಮ್ಮ ಹತ್ತಿರದ ವಸತಿ ಶಾಲೆ ಇಲ್ಲವೇ ಮೊಬೈಲ್ ಸಂಖ್ಯೆ: 7899998755, 9945196115, 9986850550 ಗಳಿಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.