ಬೆಂಗಳೂರು.03.ಜುಲೈ.25:- ರಾಜ್ಯದಲ್ಲಿ ಪ್ರತಿ ವರ್ಷದಂತೆ, 2025-26 ನೇ ಸಾಲಿನ 5ನೇ ಸೆಪ್ಟೆಂಬರ್ 2025 ರ ‘ಶಿಕ್ಷಕರ ದಿನಾಚರಣೆ’ ಅಂಗವಾಗಿ ನೀಡಲಾಗುವ ‘ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ’ಗಳಿಗೆ ಪ್ರಾಥಮಿಕ/ಪ್ರೌಢಶಾಲಾ ಶಿಕ್ಷಕರನ್ನು ಅಯ್ಕೆ ಮಾಡುವ ಸಂಬಂಧ ಹೊರಡಿಸಲಾಗುತ್ತಿರುವ ಈ ಸುತ್ತೋಲೆಯೊಂದಿಗೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಆಯ್ಕೆ ಸಮಿತಿ ಸದಸ್ಯರ ವಿವರ ಹಾಗೂ ಸಮಿತಿಯ ಕರ್ತವ್ಯಗಳ ಮಾರ್ಗಸೂಚಿಯನ್ನು ಲಗತ್ತಿಸಿ ಆದೇಶ ಹೊರಡಿಸಲಾಗಿದೆ.
ಪ್ರತಿ ಜಿಲ್ಲೆಗೆ ನಿಗದಿ ಪಡಿಸಿರುವ ಪ್ರಶಸ್ತಿಗಳ ಸಂಖ್ಯಾ ವಿವರವನ್ನು (ವಲಯವಾರು ವಿಂಗಡಿಸಿರುವ ಸಂಖ್ಯೆಯನ್ನು) ಹಾಗೂ ಜಿಲ್ಲಾ ಪ್ರಶಸ್ತಿಗೆ ತಲಾ ರೂ.5000/- ರಂತೆ ನೀಡಲಾಗುವ ನಗದು ಪುರಸ್ಕಾರವನ್ನು ಮತ್ತು ಆಯ್ಕೆ ಸಮಿತಿಯ ಖರ್ಚು/ವೆಚ್ಚಗಳೆಗಾಗಿ ಪ್ರತಿ ಜಿಲ್ಲೆಗೆ ರೂ.2000/- ರಂತೆ ನೀಡಲಾಗುವ ಸಾದಿಲ್ವಾರು ವೆಚ್ಚವನ್ನು ‘ಅನುಬಂಧ-ಅ’ ರಲ್ಲಿ ವಿವರಿಸಿರುವಂತೆ ಜಿಲ್ಲಾ ಉಪನಿರ್ದೇಶಕರು (ಆಡಳಿತ) ಇವರಿಗೆ ಬಿಡುಗಡೆ ಮಾಡಲಾಗುತ್ತಿದೆ.
ರಾಜ್ಯದ ಎಲ್ಲಾ ವಲಯಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಾಲ್ಲೂಕು ಮಟ್ಟದ “ಶಿಕ್ಷಕರ ದಿನಾಚರಣೆ” ಕಾರ್ಯಕ್ರಮ ಆಯೋಜನೆಗಾಗಿ ರೂ.20,000/- ಗಳನ್ನು ಮತ್ತು ಎಲ್ಲಾ ಜಿಲ್ಲಾ ಉಪನಿರ್ದೇಶಕರು (ಆಡಳಿತ) ರವರಿಗೆ ಜಿಲ್ಲಾ ಮಟ್ಟದ “ಶಿಕ್ಷಕರ ದಿನಾಚರಣೆ” ಕಾರ್ಯಕ್ರಮ ಆಯೋಜನೆಗಾಗಿ ರೂ. 30,000/-ಗಳ ಮೊತ್ತವನ್ನು ಬಿಡುಗಡೆ ಮಾಡಲಾಗುತ್ತಿದ್ದು, ಅದರ ವಿವರಗಳನ್ನು ಈ ಸುತ್ತೋಲೆಯೊಂದಿಗೆ ಲಗತ್ತಿಸಿರುವ “ಅನುಬಂಧ-ಆ” ರಲ್ಲಿ ನೀಡಲಾಗಿದೆ.
ದಿನಾಂಕ: 05.09.2025 ರಂದು ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡು, ಕಾರ್ಯಕ್ರಮದ ಖರ್ಚುವೆಚ್ಚದ ವಿವರಗಳ ದೃಢೀಕೃತ ಪ್ರತಿಯೊಂದಿಗೆ ವೋಚರ್ಗಳ ಸಹಿತ ಉಪಯೋಗಿತ ಪ್ರಮಾಣ ಪತ್ರವನ್ನು, ಕಾರ್ಯಕ್ರಮ ಆಯೋಜಿಸಿದ ಬಗ್ಗೆ ಭಾವ ಚಿತ್ರಗಳು, ಸಿ. ಡಿ. ಪ್ರತಿಗಳೊಂದಿಗೆ ದಿನಾಂಕ: 30.09.2025 ರ ಒಳಗಾಗಿ ನಿಧಿಗಳ ಕಛೇರಿಗೆ ಕಳುಹಿಸಿಕೊಡುವಂತೆ ಸೂಚಿಸಿದೆ.

