ಬೆಂಗಳೂರು.01.ಜುಲೈ.25:- ರಾಜ್ಯದಲ್ಲಿ ಸಿಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿಯಾಗಿ ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಡಾ| ಕೆ.ಜಿ. ಜಗದೀಶ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶಿಸಿದೆ.
ಜೂ.30ರಂದು ಸಿಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿ ಜಿ. ಸತ್ಯವತಿ ಅವರು ಸೇವೆಯಿಂದ ನಿವೃತ್ತರಾಗಿದ್ದು, ಇದರಿಂದ ತೆರವಾದ ಸ್ಥಾನಕ್ಕೆ ವರ್ಗಾವಣೆಗೊಂಡಿರುವ ಜಗದೀಶ ಅವರಿಗೆ ಹೆಚ್ಚುವರಿಯಾಗಿ ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಹೊಣೆಗಾರಿಕೆಯನ್ನೂ ನೀಡಿದೆ.
ಇತ್ತೀಚೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲು¤ಳಿತ ಪ್ರಕರಣ ಹಾಗೂ ವಿಧಾನಸೌಧದ ಮುಂದೆ ಆಯೋಜಿಸಿದ್ದ ಆರ್‌ಸಿಬಿ ವಿಜಯೋತ್ಸವ ಕಾರ್ಯಕ್ರಮಗಳಿಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಸತ್ಯವತಿ ವಿರುದ್ಧ ಸಾಕಷ್ಟು ಆರೋಪಗಳು ಕೇಳಿಬಂದಿದ್ದವು.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಾಂಕನ ಮಂಡಳಿ ಅಧ್ಯಕ್ಷ ಎಚ್.ಬಸವರಾಜೇಂದ್ರ ಅವರನ್ನು ಸಾರ್ವಜನಿಕ ಗ್ರಂಥಾಲಯಗಳ ಆಯುಕ್ತರಾಗಿ ವರ್ಗಾಯಿಸಿದ್ದು, ಇದರಿಂದ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಪ್ರಕಾಶ್ ಜಿ.ಟಿ. ನಿಟ್ಟಾಲಿ ಅವರನ್ನು ನಿಯೋಜಿಸಲಾಗಿದೆ. ಜತೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ (ಮಧ್ಯಾಹ್ನದ ಬಿಸಿಯೂಟ) ನಿರ್ದೇಶಕ ಹುದ್ದೆಯನ್ನೂ ಪ್ರಕಾಶ್ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ.
ಐಎಫ್‌ಎಸ್ ಅಧಿಕಾರಿಗಳ ವರ್ಗ
ಐಎಫ್‌ಎಸ್ ಅಧಿಕಾರಿ ಸುಭಾಷ್ ಕೆ.ಮಳಖೇಡ ಅವರ ನಿವೃತ್ತಿಯಿಂದ ತೆರವಾಗಿರುವ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ ಮತ್ತು ಮುಖ್ಯವನ್ಯಯಜೀವಿ ಪಾಲಕ) ಹುದ್ದೆಗೆ ಪ್ರಭಾಶ್ ಚಂದ್ರ ರೇ ಅವರನ್ನು ವರ್ಗಾಯಿಸಲಾಗಿದೆ.
ಪ್ರಭಾಶ್ ಚಂದ್ರ ರೇ ವರ್ಗಾವಣೆಯಿಂದ ತೆರವಾಗಿರುವ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಮನೋಜ್ ಕುಮಾರ್ ಅವರನ್ನು ವರ್ಗಾಯಿಸಿದ್ದು, ಜತೆಗೆ ಎಂಎಸ್‌ಐಎಲ್ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯನ್ನೂ ಹೆಚ್ಚುವರಿಯಾಗಿ ವಹಿಸಲಾಗಿದೆ.
ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಾಮಾಜಿಕ ಅರಣ್ಯ ಮತ್ತು ಯೋಜನೆ) ಉಪೇಂದ್ರ ಪ್ರತಾಪ್ ಸಿಂಗ್ ಅವರನ್ನು ಖಾಲಿ ಇದ್ದ ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.