ಕೊಪ್ಪಳ.30.ಜೂನ.25:- ಕೊಪ್ಪಳ ಜಿಲ್ಲೆಯಲ್ಲಿ ನೋಂದಣಿಯಾಗಿ ಚಾಲನೆಯಲ್ಲಿರದ ರಾಜಕೀಯ ಪಕ್ಷದ ವಿಚಾರಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಸುರೇಶ ಬಿ. ಇಟ್ನಾಳ ಅವರು ತಿಳಿಸಿದ್ದಾರೆ.
ಭಾರತ ಚುನಾವಣಾ ಆಯೋಗದ ಜೂನ್ 26ರ ಪತ್ರಿಕಾ ಪ್ರಕಟಣೆಯ ಮೂಲಕ ಪ್ರಜಾ ಪ್ರಾತಿನಿಧ್ಯ ಕಾಯ್ದೆ 1951ರ ಪ್ರಕರಣ 29(ಎ)ರಡಿ ರಾಜಕೀಯ ಪಕ್ಷಗಳು ನೋಂದಣಿ ಮಾಡಿಕೊಳ್ಳಲು ಅವಕಾಶವಿರುತ್ತದೆ. ದೇಶಾದ್ಯಂತ ಚಾಲ್ತಿ ಇಲ್ಲದ ಅಥವಾ ವಿಳಾಸ ಪತ್ತೆ ಹಚ್ಚಲು ಸಾಧ್ಯವಿಲ್ಲದ 345 ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳನ್ನು ಪಟ್ಟಿಯಿಂದ ತೆಗೆದು ಹಾಕಲು ಈ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿರುತ್ತದೆ.
ಅದರಂತೆ ಮುಖ್ಯ ಚುನಾವಣಾಧಿಕಾರಿಗಳು, ಕರ್ನಾಟಕ ಇವರು ಜೂ. 27ರ ಪತ್ರದ ಮೂಲಕ ಕೊಪ್ಪಳ ಜಿಲ್ಲೆಯಲ್ಲಿ ನೋಂದಣಿಯಾಗಿ ಚಾಲನೆಯಲ್ಲಿ ಇರದ ಸಾಮಾನ್ಯ ಜನತಾ ಪಾರ್ಟಿ(ಲೋಕ ತಾಂತ್ರಿಕ) ಕ್ಕೆ ಸಂಬಂಧಿಸಿದಂತೆ, ಈ ಪಕ್ಷದ ವತಿಯಿಂದ 2019ರ ನಂತರ ಕಳೆದ 6 ವರ್ಷಗಳಿಂದ ಯಾವುದೇ ಲೋಕಸಭೆ, ವಿಧಾನಸಭೆ ಹಾಗೂ ಉಪ ಚುನಾವಣೆಯಲ್ಲಿ ಯಾವುದೇ ಅಭ್ಯರ್ಥಿಯು ಸ್ಪರ್ಧಿಸದೇ ಇರುವ ಹಿನ್ನಲೆಯಲ್ಲಿ ಪ್ರಜಾ ಪ್ರಾತಿನಿಧ್ಯಕಾಯ್ದೆ 1951ರಡಿಯಲ್ಲಿ ನೋಂದಣಿಯಾದ ರಾಜಕೀಯ ಪಕ್ಷದ ಪಟ್ಟಿಯಿಂದ ತೆಗೆದು ಹಾಕಲು ಕಾರಣ ಕೇಳುವ ನೋಟಿಸನ್ನು ಜಾರಿಗೊಳಿಸಿರುತ್ತಾರೆ.
ಆದ್ದರಿಂದ, ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷವಾದ “ಸಾಮಾನ್ಯ ಜನತಾ ಪಾರ್ಟಿ(ಲೋಕತಾಂತ್ರಿಕ)ಯ ಅಧಿಕೃತ ಪ್ರತಿನಿಧಿಯು ಇಚ್ಛಿಸಿದಲ್ಲಿ ಮುಖ್ಯ ಚುನಾವಣಾಧಿಕಾರಿಗಳು, ಕರ್ನಾಟಕ, ಬೆಂಗಳೂರು ಇವರಿಗೆ 2025ರ ಜುಲೈ 18 ರೊಳಗಾಗಿ ತಮ್ಮ ಲಿಖಿತ ಮನವಿಯನ್ನು ಸಲ್ಲಿಸಬಹುದು. ಪಕ್ಷದ ಪರವಾಗಿ ಮನವಿಯನ್ನು ಸಲ್ಲಿಸುವವರು ಪಕ್ಷದ ಅಧ್ಯಕ್ಷರು/ ಪ್ರಧಾನ ಕಾರ್ಯದರ್ಶಿಗಳ ಪ್ರಮಾಣ ಪತ್ರ ಹಾಗೂ ಇತರೆ ದಾಖಲೆಗಳೊಂದಿಗೆ ಮನವಿಯನ್ನು ಸಲ್ಲಿಸಬೇಕು.
ಈ ರಾಜಕೀಯ ಪಕ್ಷದ ವಿಚಾರಣೆಯನ್ನು ಜುಲೈ 18ರಂದು ನಿಗದಿಪಡಿಸಲಾಗಿದ್ದು, ವಿಚಾರಣೆಗೆ ಪಕ್ಷದ ಮುಖ್ಯಸ್ಥರು/ ಅಧ್ಯಕ್ಷರು/ ಪ್ರಧಾನ ಕಾರ್ಯದರ್ಶಿಗಳು ಕಡ್ಡಾಯವಾಗಿ ಹಾಜರಿರಬೇಕು.
ಒಂದು ವೇಳೆ ನಿಗದಿತ ಸಮಯದೊಳಗೆ ಪಕ್ಷದಿಂದ ಯಾವುದೇ ಲಿಖಿತ ಮನವಿ ಸ್ವೀಕೃತವಾದೇ ಇದ್ದ ಪಕ್ಷದಲ್ಲಿ ಪಕ್ಷದ ಯಾವುದೇ ಹೇಳಿಕೆ ಇರುವುದಿಲ್ಲವೆಂದು ಪರಿಗಣಿಸಿ, ಪಕ್ಷವನ್ನು ಸಂಪರ್ಕಿಸದೇ ಚುನಾವಣಾ ಆಯೋಗದಿಂದ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕೊಪ್ಪಳ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.