ಬೆಂಗಳೂರು.14.ಡಿಸೆಂಬರ್ .25: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮೈಕೊರೆವ ಚಳಿ, ದಟ್ಟ ಮಂಜು ಹೆಚ್ಚಾಗುತ್ತಿದೆ. ಎಲ್ಲ ಜಿಲ್ಲೆಗಳಿಗೂ ಇದೇ ವಾತಾವರಣ ವಿಸ್ತರಣೆ ಆಗುವ ಮುನ್ಸೂಚನೆ ಸಿಕ್ಕಿದೆ. ಉತ್ತರ ಕರ್ನಾಟಕ ಹಲವು ಜಿಲ್ಲೆಗಳ ಜೊತೆಗೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಚಳಿ ಆತಂಕ ಶುರುವಾಗಿದ್ದು, ಹವಾಮಾನ ಇಲಾಖೆಯು ವಿವಿಧ ಜಿಲ್ಲೆಗಳಿಗೆ ಶೀತ ಅಲೆಯ ಮುನ್ಸೂಚನೆ ನೀಡಿದೆ.
ರಾಜಧಾನಿ ಬೆಂಗಳೂರಿನಲ್ಲಿ ಕೆಲವು ದಿನಗಳಿಂದ ತಾಪಮಾನ ಕುಸಿದಿದೆ. ದಾಖಲೆಯ ಕನಿಷ್ಠ ತಾಪಮಾನ (12.9 ಡಿ.ಸೆ.) ಕಂಡು ಬಂದಿದೆ. ಇಂದು ಡಿಸೆಂಬರ್ 14 ಮತ್ತು 15ರಂದು ಒಟ್ಟು 17 ಜಿಲ್ಲೆಗಳಿಗೆ ಶೀತದ ಅಲೆಯ ಮುನ್ಸೂಚನೆ ನೀಡಲಾಗಿದೆ. ಅರ್ಧ ರಾಜಕ್ಕಿಂತಲೂ ಅಧಿಕ ಪ್ರದೇಶಗಳಲ್ಲಿ ಶೀತ ಅಲೆ ವಿಸ್ತರಿಸಿದೆ. ಇನ್ನೂ ಕೆಲವೇ ದಿನಗಳಲ್ಲಿ ರಾಜ್ಯಾದ್ಯಂತ ದಟ್ಟ ಮಂಜು, ರಣಭೀಕರ ಚಳಿ ಆವರಿಸುವ ಲಕ್ಷಣಗಳು ಕಾಣುತ್ತಿವೆ.
ಬೆಂಗಳೂರು ಹವಾಮಾನ ಹೇಗಿರಲಿದೆ?
ಬೆಂಗಳೂರಿನಲ್ಲಿ ನೆನ್ನೆ ಮತ್ತೆ 12 ಡಿಗ್ರಿ ಸೆಲ್ಸಿಯಸ್ ತಾಪಮಾನ ಕೆಐಎಎಲ್ ನಲ್ಲಿ ದಾಖಲಾಗಿದೆ. ಇದು ಹತ್ತು ವರ್ಷಗಳ ಹಿಂದೆ (2016) ದಾಖಲಾಗಿದ್ದ ತಾಪಮಾನವಾಗಿದೆ. ಅದರ ನಂತರ ಡಿಸೆಂಬರ್ ತಿಂಗಳಲ್ಲಿ ಡಿ.12, 13ರಂದು ದಾಖಲಾಗಿದೆ. ಮುಂದಿನ ಎರಡು ದಿನ ನಗರದಲ್ಲಿ ಕನಿಷ್ಠ 15 ಹಾಗೂ ಗರಿಷ್ಠ 26 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಂಡು ಬರಲಿದೆ ಎಂದು ಐಎಂಡಿ ತಿಳಿಸಿದೆ.
ಶೀತ ಅಲೆಯ 17 ಜಿಲ್ಲೆಗಳು ಯಾವುವು?
ಹವಾಮಾನ ಇಲಾಖೆ ಪ್ರಕಾರ, ಮುಂದಿನ 48 ಗಂಟೆಗಳಲ್ಲಿ ಇಂದು ಬೀದರ್, ಕಲಬುರಗಿ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ನಿರೀಕ್ಷೆಗೂ ಮೀರಿದ ಚಳಿ, ಮಂಜು ಕಂಡು ಬರಲಿದ್ದು, ‘ಆರೆಂಜ್ ಅಲರ್ಟ್’ ನೀಡಲಾಗಿದೆ. ಉಳಿದಂತೆ ಇಂದು ಮತ್ತು ನಾಳೆ ಬಾಗಲಕೋಟೆ, ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಕೊಪ್ಪಳ, ಬಳ್ಳಾರಿ, ಚಿಕ್ಕಬಳ್ಳಾಪುರ, ದಾವಣಗೆರೆ, ಹಾಸನ, ಶಿವಮೊಗ್ಗ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಅತೀವ ಚಳಿ ದಾಖಲಾಗಲಿದ್ದು, ‘ಯೆಲ್ಲೋ ಅಲರ್ಟ್’ ನೀಡಲಾಗಿದೆ ಎಂದು ಭಾನುವಾರದ ಹವಾಮಾನ ವರದಿಯಲ್ಲಿ ಐಎಂಡಿ ಮುನ್ಸೂಚನೆ ನೀಡಿದೆ.




Any questions related to 5 ದಿನ ವಿಪರೀತ ಚಳಿ! 17 ಜಿಲ್ಲೆಗಳಿಗೆ ಶೀತಅಲೆ ಎಚ್ಚರಿಕೆ.?