02/08/2025 5:04 PM

Translate Language

Home » ಲೈವ್ ನ್ಯೂಸ್ » ಹುಲಿಗಿ ಪ್ರಾ.ಆ.ಕೇಂದ್ರದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಜಾಗೃತಿ ಕಾರ್ಯಕ್ರಮ

ಹುಲಿಗಿ ಪ್ರಾ.ಆ.ಕೇಂದ್ರದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಜಾಗೃತಿ ಕಾರ್ಯಕ್ರಮ

Facebook
X
WhatsApp
Telegram

ಕೊಪ್ಪಳ.24.ಜುಲೈ.25: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಪ್ಪಳ, ತಾಲೂಕಾ ಆರೋಗ್ಯಾಧಿಕಾರಿಗಳ ಕಛೇರಿ, ಕೊಪ್ಪಳ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಹುಲಿಗಿ ಇವರ ಸಂಯುಕ್ತಾಶ್ರಯದಲ್ಲಿ ಆಸ್ಪತ್ರೆಯ ಆವರಣದಲ್ಲಿ ಜುಲೈ 22 ರಂದು ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.


ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ರವೀಂದ್ರನಾಥ್ ಎಂ.ಹೆಚ್. ಅವರು ಪ್ರತಿ ವರ್ಷ ಜುಲೈ 11 ರಂದು ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಜನಸಂಖ್ಯೆ ಹೆಚ್ಚಳಕ್ಕೆ ಹಲವಾರು ಕಾರಣಗಳಿವೆ. ಅಜ್ಞಾನ, ಮೂಢನಂಬಿಕೆ, ಬಾಲ್ಯವಿವಾಹ, ಅನಕ್ಷರತೆ, ಕುಟುಂಬ ಕಲ್ಯಾಣ ಯೋಜನೆಗಳ ಮಾಹಿತಿ ಕೊರತೆ ಹೀಗೆ ಹಲವಾರು ಅಂಶಗಳು ಜನಸಂಖ್ಯೆ ಬೆಳವಣಿಗೆಗೆ ಕಾರಣವಾಗಿವೆ. ಜನಸಂಖ್ಯೆ ಹೆಚ್ಚಳದಿಂದ ದೇಶದಲ್ಲಿ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಆಹಾರ ಸಮಸ್ಯೆ, ವಸತಿ ಸಮಸ್ಯೆ, ಉದ್ಯೋಗ ಸಮಸ್ಯೆ, ಶೈಕ್ಷಣಿಕ ಸಮಸ್ಯೆ, ವೈದ್ಯಕೀಯ ಸಮಸ್ಯೆ, ಕಾಡು ಸಂಪತ್ತು ನಾಶ, ಮುಂತಾದ ಸಮಸ್ಯೆಗಳನ್ನು ಪ್ರತಿಯೊಬ್ಬರೂ ಏದುರಿಸಬೇಕಾಗುತ್ತದೆ. ಜೊತೆಗೆ ಸಮಾಜದಲ್ಲಿ ಅಸಮಾನತೆ ಉಂಟಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ನಾಗರಿಕರು ಹಾಗೂ ಜನಪ್ರತಿನಿಧಿಗಳು ಜನಸಂಖ್ಯೆ ನಿಯಂತ್ರಿಸಲು ಅರಿವು ಮೂಡಿಸಬೇಕಾಗಿದೆ ಮತ್ತು ಎಲ್ಲಾ ಅರ್ಹ ದಂಪತಿಗಳು ಜನಸಂಖ್ಯೆ ನಿಯಂತ್ರಣದ ಸೂತ್ರಗಳನ್ನು ಪಾಲಿಸಬೇಕು. ಹೆರಿಗೆ ಆದ ಮೇಲೆ ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಕನಿಷ್ಠ 3 ವರ್ಷಗಳ ಅಂತರ ಕಾಪಾಡಲು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ದೊರೆಯುವ ಕುಟುಂಬ ಕಲ್ಯಾಣ ಯೋಜನೆಯ ತಾತ್ಕಾಲಿಕ ಮತ್ತು ಶಾಶ್ವತ ವಿಧಾನಗಳನ್ನು ಬಳಕೆ ಮಾಡಬೇಕು. ಬಾಲ್ಯವಿವಾಹ ನಿಷೇಧ ಕುರಿತು ಎಲ್ಲರೂ ಜಾಗೃತರಾಗಬೇಕು ಎಂದು ಹೇಳಿದರು.


ಪ್ರತಿ ಕುಟುಂಬಕ್ಕೆ ಹೆಣ್ಣಾಗಲಿ ಗಂಡಾಗಲಿ ಒಂದು ಅಥವಾ ಎರಡು ಮಕ್ಕಳು ಸಾಕು, ಚಿಕ್ಕ ಕುಟುಂಬ ಚೊಕ್ಕ ಕುಟುಂಬ, ಚಿಕ್ಕ ಕುಟುಂಬ ಸುಖೀ ಕುಟುಂಬ ಎಂಬುದನ್ನು ಅರಿತುಕೊಳ್ಳಬೇಕು. ಇದರಿಂದ ಕುಟುಂಬದ ಆರ್ಥಿಕಸ್ಥಿತಿ ಉತ್ತಮವಾಗುತ್ತದೆ. ಎಲ್ಲರೂ ಉತ್ತಮ ಜೀವನ ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಜೊತೆಗೆ ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ಶಿಕ್ಷಾರ್ಹ ಅಪರಾಧ, ಹೆಣ್ಣು ಭ್ರೂಣ ಹತ್ಯೆಯಾಗದಂತೆ ಎಲ್ಲರೂ ತಡೆಯಬೇಕು. ಹೆಣ್ಣು-ಗಂಡನ್ನು ಸರಿ ಸಮಾನವಾಗಿ ಕಾಣಬೇಕೆಂದು ತಿಳಿಸಿದರು.


ಕೊಪ್ಪಳ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರಾಮಾಂಜನೇಯ ಮಾತನಾಡಿ, ಪ್ರತಿ ವರ್ಷ ಜುಲೈ 11 ರಂದು ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ಆಚರಿಸುವ ಉದ್ದೇಶ ಪ್ರತಿಯೊಬ್ಬರಿಗೂ ಜನಸಂಖ್ಯೆ ಹೆಚ್ಚಳದಿಂದ ಉಂಟಾಗುವ ದುಷ್ಪರಿಣಾಮಗಳು ಮತ್ತು ಅದಕ್ಕೆ ಕಾರಣ ಹಾಗೂ ಅದರ ನಿಯಂತ್ರಣ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವುದು. ಜೊತೆಗೆ ಕುಟುಂಬ ಕಲ್ಯಾಣ ಯೋಜನೆಗಳ ಬಗ್ಗೆ ಫಲಾನುಭವಿಗಳಿಗೆ ಮನವರಿಕೆ ಮಾಡಿ ಅವುಗಳನ್ನು ಅಳವಡಿಸಿಕೊಂಡು, ತಾಯಿ-ಮಕ್ಕಳ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ನಿರಂತರವಾಗಿ ಆಶಾ/ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತರು ಅರಿವು ಮೂಡಿಸುವಂತೆ ತಿಳಿಸಿದರು.


ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವ್ಹಿ.ಪಿ. ಅವರು ಬಾಲ್ಯ ವಿವಾಹ ನಿಷೇಧ, ತಾಯಿ ಮತ್ತು ಮಕ್ಕಳ ಆರೋಗ್ಯ ರಕ್ಷಣೆ, ಪುರುಷ ಸಂತಾನ ನಿರೋಧ ಶಸ್ತçಚಿಕಿತ್ಸೆ ಕುರಿತು ವಿವರವಾಗಿ ಮತನಾಡಿದರು. ಹುಲಿಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಧಿಕಾರಿಗಳಾದ ಡಾ. ಶಫಿಉಲ್ಲಾ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ನೀಲಮ್ಮ ಗುಂಗಾಡಿ, ಸದಸ್ಯರಾದ ರಮೇಶ್ ಪೂಜಾರ, ಹಿ.ಪ್ರಾ.ಆ.ಸುರಕ್ಷಾಧಿಕಾರಿಗಳಾದ ವಂದನಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಗಂಗಮ್ಮ ಕೆ., ಪ್ರ.ದ.ಸಹಾಯಕರಾದ ಮೇರಿ, ಲೆಕ್ಕಪತ್ರ ಸಹಾಯಕರಾದ ಪ್ರಭು ಮತ್ತು ತಾಯಂದಿರು, ಬಾಣಂತಿಯರು, ಗರ್ಭಿಣಿಯರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!