02/08/2025 4:58 PM

Translate Language

Home » ಲೈವ್ ನ್ಯೂಸ್ » ಸಾರ್ವಜನಿಕರು 90 ದಿನಗಳ ಮಧ್ಯಸ್ಥಿಕೆಯ ವಿಶೇಷ ಆಂದೋಲನದ
ಸದುಪಯೋಗ ಪಡೆದುಕೊಳ್ಳಿ – ನ್ಯಾ. ಮಹಾಂತೇಶ ಎಸ್. ದರಗದ

ಸಾರ್ವಜನಿಕರು 90 ದಿನಗಳ ಮಧ್ಯಸ್ಥಿಕೆಯ ವಿಶೇಷ ಆಂದೋಲನದ
ಸದುಪಯೋಗ ಪಡೆದುಕೊಳ್ಳಿ – ನ್ಯಾ. ಮಹಾಂತೇಶ ಎಸ್. ದರಗದ

Facebook
X
WhatsApp
Telegram


ಕೊಪ್ಪಳ.24.ಜುಲೈ 25: ರಾಜಿ ಸಂಧಾನದ ಮೂಲಕ ರಾಜಿ ಆಗಬಹುದಾದ ಪ್ರಕರಣಗಳ ಇತ್ಯರ್ಥಕ್ಕಾಗಿ ಈಗಾಗಲೇ ಜುಲೈ 1 ರಿಂದ ಸೆಪ್ಟೆಂಬರ್ ತಿಂಗಳ ಅಂತ್ಯದವರೆಗೆ ಹಮ್ಮಿಕೊಂಡಿರುವ 90 ದಿನಗಳ ಮಧ್ಯಸ್ಥಿಕೆಯ ವಿಶೇಷ ಆಂದೋಲನದ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ ಎಸ್. ದರಗದ ಹೇಳಿದರು.


ಅವರು ಬುಧವಾರ ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಛೇರಿ ಸಭಾಂಗಣದಲ್ಲಿ ರಾಷ್ಟೀಯ ಲೋಕ್ ಅದಾಲತ್, ಮಧ್ಯಸ್ಥಿಕೆಯ ವಿಶೇಷ ಆಂದೋಲನ ಹಾಗೂ ಖಾಯಂ ಜನತಾ ನ್ಯಾಯಾಲಯ ಕುರಿತು ಮಾಹಿತಿ ನೀಡಲು ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


ಮಧ್ಯಸ್ಥಿಕೆಯು ರಾಜಿ ಸಂಧಾನದ ಮೂಲಕ ಕಡಿಮೆ ಅವಧಿಯಲ್ಲಿ ಶೀಘ್ರ ಪರಿಹಾರ ಕಂಡುಕೊಳ್ಳಬಹುದಾಗಿದೆ. ಇದರಿಂದ ಉಭಯ ಪಕ್ಷಗಾರರು ಸಮಯದ ಜೊತೆಗೆ ಹಣದ ಉಳಿತಾಯವನ್ನು ಮಾಡಬಹುದಾಗಿದೆ. ರಾಷ್ಟ್ರವ್ಯಾಪಿ ಮಧ್ಯಸ್ಥಿಕೆಯ ಕುರಿತು 90 ದಿನಗಳ ಕಾಲ ವಿಶೇಷ ಅಂದೋಲನದ ವ್ಯವಸ್ಥೆಯನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಸರ್ವೋಚ್ಛ ನ್ಯಾಯಾಲಯವು ಈ ವಿಶೇಷ ವ್ಯವಸ್ಥೆಯನ್ನು ಮಾಡಿದೆ. ಈ ಪ್ರಕ್ರಿಯೆಯ ಮೂಲಕ ಉಭಯ ಪಕ್ಷಗಾರರು ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ತಟಸ್ಥ ಹೊಂದಿದ ಮಧ್ಯಸ್ಥಿಕೆಗಾರರು ಮಧ್ಯಸ್ಥಿಕೆ ಮಾಡುವ ಮೂಲಕ ವಿವಾದವನ್ನು ಸೃಜನಾತ್ಮಕವಾಗಿ ಇತ್ಯರ್ಥ ಪಡಿಸಲು ಅನುಕೂಲವಾಗುತ್ತದೆ. ಮಧ್ಯಸ್ಥಿಕೆಯು ಸ್ವಪ್ರೇರಿತವಾದುದಲ್ಲದೇ ಗೌಪ್ಯವಾಗಿಯೂ ಇರುತ್ತದೆ ಮತ್ತು ಇದು ಪಾರದರ್ಶಕತೆಯಿಂದ ಕೂಡಿರುತ್ತದೆ. ಮಧ್ಯಸ್ಥಿಕೆಯಲ್ಲಿ ಕಡಿಮೆ ಕಾಲ ಮಿತಿಯಲ್ಲಿ ಆಪ್ತ ಸಮಾಲೋಚನೆ ಮೂಲಕ ಮಧ್ಯಸ್ಥಿಕೆ ನಡೆಯುವುದರಿಂದ ಅರ್ಥಪೂರ್ಣ ಚರ್ಚೆ ನಡೆದು ಪ್ರಕರಣವು ವ್ಯಾಜ್ಯ ಮುಕ್ತವಾಗಿ ಬಗೆಹರಿಯಲು ಸಹಾಯಕವಾಗುತ್ತದೆ ಎಂದರು.


ಮಧ್ಯಸ್ಥಿಕೆಯಲ್ಲಿ ಕೌಟುಂಬಿಕ ಪ್ರಕರಣಗಳು, ಸಿವಿಲ್ ವ್ಯಾಜ್ಯಗಳು, ವಿಚ್ಛೇದನ ಪ್ರಕರಣಗಳು, ಚೆಕ್ ಬೌನ್ಸ ಪ್ರಕರಣಗಳು ಬಗೆಹರಿಸಬಹುದಾಗಿದೆ. 90 ದಿನಗಳ ವಿಶೇಷ ಮಧ್ಯಸ್ಥಿಕೆಯು ಪ್ರತಿ ದಿನವು ನಡೆಯಲಿದ್ದು, ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದೆ. ಇದರಿಂದ ವಕೀಲರು ತಮ್ಮ ಕಕ್ಷಿಗಾರರ ಮನವೊಲಿಸುವ ಮೂಲಕ ಮಧ್ಯಸ್ಥಿಕೆಯ ವಿಶೇಷ ಆಂದೋಲನವನ್ನು ಸದುಪಯೋಗ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಿದರು.


*ಖಾಯಂ ಜನತಾ ನ್ಯಾಯಾಲಯ:* ಸಾರ್ವಜನಿಕ ಉಪಯುಕ್ತ ಸೇವೆ (Public Utility Services) ಗಳಿಗೆ ಸಂಬಂಧಿಸಿದಂತೆ ಉದ್ಭವಿಸುವ ವಿವಾದಗಳ ಅತಿ ಶೀಘ್ರ ಹಾಗೂ ಖರ್ಚಿಲ್ಲದ ತೀರ್ಮಾನಕ್ಕಾಗಿ ಖಾಯಂ ಜನತಾ ನ್ಯಾಯಾಲಯಗಳು (Permanent Lok Adalat) ವರವೆಂದೇ ಹೇಳಬಹುದು. 1987ರ ಕಾನೂನು ಸೇವೆಗಳ ಪ್ರಾಧಿಕಾರಗಳ ಕಾಯಿದೆಯನ್ನು 2002ರಲ್ಲಿ ಕೇಂದ್ರ ಸರ್ಕಾರವು ತಿದ್ದುಪಡಿ ಮಾಡಿ, ವಿ.ಐ.ಎ ಅಧ್ಯಾಯವನ್ನು ಹೊಸದಾಗಿ ಸೇರಸುವುದರ ಮೂಲಕ ಖಾಯಂ ಜನತಾ ನ್ಯಾಯಾಲಯಗಳನ್ನು ಅಸ್ಥಿತ್ವಕ್ಕೆ ತಂದಿದೆ. 2007ರಲ್ಲಿ ಕರ್ನಾಟಕ ಸರ್ಕಾರವು ಬೆಂಗಳೂರು, ಬೆಳಗಾವಿ, ಧಾರವಾಡ, ಕಲಬುರಗಿ, ಮಂಗಳೂರು ಮತ್ತು ಮೈಸೂರಿನಲ್ಲಿ ಖಾಯಂ ಜನತಾ ನ್ಯಾಯಾಲಯಗಳನ್ನು ಸ್ಥಾಪಿಸಿದೆ ಎಂದರು.


1987ರ ಕಾನೂನು ಸೇವೆಗಳ ಪ್ರಾಧಿಕಾರಗಳ ಕಾಯಿದೆಯ 22ಎ(ಬಿ)ನೇ ವಿಧಿಯನ್ವಯ `ಸಾರ್ವಜನಿಕ ಉಪಯುಕ್ತತಾ ಸೇವೆ’ (Public Utility Services)ಗಳ ವ್ಯಾಪ್ತಿಯೊಳಗೆ ಪ್ರಯಾಣಿಕರನ್ನು ಅಥವಾ ಸರಕನ್ನು ಸಾಗಿಸುವ ಭೂಸಾರಿಗೆ, ಜಲಸಾರಿಗೆ ಹಾಗೂ ವಾಯುಸಾರಿಗೆ ಸೇವೆ. ಅಂಚೆ, ತಂತಿ ಮತ್ತು ದೂರವಾಣಿ ಸೇವೆ. ವಿದ್ಯುತ್ ಮತ್ತು ನೀರು ಸರಬರಾಜು ಸೇವೆ. ಸಾರ್ವಜನಿಕ ನೈರ್ಮಲ್ಯ ವ್ಯವಸ್ಥೆ ಮತ್ತು ಕನ್ನರ್‌ವೆನ್ನಿ. ಆಸ್ಪತ್ರೆ ಮತ್ತು ಔಷಧಾಲಯಗಳಲ್ಲಿನ ಸೇವೆ. ವಿಮಾ ಸೇವೆ. ಬ್ಯಾಂಕಿಂಗ್ ಮತ್ತು ಹಣಕಾಸು ಸಂಸ್ಥೆಗಳಿಗೆ ಸಂಬಂಧಿಸಿದ ಸೇವೆಗಳು. ಶಿಕ್ಷಣ ಅಥವಾ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಪಟ್ಟ ಸೇವೆಗಳು. ಗೃಹ ಅಥವಾ ರಿಯಲ್ ಎಸ್ಟೇಟ್ ಗಳಿಗೆ ಸಂಬಂಧಪಟ್ಟ ಸೇವೆಗಳು ಹಾಗೂ ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಸಾರ್ವಜನಿಕ ಹಿತದೃಷ್ಟಿಯಿಂದ “ಸಾರ್ವಜನಿಕ ಉಪಯುಕ್ತತಾ ಸೇವೆ” ಎಂದು ಘೋಷಿಸುವ ಇನ್ನಿತರ ಸೇವೆಗಳು ಬರುತ್ತವೆ. ಈ ಸಾರ್ವಜನಿಕ ಉಪಯುಕ್ತತಾ ಸೇವೆಗಳಿಗೆ ಸಂಬಂಧಿಸಿದಂತಹ ವಿವಾದಗಳು ಮಾತ್ರ ಖಾಯಂ ಜನತಾ ನ್ಯಾಯಾಲಯದ ವ್ಯಾಪ್ತಿಗೆ ಬರುತ್ತವೆ. ಅಲ್ಲದೇ, ವಿವಾದಕ್ಕೆ ಸಂಬಂಧಿಸಿದ ಉಭಯ ಪಕ್ಷಗಾರರಲ್ಲಿ ಒಬ್ಬರು ಸಾರ್ವಜನಿಕ ಉಪಯುಕ್ತತಾ ಸೇವೆಗೆ ಸಂಬಂಧಿಸಿದ ಸಂಸ್ಥೆ ಅಥವಾ ವ್ಯಕ್ತಿಯಾಗಿರಲೇಬೇಕು. ಯಾವುದೇ ಕಾನೂನಿನನ್ವಯ ರಾಜಿಯಾಗದ ಹಾಗೂ ರೂ. ಕೋಟಿಗೂ ಮೀರಿದ ಮೌಲ್ಯದ ವಿವಾದಗಳು ಖಾಯಂ ಜನತಾ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದರು.


ಖಾಯಂ ಜನತಾ ನ್ಯಾಯಾಲಯಕ್ಕೆ ಸಂಬಂಧಿಸಿದಂತೆ ನಿಯಮಕ್ಕನುಸಾರ ನಡೆದರೆ, ಅತಿ ಶೀಘ್ರವಾಗಿ ಹಾಗೂ ಖರ್ಚಿಲ್ಲದೆ ಪರಿಹಾರ ಪಡೆಯಲು ಸಾಧ್ಯವಿದ್ದು, ಸಾರ್ವಜನಿಕರು ಹಾಗೂ ಸಾರ್ವಜನಿಕ ಉಪಯುಕ್ತತಾ ಸೇವೆಯ ಸಂಸ್ಥೆಗಳು ಇದರ ಸದುಪಯೋಗ ಪಡೆಯಬಹುದಾಗಿದೆ. ವಕೀಲರು ಸಹ ಈ ಖಾಯಂ ಜನತಾ ನ್ಯಾಯಾಲಯದ ವೇದಿಕೆಯನ್ನು ಉಪಯೋಗಿಸಿಕೊಂಡು ತಮ್ಮ ಕಕ್ಷಿಗಾರರಿಗೆ ಖರ್ಚಿಲ್ಲದೆ ಶೀಘ್ರವಾಗಿ ಪರಿಹಾರವನ್ನು ಕೊಡಿಸಬಹುದಾಗಿದೆ ಎಂದರು.


ಈ ಹಿಂದೆ ನಡೆದ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಅತೀ ಹೆಚ್ಚಿನ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ. ಜಿಲ್ಲೆಯ ವಕೀಲರು, ನ್ಯಾಯಾಧೀಶರು, ಮಧ್ಯಸ್ಥಗಾರರಿಗೆ ರಾಜಿ ಸಂಧಾನಕ್ಕೆ ವೇದಿಕೆ ಕಲ್ಪಿಸಿಕೊಟ್ಟಿದ್ದಕ್ಕೆ ಮತ್ತು ಈ ಕುರಿತು ಹೆಚ್ಚಿನ ಪ್ರಚಾರ ನೀಡಿದ ಮಾಧ್ಯಮವರಿಗೆ ಅಭಿನಂಧನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.

ಈ ಪತ್ರಿಕಾಗೋಷ್ಠಿಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಸುರೇಶ ಜಿ., ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಇತರೆ ಅಧಿಕಾರಿ, ಸಿಬ್ಬಂದಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳು ಉಪಸ್ಥಿತರಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!