ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಭರವಸೆ ನೀಡಿದ ರಾಜ್ಯ ಸರಕಾರ 2024-25ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಬಹಳಷ್ಟು ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಅಧ್ಯಾಪಕರನ್ನು ನೇಮಕ ಮಾಡಿಕೊಳ್ಳದೆ ಸೆಮಿಸ್ಟರ್ ಪೂರ್ಣಗೊಳಿಸುವ ಸಿದ್ಧತೆಯಲ್ಲಿದೆ.
ರಾಜ್ಯದೆಲ್ಲೆಡೆ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕೊರತೆಯಾಗಿರುವ 6,000 ಅತಿಥಿ ಉಪನ್ಯಾಸಕರನ್ನು ಶೈಕ್ಷಣಿಕ ವರ್ಷದ ಕಡೆಯಲ್ಲೂ ಸೇರಿಸಿಕೊಳ್ಳುವ ಪ್ರಯತ್ನ ಮಾಡಿಲ್ಲ. ಇದರಿಂದ ಪಾಠ ಕೇಳದೆ ಒಂದು ಸೆಮಿಸ್ಟರ್ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಮೇ ಅಂತ್ಯದಲ್ಲಿ ಮತ್ತೊಂದು ಪರೀಕ್ಷೆ ಎದುರಿಸಲು ಸಿದ್ಧತೆ ನಡೆಸಿದ್ದಾರೆ. ರಾಜ್ಯದ 430 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸುಮಾರು 11 ಸಾವಿರ ಅಧ್ಯಾಪಕರ ಹುದ್ದೆಗಳು ಖಾಲಿ ಇವೆ.
ಇದರಿಂದ ಪ್ರತಿಯೊಂದು ಕಾಲೇಜುಗಳಲ್ಲು ಅಧ್ಯಾಪಕರ ಕೊರತೆ ಶೇ.70ರಿಂದ 90ರಷ್ಟಿದೆ. ಕೆಲ ವಿಶ್ವವಿದ್ಯಾಲಯಗಳ ಘಟಕ ಕಾಲೇಜುಗಳು ಮತ್ತು ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾಯಂ ವಿಭಾಗ ಮುಖ್ಯಸ್ಥರೂ ಇಲ್ಲ. ಒಬ್ಬರೇ ಅಧ್ಯಾಪಕರು ಹಲವು ವಿಭಾಗಗಳಿಗೆ ಮುಖ್ಯಸ್ಥರಾಗಿರುವುದೂ ಇದೆ. ಸರಕಾರಕ್ಕೆ ಇದು ಗೊತ್ತಿದ್ದರೂ ಸರಿಯಾದ ಸಮಯಕ್ಕೆ ಅತಿಥಿ ಉಪನ್ಯಾಸಕರನ್ನೂ ನೇಮಿಸಿಕೊಳ್ಳುತ್ತಿಲ್ಲ.
ನೇಮಕಕ್ಕೆ ತಡೆ: 2024-25ನೇ ಸಾಲಿನ ಶೈಕ್ಷಣಿಕ ವರ್ಷದ ಆರಂಭದಲ್ಲಿ ಅತಿಥಿ ಉಪನ್ಯಾಸಕರ ನೇಮಕದಲ್ಲಿ ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಮತ್ತು ಮಾನದಂಡವನ್ನು ಪಾಲಿಸುವಂತೆ ಹೈಕೋರ್ಟ್ ಕಟ್ಟಪ್ಪಣೆ ಮಾಡಿತು. ಕಳೆದ ಶೈಕ್ಷಣಿಕ ವರ್ಷ ನೇಮಿಸಿಕೊಂಡಿದ್ದ 10,600 ಅತಿಥಿ ಉಪನ್ಯಾಸಕರಲ್ಲಿ 5,890 ಉಪನ್ಯಾಸಕರು ಯುಜಿಸಿ ಮಾನದಂಡದ ವಿದ್ಯಾರ್ಹತೆ ಹೊಂದಿರಲಿಲ್ಲ. ಅಂತಹವರ ಸ್ಥಾನಗಳಿಗೆ ಹೊಸಬರನ್ನು ಆಯ್ಕೆ
ಮಾಡಿಕೊಳ್ಳಲು ಸರಕಾರ ನಿರ್ಧರಿಸಿತ್ತು. ಸೆಮಿಸ್ಟರ್ ಆರಂಭವಾಗಿ ಎರಡು ತಿಂಗಳ ಬಳಿಕ ತಡವಾಗಿಯಾದರೂ ನೇಮಕ ಆರಂಭಿಸುವ ಹೊತ್ತಿಗೆ ಯುಜಿಸಿ ಮಾನದಂಡದ ವಿದ್ಯಾರ್ಹತೆ ಇಲ್ಲದ ಅತಿಥಿ ಉಪನ್ಯಾಸಕರು ಹೈಕೋರ್ಟ್‌ನಿಂದ ನೇಮಕ ಪ್ರಕ್ರಿಯೆಗೆ ತಡೆಯಾಜ್ಞೆ ತಂದರು. ಇದರಿಂದಾಗಿ 2000 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವುದು ಬಾಕಿ ಉಳಿಯಿತು.
ಶೈಕ್ಷಣಿಕ ವರ್ಷ ಅಂತ್ಯ ಸಮೀಪಿಸಿದರೂ ಸರಕಾರ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟು ತಡೆಯಾಜ್ಞೆ ತೆರವುಗೊಳಿಸುವ ಪ್ರಯತ್ನ ಮಾಡಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ: ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನೀಡುವ ತೀರ್ಪಿಗೆ ಬದ್ಧವಾಗಿರುತ್ತೇವೆಂದು ಪ್ರಮಾಣ ಪತ್ರ ಸಲ್ಲಿಸಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಿಂದಿನ ವರ್ಷದ ಅತಿಥಿ ಉಪನ್ಯಾಸಕರನ್ನು ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಮುಂದುವರಿಸಲು ನ್ಯಾಯಾಲಯದ ಅನುಮತಿ ಪಡೆಯಲು ಅವಕಾಶವಿತ್ತು.
ಅದಕ್ಕೂ ಅಧಿಕಾರಿಗಳು ಪ್ರಯತ್ನ ನಡೆಸಿಲ್ಲ. ತಡೆಯಾಜ್ಞೆ ನೀಡಿದ್ದೆ ಒಳ್ಳೆಯದಾಯಿತೆಂಬ ಮನೋಭಾವ ಕಾಲೇಜು ಶಿಕ್ಷಣ ಇಲಾಖೆ ಅಧಿಕಾರಿಗಳಲ್ಲಿ ಕಂಡು ಬರುತ್ತಿದೆ. ಇದರ ಮಧ್ಯೆ ಇದೇ ಸಮಯದಲ್ಲಿ ಕಾಯಂ ಅಧ್ಯಾಪಕರ ವರ್ಗಾವಣೆ ಪ್ರಕ್ರಿಯೆ ಕೈಗೊಂಡ ಸರಕಾರ ಸುಮಾರು 4ಸಾವಿರ ಅಧ್ಯಾಪಕರನ್ನು ವರ್ಗ ಮಾಡಿತು. ಅಧ್ಯಾಪಕರು ಖಾಲಿ ಇರುವ ಮತ್ತೊಂದು ಸ್ಥಳಕ್ಕೆ ಹೋದರೆ ಹೊರತು ಅವರಿಂದ ಖಾಲಿಯಾದ ಸ್ಥಳಕ್ಕೆ ಯಾರೂ ಬರಲಿಲ್ಲ. ಹೀಗಾಗಿ ಮತ್ತೆ ಸುಮಾರು 4ಸಾವಿರ ಅಧ್ಯಾಪಕರ ಕೊರತೆ ಎದುರಾಯಿತು. ಇದರಿಂದಾಗಿ ರಾಜ್ಯದೆಲ್ಲೆಡೆ ಒಟ್ಟಾರೆ 6ಸಾವಿರ ಅಧ್ಯಾಪಕರ ಕೊರತೆ ಉಂಟಾಗಿದೆ.
ವಿದ್ಯಾರ್ಥಿಗಳ ಪರದಾಟ: ಗ್ರಾಮೀಣ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳಿಗೆ ಪದವಿ ಶಿಕ್ಷಣಕ್ಕೆ ಸರಕಾರಿ ಪ್ರಥಮದರ್ಜೆ ಕಾಲೇಜುಗಳೆ ಪ್ರಮುಖ ಆಧಾರ. ಖಾಸಗಿ ಕಾಲೇಜುಗಳಲ್ಲಿ ದುಬಾರಿ ಶುಲ್ಕ ಪಾವತಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಪೋಷಕರು ತಮ್ಮ ಮಕ್ಕಳನ್ನು ಪದವಿ ಶಿಕ್ಷಣಕ್ಕೆ ಸರಕಾರಿ ಕಾಲೇಜುಗಳಿಗೆ ಸೇರಿಸುತ್ತಾರೆ.
ಅಂತಹ ಕಾಲೇಜುಗಳ ಗುಣಮಟ್ಟ ಕಾಪಾಡಬೇಕಾದ ಸರಕಾರ ನಿರ್ಲಕ್ಷ್ಯ ವಹಿಸುತ್ತಿದೆ. ಕಾಯಂ ಅಧ್ಯಾಪಕರು ಮತ್ತು ಅತಿಥಿ ಉಪನ್ಯಾಸಕರಿಗೆ ಹೆಚ್ಚುವರಿ ತರಗತಿಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳ ಪಾಠಕ್ಕೆ ತೊಂದರೆಯಾಗದಂತೆ ಮಾಡಲಾಗಿದೆ ಎಂದು ಸರಕಾರ ಹೇಳಿದೆ. ಆದರೆ, ಬಹಳಷ್ಟು ಕಾಯಂ ಅಧ್ಯಾಪಕರು ತಮ್ಮ ತರಗತಿಗಳನ್ನು ತೆಗೆದುಕೊಳ್ಳುವುದೇ ಕಷ್ಟ ಆಗಿರುವಾಗ ಹೆಚ್ಚುವರಿ ತರಗತಿಗಳನ್ನು ತೆಗೆದುಕೊಳ್ಳುವುದು ಸಾಧ್ಯವೇ ಇಲ್ಲ. ಇಂತಹ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ, ಉತ್ತಮ ಫಲಿತಾಂಶ ಎರಡೂ ಕಷ್ಟ.
ಕಾಲೇಜಿನಲ್ಲಿ 2ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. 25 ಅಧ್ಯಾಪಕರ ಕೊರತೆ ಇದೆ. ಕಾಯಂ ಮತ್ತು ಇರುವ ಅತಿಥಿ ಉಪನ್ಯಾಸಕರಿಗೆ ಹೆಚ್ಚುವರಿ ಹೊರೆ ಬಿದ್ದಿದೆ. ಆದರೆ, ಗುಣಮಟ್ಟ ಕಾಪಾಡುವುದು ಸಾಧ್ಯವಿಲ್ಲ.
ಸರಕಾರದ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. -ಹೆಸರು ಬಹಿರಂಗಪಡಿಸಲಿಚ್ಚಿಸದ ಪ್ರಾಂಶುಪಾಲ