ರಾಯಚೂರು, ಕೊಪ್ಪಳ, ವಿಜಯನಗರ, ಬಳ್ಳಾರಿ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ
ರಾಯಚೂರು.09.ಆಗಸ್ಟ್.25: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ಆ.10ರಂದು ಜಿಲ್ಲೆಯ ಸಿಂಧನೂರಿನ ಶ್ರೀ ಸತ್ಯ ಗಾರ್ಡನ್‌ನಲ್ಲಿ ಆಯೋಜಿಸಲಾಗಿದೆ ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಕೃಷ್ಣ ಶಾಂವತಗೇರಾ ಅವರು ಹೇಳಿದರು.
ಆಗಸ್ಟ್ 08ರ ಶುಕ್ರವಾರ ದಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ರಾಯಚೂರು, ಕೊಪ್ಪಳ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತದೆ. ರಾಯಚೂರು 130, ಕೊಪ್ಪಳ 174, ಬಳ್ಳಾರಿ 91, ವಿಜಯನಗರ 64 ಮಕ್ಕಳು ಸೇರಿದಂತೆ ಒಟ್ಟು 522 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತದೆ ಎಂದರು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಹಂಪಿಯ ಸಾವಿರದೇವರ ಮಠ ಶ್ರೀ ವಾಮದೇವಮಹಾಂತ ಶಿವಾಚಾರ್ಯರು ವಹಿಸಲಿದ್ದಾರೆ. ತೊಗಲಗೊಂಬೆ ಕಲಾವಿದೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಭೀಮಪ್ಪ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ ಇವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಾನವ ಮನಸ್ಥಿತಿ ತರಬೇತುದಾರ ಮಹೇಶ ಮಸಾಲ್ ಇವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಅವರು ವಹಿಸಲಿದ್ದಾರೆ ಎಂದರು.
ನಾಲ್ಕು ಜಿಲ್ಲೆಯ ಜಿಲ್ಲಾ, ತಾಲೂಕ ಘಟಕದ ಪದಾಧಿಕಾರಿಗಳು, ರಾಜ್ಯ ಪರಿಷತ್ ಸದಸ್ಯರುಗಳು, ಸರ್ಕಾರಿ ನೌಕರರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಸರ್ಕಾರಿ ನೌಕರರ ಹಿತ ಕಾಪಾಡಲು ಸಂಘ ಕಾರ್ಯನಿರ್ವಹಿಸುತ್ತಿದೆ. ನೌಕರರಿಗೆ ಕ್ರೀಡಾಕೂಟ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸೇರಿದಂತೆ ಅನೇಕ ಕಾರ್ಯಕ್ರಮಗಳ್ನು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿಯವರ ನೇತೃತ್ವದಲ್ಲಿ ನಡೆಸಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ರಾಜ್ಯ ಸಮಿತಿ ಸದಸ್ಯರಾದ ಡಾ.ಶಂಕರಗೌಡ ಪಾಟೀಲ್, ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಾದ ಶ್ರೀನಿವಾಸ, ಹಕ್, ವೆಂಕಪ್ಪ ಫಿರಂಗಿ, ಪ್ರಸನ್ನಕುಮಾರ ಇದ್ದರು.