ರಾಯಚೂರು.31.ಜುಲೈ.25: ಸಣ್ಣ ಕೈಗಾರಿಕೆಗಳ ಸ್ಥಾಪನೆಯಿಂದ ಆರ್ಥಿಕ ವೃದ್ಧಿಯ ಜೊತೆಗೆ ಉದ್ಯೋಗ ಸೃಷ್ಟಿಗೂ ನೆರವಾಗಲಿದ್ದು, ಈ ಬಗ್ಗೆ ಯುವ ಉದ್ದಿಮೆದಾರರು ಸೇರಿದಂತೆ ಎಲ್ಲಾ ಉದ್ದಿಮೆದಾರರು ಗಮನ ಹರಿಸಿದಲ್ಲಿ ಉದ್ಯಮದಲ್ಲಿ ಅಭಿವೃದ್ಧಿ ಹೊಂದಬಹುದಾಗಿದೆ ಎಂದು ರಾಯಚೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಎಸ್.ಕಮಲ್ ಕುಮಾರ್ ಅವರು ಹೇಳಿದರು.

ಜುಲೈ 30ರ ಬುಧವಾರ ದಂದು ನಗರದ ಹೋಟೆಲ್ ರಂಜಿತಾ ಪ್ಯಾಲೆಸ್ ಸಭಾಂಗಣದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರ (ವಿ.ಟಿ.ಪಿ.ಸಿ) ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಸಹಯೋಗದಲ್ಲಿ ಎಂ.ಎಸ್.ಎಂ.ಇ.ಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವುದು ಯೋಜನೆಯಡಿಯಲ್ಲಿ ಲೀನ್ ಯೋಜನೆ ಮತ್ತು ಝಡ್.ಇ.ಡಿ. ಕುರಿತು ಒಂದು ದಿನದ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಶದಲ್ಲಿ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ನೀಡಿದಲ್ಲಿ ಆರ್ಥಿಕ ವೃದ್ಧಿ ಜೊತೆಗೆ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸಲು ಸಾಧ್ಯವಿದೆ. ಈ ದಿಸೆಯಲ್ಲಿ ಉದ್ದಿಮೆದಾರರನ್ನು ತೊಂದರೆ ಮುಕ್ತಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಶೇಷ ಗಮನ ನೀಡುತ್ತಿವೆ ಎಂದರು.

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವಲ್ಲಿ ಲೀನ್ ಯೋಜನೆ, ರಫ್ತು ಪ್ರಕ್ರಿಯೆ ಕುರಿತು ಹಮ್ಮಿಕೊಂಡಿರುವ ಕಾರ್ಯಾಗಾರ ಪ್ರತಿಯೊಬ್ಬರಿಗೂ ಅತ್ಯಂತ ಮುಖ್ಯವಾಗಿದ್ದು, ಈ ಯೋಜನೆಯ ಕುರಿತು ಕಾರ್ಯಾಗಾರದಲ್ಲಿ ತಿಳಿಸುವ ಅಂಶಗಳನ್ನು ಪ್ರತಿಯೊಬ್ಬರು ತಿಳಿದು ಸದುಪಯೋಗಪಡಿಸಿಕೊಳ್ಳುವಂತೆ ಅವರು ಮನವಿ ಮಾಡಿದರು.
ಇದೇ ವೇಳೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಕಮಲಕುಮಾರ ಜೈನ್ ಮಾತನಾಡಿ, ಉತ್ತರ ಕರ್ನಾಟಕ ಭಾಗವು ಅತ್ಯಂತ ಕಡೆಗಣನೆಯ ಭಾಗವಾಗಿದ್ದು, ಆದರೆ ಇಲ್ಲಿ ಸಿಗುವ ಸಂಪತ್ತು ಇನ್ನೆಲ್ಲೂ ಸಿಗುವುದಿಲ್ಲ. ಅದರಲ್ಲೂ ರಾಯಚೂರು ಕೈಗಾರಿಕೋದ್ಯಮವು ಅತ್ಯಂತ ಉನ್ನತ ಸ್ಥಾನದಲ್ಲಿದ್ದು, ಈ ಉದ್ಯಮಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿಯನ್ನು ತರುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಈ ಕಾರ್ಯಗಾರ ಸಹಕಾರಿಯಾಗಲಿದೆ ಎಂದರು.
ಕಾಟನ್, ಜಿನ್ನಿಂಗ್ ಮತ್ತು ಪ್ರೆಸ್ಸಿಂಗ್ ಅಸೋಸಿಯೇಷನ್ ಅಧ್ಯಕ್ಷ ವಿ.ಲಕ್ಷ್ಮೀರೆಡ್ಡಿ ಮಾತನಾಡಿ, ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿನ ಕೈಗಾರಿಕೆಗಳಿಗೆ ಅನುಕೂಲತೆಗಳು ತೀರ ಕಡಿಮೆಯಿದ್ದು, ಈ ಭಾಗದ ಕೈಗಾರಿಕೆಗಳ ಅಭಿವೃದ್ಧಿಗೆ ಲೀನ್ ಯೋಜನೆ, ಝಡ್ ಇಡಿ ಮತ್ತು ರಫ್ತು ಪ್ರಕ್ರಿಯೆ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಯುವಕರು ಈ ಕಾರ್ಯಾಗಾರವನ್ನು ಸದುಪಯೋಗ ಪಡೆದುಕೊಂಡರೇ ಇನ್ನೂ ಹೆಚ್ಚಿನ ಅಭಿವೃದ್ಧಿಯನ್ನು ಕೈಗಾರಿಕೆಗಳಲ್ಲಿ ಕಾಣಬಹುದಾಗಿದೆ ಎಂದರು.
ಇದೇ ವೇಳೆ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಸಮಾಲೋಚಕ ಸತೀಶ ಕೋಟಾ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಕುರಿತು ಉಪನ್ಯಾಸ ನೀಡಿ, ವ್ಯಾಪಾರ ಎನ್ನುವುದು ಕೇವಲ ಹೂಡಿಕೆ ಮತ್ತು ಲಾಭ ಗಳಿಸುವುದು ಮಾತ್ರವಲ್ಲಣ ಇತರೆ ದೇಶಗಳೊಂದಿಗೆ ಸಂಪರ್ಕ ಸಾಧಿಸುವ ಮತ್ತು ಆ ದೇಶಗಳಿಗೆ ಉತ್ಪನ್ನಗಳನ್ನು ರಫ್ತು ಮಾಡುವುದು ಕೂಡ ವ್ಯಾಪಾರದಲ್ಲಿ ಬಹುಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಆಸಕ್ತ ಕೈಗಾರಿಕೋದ್ಯಮಿಗಳು ಮುಂದೆ ಬಂದರೆ ಸಂಸ್ಥೆಯಿಂದ ರಫ್ತು ಉತ್ತೇಜನಕ್ಕೆ ಸಹಕಾರ ನೀಡಲಾಗುವುದು. ಹೆಚ್ಚಾಗಿ ಯುವಕರು ಈ ಯೋಜನೆಯನ್ನು ಸದುಪಯೋಗ ಪಡೆದುಕೊಳ್ಳಲು ಮುಂದಾಗಬೇಕು ಎಂದರು.
ಸಂಪನ್ಮೂಲ ವ್ಯಕ್ತಿಗಳು ಹಾಗೂ ನವ ಟೈಸ್ ಟ್ರೇಡ್‌ನ ಅಧ್ಯಕ್ಷರಾದ ಸತೀಶ್ ಕೋಟೆ ಅವರು ದೇಶದಲ್ಲಿನ ರಫ್ತು ಮತ್ತು ಆಮದುಗಳ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ಮಾಹಿತಿ ನೀಡಿ ಅದರ ಉಪಯುಕ್ತತೆಯನ್ನು ಮತ್ತು ಅದರ ಪ್ರಯೋಜನೆಯನ್ನು ತಿಳಿಸಿದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾದ ಜೆಡ್‌ನ ವ್ಯವಸ್ಥಾಪಕರಾದ ಸತೀಶ್ ಅವರು ಎಂ.ಎಸ್.ಎಂ.ಇ ಉದ್ಯಮ ನೋಂದಣಿ ಮತ್ತು ಉದ್ಯಮಿದಾರರಿಗೆ ಅದರ ಹಿನ್ನೆಲೆಯ ಮಾಹಿತಿ ತಿಳಿಸಿದರು.
ಇದೇ ಸಂದರ್ಭದಲ್ಲಿ ರಾಯಚೂರು ಜಿಲ್ಲಾ ಅಕ್ಕಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷರಾದ ಮಾರೆಮ್ ತಿಪ್ಪಣ್ಣ, ಉಪಾಧ್ಯಕ್ಷರಾದ ನಿಂಗಣ್ಣ ಎಸ್.ಬಿರಾದಾರ, ಸಿಡಾಕ್ ಜಂಟಿ ನಿರ್ದೇಶಕರಾದ ಜಿ.ಯು.ಹುಡೇದ, ಜಂಟಿ ಕಾರ್ಯದರ್ಶಿಗಳಾದ ಕೇಶವ ಮೂರ್ತಿ (ಕಿರಣ್), ಗ್ರಾಮೀಣ ಜಂಟಿ ಕಾರ್ಯದರ್ಶಿಗಳಾದ ದಿನೇಶ್ ಕುಮಾರ್ ವಿ. ಹಾಗೂ ಸಿಡ್‌ಬೀ ಬ್ಯಾಂಕ್‌ನ ವ್ಯವಸ್ಥಾಪಕರಾದ ಲವ ಕುಮಾರ್ ಹಾಗೂ ವಿವಿಧ ಕೈಗಾರಿಕೋದ್ಯಮಿದಾರರು, ಮತ್ತು ಹಲವು ಬ್ಯಾಂಕ್‌ಗಳ ವ್ಯವಸ್ಥಾಪಕರು ಸೇರಿದಂತೆ ಇತರರು ಇದ್ದರು.