ಬೀದರ, 05 ಡಿಸೆಂಬರ್24:- ಬಾಲನ್ಯಾಯ (ಮಕ್ಕಳ ರಕ್ಷಣೆ ಮತ್ತು ಪೋಷಣೆ) ಕಾಯ್ದೆ 2015 ಸೆಕ್ಷನ್ 44ರನ್ವಯ ಪೋಷಕತ್ವ ಯೋಜನೆಯಡಿಯಲ್ಲಿ ವಿವಿಧ ಸಂಕಷ್ಟದಲ್ಲಿರುವ ಮಕ್ಕಳಿಗೆ ತಾತ್ಕಾಲಿಕವಾಗಿ ಕುಟುಂಬದ ವಾತವರಣ ಕಲ್ಪಿಸಿ, ರಕ್ಷಣೆ ಮತ್ತು ಪೋಷಣೆ ಮಾಡಲು ಅರ್ಹ ಕಟುಂಬವನ್ನು ಗುರುತಿಸಬೇಕಾಗಿರುವುದರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಬೀದರ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಕ್ಕಳ ಕಲ್ಯಾಣ ಸಮಿತಿಯ ಆದೇಶದ ಮೇರೆಗೆ ಮಕ್ಕಳನ್ನು ಒಂದು ವರ್ಷದ ಅವಧಿಗೆ ಮೀರದಂತೆ ಮಗುವನ್ನು ಪೋಷಕತ್ವ ಯೋಜನೆಯಡಿಯಲ್ಲಿ ನಿಯೋಜನೆ ಮಾಡಬಹುದಾಗಿದೆ. ಮಗು ಹಾಗೂ ಕುಟುಂಬದ ಹೊಂದಾಣಿಕೆಯ ಆಧಾರದ ಮೇಲೆ ಮಕ್ಕಳ ಕಲ್ಯಾಣ ಸಮಿತಿಯು ಮಗುವನ್ನು 18 ವರ್ಷ ವಯಸ್ಸಿನವರೆಗೂ ಪೋಷಕತ್ವವನ್ನು ಮುಂದುವರೆಸಲು ಅವಕಾಶ ಕಲ್ಪಿಸುತ್ತದೆ.
ಈ ಹಿನ್ನೆಲೆಯಲ್ಲಿ 6-18 ವರ್ಷದೊಳಗಿನ ವಿವಿಧ ರೀತಿಯ ಸಂಕಷ್ಟಕ್ಕೊಳಗಾಗಿ ಜಿಲ್ಲೆಯಲ್ಲಿ ಬಾಲನ್ಯಾಯ ಕಾಯ್ದೆಯಡಿಯಲ್ಲಿ ನೋಂದಣಿಯಾಗಿರುವ ಮಕ್ಕಳ ಪಾಲನಾ ಸಂಸ್ಥೆಯಲ್ಲಿ ದಾಖಲಾಗಿರುವ ಮಕ್ಕಳನ್ನು ಹಾಗೂ ಪಾಲಕರು ತಮ್ಮ ಮಕ್ಕಳನ್ನು ರಕ್ಷಣೆ ಮತ್ತು ಪೋಷಣೆ ಮಾಡಲು ಅಸಮರ್ಥರಿದ್ದ ಸಂದರ್ಭದಲ್ಲಿ ಮಗುವಿನ ಪುನರ್ವಸತಿಗಾಗಿ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಸಂಪರ್ಕಿಸಿದ್ದಲ್ಲಿ, ಇಂತಹ ಮಕ್ಕಳನ್ನು ಸಹ ಪೋಷಕತ್ವದಡಿ ತಾತ್ಕಾಲಿಕವಾಗಿ ಪಾಲನೆ ಮತ್ತು ಪೋಷಣೆ ಮಾಡಲಾಗುವುದು.
ಆದ್ದರಿಂದ ಇಂತಹ ಮಕ್ಕಳನ್ನು ಪೋಷಕತ್ವ ಯೋಜನೆಯಡಿ ನೋಡಿಕೊಳ್ಳಲು ಆಸಕ್ತಿ ಇರುವ ಪೋಷಕರು ಅರ್ಜಿಯನ್ನು ಸಲ್ಲಿಸಲು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮೈಲೂರ ಬೀದರ ಇವರಿಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08482-234003 ಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.