ಔರಾದ 14.ಆಗಸ್ಟ್.25:- ಶ್ರೀ ಕೃಷ್ಣ ಜನ್ಮಾಷ್ಠಮಿ ನಿಮಿತ್ತ ಶ್ರೀ ಉದ್ಭವಲಿಂಗ ಅಮರೇಶ್ವರ ದಹಿ ಹಂಡಿ ಉತ್ಸವ ಸಮಿತಿ ವತಿಯಿಂದ ಆಗಸ್ಟ್ 16ರಂದು(ಶನಿವಾರ) ಮಧ್ಯಾಹ್ನ 2 ಗಂಟೆಗೆ ಔರಾದ್(ಬಿ) ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಸಾರ್ವಜನಿಕ ‘ದಹಿ ಹಂಡಿ ಉತ್ಸವ’ (ಮೊಸರು ಗಡಿಗೆ ಒಡೆಯುವ ಸ್ಪರ್ಧೆ) ಏರ್ಪಡಿಸಲಾಗಿದೆ.
ಶ್ರೀ ಕೃಷ್ಣ ಜನ್ಮಾಷ್ಠಮಿಯನ್ನು ಅದ್ದೂರಿ, ಅರ್ಥಪೂರ್ಣ ಜೊತೆಗೆ ನಮ್ಮ ಶ್ರೇಷ್ಠ ಪರಂಪರೆ, ಸಂಸ್ಕೃತಿ ಉಳಿಸಿ, ಬೆಳೆಸಲು ಪೂರಕವಾಗಿ ದಹಿ ಹಂಡಿ ಉತ್ಸವ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶಾಸಕ ಪ್ರಭು.ಬಿ ಚವ್ಹಾಣ್ ಅವರು ಮನವಿ ಮಾಡಿದ್ದಾರೆ.
ಶ್ರೀ ಕೃಷ್ಣ ಜನ್ಮಾಷ್ಠಮಿ ದೇಶ-ವಿದೇಶಗಳಲ್ಲಿ ಅತ್ಯಂತ ಶೃದ್ಧೆ, ಭಕ್ತಿಯೊಂದಿಗೆ ಸಂಭ್ರಮದಿಂದ ಆಚರಿಸಲಾಗುತ್ತದೆ. ಶ್ರೀಕೃಷ್ಣನ ಲೀಲೆಗಳಲ್ಲಿ ಬಾಲಲೀಲೆ ವಿಶಿಷ್ಟವಾಗಿದೆ. ದಹಿ ಹಂಡಿ ಒಡೆಯುವಿಕೆಯು ಬಾಲಕೃಷ್ಣನ ಕ್ರಿಯೆಗಳನ್ನು ಅನುಕರಿಸುತ್ತದೆ. ಹೀಗಾಗಿ ಎಲ್ಲೆಡೆ ದಹಿ ಹಂಡಿ ಉತ್ಸವ(ಮಡಿಕೆ ಉತ್ಸವ) ಬಹಳಷ್ಟು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಈ ಉತ್ಸವ ನಮ್ಮಲ್ಲಿಯೂ ನಡೆಯಬೇಕೆಂಬ ಉದ್ದೇಶದಿಂದ ಕಳೆದ ವರ್ಷದಿಂದ ಅದ್ದೂರಿಯಾಗಿ ದಹಿ ಹಂಡಿ ಉತ್ಸವ ಏರ್ಪಡಿಸುತ್ತಿದ್ದು, ಈ ವರ್ಷವೂ ಅರ್ಥಪೂರ್ಣ ದಹಿ ಹಂಡಿ ಉತ್ಸವ ನಡೆಯಲಿದೆ ಎಂದು ಶಾಸಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
*ವಿಜೇತರಿಗೆ ಬಹುಮಾನ:* ದಹಿ ಹಂಡಿ ಉತ್ಸವದಲ್ಲಿ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಜನರಿಗಾಗಿ ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯುತ್ತದೆ. ವಿಜೇತ ತಂಡಗಳಿಗೆ ಪ್ರಥಮ ಬಹುಮಾನ 25,000, ದ್ವಿತೀಯ ಬಹುಮಾನ 15,000 ಹಾಗೂ ತೃತಿಯ ಬಹುಮಾನ 10,000 ಮತ್ತು ಪಾರಿತೋಷಕ ವಿತರಿಸಲಾಗುತ್ತದೆ. ಹಾಗೆಯೇ ಶ್ರೀಕೃಷ್ಣ ವೇಷಧಾರಿ ಮಕ್ಕಳಿಗೆ ವಿಶೇಷ ಸನ್ಮಾನ ಇರುತ್ತದೆ. 10 ವರ್ಷದೊಳಗಿನ ಮಕ್ಕಳು ಮಾತ್ರ ಶ್ರೀ ಕೃಷ್ಣ ವೇಷಧಾರಿ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ ಎಂದು ಹೇಳಿದ್ದಾರೆ.
ಹಿಂದೂ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಅತ್ಯಂತ ಪವಿತ್ರ ಹಾಗೂ ಮಹಾಗ್ರಂಥವಾದ ಭಗವದ್ಗೀತೆ ಹಾಗೂ ಮಹಾಭಾರತದ ಪ್ರಮುಖ ಪಾತ್ರಧಾರಿ ಶ್ರೀಕೃಷ್ಣರು ಭಗವಾನ ವಿಷ್ಣುವಿನ ಎಂಟನೇ ಅವತಾರವಾಗಿದ್ದಾರೆ. ಅವರು ಬೋಧಿಸಿದ ಗೀತೆ ಭಗವದ್ಗೀತೆ ಎಂದೇ ಪ್ರಸಿದ್ಧವಾಗಿದೆ. ಎಲ್ಲ ವ್ಯಕ್ತಿಗಳಿಗೂ, ಎಲ್ಲ ಸಂದರ್ಭಕ್ಕೂ, ಎಲ್ಲ ಕಾಲಕ್ಕೂ ಅನ್ವಯವಾಗುವ ಸಾರಗಳನ್ನು ಇದು ಒಳಗೊಂಡಿದೆ. ಅತ್ಯಂತ ಸ್ಪೂರ್ತಿದಾಯಕವಾಗಿರುವ ಶ್ರೀಕೃಷ್ಣನ ಜೀವನದಿಂದ ನಾವು ಸಾಕಷ್ಟು ನೀತಿಗಳನ್ನು ಕಲಿಯಬಹುದು. ಇಂತಹ ವಿಷಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಮತ್ತು ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸಲು ಇಂತಹ ಕಾರ್ಯಕ್ರಮ ಸಹಕಾರಿಯಾಗಲಿವೆ. ದಹಿ ಹಂಡಿ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳಬೇಕು ಮತ್ತು ಕಾರ್ಯಕ್ರಮ ಶಾಂತಿ, ಸೌಹಾರ್ದತೆಯಿಂದ ನಡೆಯಲು ಸಹಕರಿಸಬೇಕು ಎಂದು ಶಾಸಕರು ತಿಳಿಸಿದ್ದಾರೆ.
*ತಂಡಗಳ ನೋಂದಣಿಗೆ ಅವಕಾಶ:* ದಹಿ ಹಂಡಿ ಉತ್ಸವದಲ್ಲಿ ಭಾಗವಹಿಸುವ ತಂಡಗಳ ನೋಂದಣಿಗೆ ಶನಿವಾರ ಬೆಳಿಗ್ಗೆವರೆಗೆ ಅವಕಾಶವಿದೆ. ಭಾಗಿಯಾಗಬೇಕಾದ ತಂಡದ
ಸದಸ್ಯರು 18 ವರ್ಷಕ್ಕಿಂತ ಮೇಲ್ಪಟ್ಟಿರಬೇಕು. ಒಂದು ತಂಡದಲ್ಲಿ ಕನಿಷ್ಟ 12 ಜನರು ಇರಬೇಕು. ಆಸಕ್ತ ತಂಡಗಳು ಆಗಸ್ಟ್ 16ರ ಬೆಳಗ್ಗೆ 11 ಗಂಟೆಯೊಳಗಾಗಿ ಶಿವರಾಜ ಅಲ್ಮಾಜೆ-9448605300, ಕೇರಬಾ ಪವಾರ- 9916330099 ಅಥವಾ ಬಸವರಾಜ ಹಳ್ಳೆ- 8123979550ಗೆ ಕರೆ ಮಾಡಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. ನಂತರ ಬರುವವರಿಗೆ ಅವಕಾಶ ಇರುವುದಿಲ್ಲ.
