ರಾಯಚೂರು.07.ಆಗಸ್ಟ್ .25: ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರು ಗ್ರಾಮಾಂತರ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ಅವರು ಆಗಸ್ಟ್ 6ರಂದು ರಾಯಚೂರ ಗ್ರಾಮೀಣ ಭಾಗದಲ್ಲಿ ಸಂಚಾರ ನಡೆಸಿದರು.
ಗುಂಜಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಶಾಸಕರು, 146 ಕೋಟಿ ರೂ ನಲ್ಲಿ ಗುಂಜಳ್ಳಿ ಬಸಪ್ಪ ಕೆರೆ ಹಾಗೂ ಸುತ್ತಲಿನ ಗ್ರಾಮಗಳ 9 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆಯಾದ ಏತ ನೀರಾವರಿಯ ಕಾಮಗಾರಿ ವೀಕ್ಷಣೆ ನಡೆಸಿದರು.
ರಾಯಚೂರು ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯ ಚಿಕ್ಕಮಂಚಾಲಿ, ಬುಳ್ಳಪೂರ ಗ್ರಾಮದ ಹತ್ತಿರ ತುಂಗಭದ್ರಾ ನದಿ ತಟಕ್ಕೆ ಭೇಟಿ ನೀಡಿದ ಶಾಸಕರು, ಏತ ನೀರಾವರಿ ಕಾಮಗಾರಿಯ ಸಮಗ್ರ ವೀಕ್ಷಣೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಈ ವೇಳೆ ಶಾಸಕರು ಮಾತನಾಡಿ, ಈಗಾಗಲೇ ಕೃಷ್ಣ ನದಿಯಿಂದ ಬಂಗಾರಪ್ಪ ಕೆರೆ ತುಂಬಿಸುವ ಯೋಜನೆಯಿಂದಾಗಿ ರೈತರ ಹೊಲಗಳಿಗೆ, ಕೆರೆಗಳಿಗೆ ಹಾಗೂ ಕುಡಿವ ನೀರಿಗೆ ಅನುಕೂಲ ಮಾಡಲಾಗಿದೆ.
ಅದೆ ರೀತಿಯಾಗಿ ತುಂಗಭದ್ರಾ ನದಿಯಿಂದ ಗುಂಜಳ್ಳಿ ಬಸಪ್ಪ ಕೆರೆ ಹಾಗೂ ಸುತ್ತಲಿನ 9 ಗ್ರಾಮಗಳಾದ ಗುಂಜಳ್ಳಿ ಕೆರೆ, ಗೋಡಿಹಾಳ್ ಕೆರೆ, ಯರಗೇರಾ1 ಕೆರೆ, ಯರಗೇರಾ2 ಕೆರೆ, ಕೆರೆಬೂದುರ ಕೆರೆ, ಕಮಲಾಪೂರ ಕೆರೆ, ಮಂಜರ್ಲಾ, ಗಧಾರ ಕೆರೆ, ಮಿಡಗಲದಿನ್ನಿ ಕೆರೆಗಳನ್ನು ತುಂಬಿಸುವ ಈ ಯೋಜನೆ ಯಶ ಕಂಡಲ್ಲಿ ಅಂತರ್ಜಲ ಮಟ್ಟ ಉತ್ತಮವಾಗಿ ಕುಡಿಯುವ ನೀರು ಹಾಗೂ ರೈತರ ಹೊಲಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ರಾಯಚೂರ ಗ್ರಾಮೀಣ ಕ್ಷೇತ್ರದ ಎಲ್ಲ ಪ್ರದೇಶವನ್ನು ಸಂಪೂರ್ಣ ನೀರಾವರಿ ಮಾಡುವುದು ತಮ್ಮ ಮುಖ್ಯ ಗುರಿಯಾಗಿದೆ ಎಂದು ತಿಳಿಸಿದ ಶಾಸಕರು, ಈ ನಿಟ್ಟಿನಲ್ಲಿ ಈ ಭಾಗದಲ್ಲಿ ಬೇರೆ ಬೇರೆ ನೀರಾವರಿ ಯೋಜನೆಗಳನ್ನು ಅನುಷ್ಠಾನ ಮಾಡಲು ನಾನಾ ಯೋಜನೆಗಳಿಗೆ ಡಿಪಿಆರ್ ಗೆ ಕಳುಹಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗಿಲ್ಲೇಸೂಗುರ ಬ್ಲಾಕ್ ಅಧ್ಯಕ್ಷರು, ಚಿಕ್ಕಮಂಚಾಲಿ, ಬುಳ್ಳಪೂರ, ಗುಂಜಳ್ಳಿ ಸೇರಿದಂತೆ ಸುತ್ತಲಿನ ಗ್ರಾಮಗಳ ಹಿರಿಯ ಮುಖಂಡರು, ಗ್ರಾಮಸ್ಥರು, ನಾಮನಿರ್ದೆಶಿತ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.