Home » ಲೈವ್ ನ್ಯೂಸ್ » ವಧು-ವರರ ಅರ್ಹ ವಯಸ್ಸಿನ ಖಾತ್ರಿ ನಂತರವೇ ವಿವಾಹಕ್ಕೆ ಅವಕಾಶ ನೀಡಿ: ಡಿಸಿ ಇಟ್ನಾಳ

ವಧು-ವರರ ಅರ್ಹ ವಯಸ್ಸಿನ ಖಾತ್ರಿ ನಂತರವೇ ವಿವಾಹಕ್ಕೆ ಅವಕಾಶ ನೀಡಿ: ಡಿಸಿ ಇಟ್ನಾಳ

Facebook
X
WhatsApp
Telegram

ಕೊಪ್ಪಳ.09.ಅಕ್ಟೋಬರ.25: ದೇವಾಲಯಗಳಲ್ಲಿ, ಮಸೀದಿಗಳಲ್ಲಿ ಹಾಗೂ ಚರ್ಚ್ಗಳಲ್ಲಿ ನಡೆಯುವ ಎಲ್ಲ ವಿವಾಹಗಳಲ್ಲಿ ವಧು-ವರರ ಅರ್ಹ ವಯಸ್ಸಿನ ದೃಢೀಕರಣದ ನಂತರವೇ ಅರ್ಚಕರು, ಮೌಲ್ವಿಗಳು ಹಾಗೂ ಪಾದ್ರಿಗಳು ವಿವಾಹಕ್ಕೆ ಅವಕಾಶ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ.ಇಟ್ನಾಳ ಅವರು ಸೂಚಿಸಿದ್ದಾರೆ.

ಜಿಲ್ಲೆಯನ್ನು ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಜಿಲ್ಲಾಡಳಿತವು ಹಲವಾರು ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದಾಗ್ಯೂ ಜಿಲ್ಲೆಯಲ್ಲಿ ಅಪ್ರಾಪ್ತ ಮಕ್ಕಳಿಗೆ ವಿವಾಹವನ್ನು ಮಾಡಲು ಪ್ರಯತ್ನಿಸುತ್ತಿರುವುದು ಕಂಡುಬರುತ್ತಿದೆ. ಬಾಲ್ಯವಿವಾಹ ನಿಷೇಧ ಕಾಯ್ದೆ-2006 ಕರ್ನಾಟಕ ತಿದ್ದುಪಡಿ-2016 ರಂತೆ 18 ವರ್ಷದೊಳಗಿನ ಹೆಣ್ಣು ಮಗು ಹಾಗೂ 21 ವರ್ಷದೊಳಗಿನ ಗಂಡು ಮಕ್ಕಳ ವಿವಾಹವನ್ನು ನಿಷೇಧಿಸಿದೆ. ಬಾಲ್ಯವಿವಾಹವು ಶಿಕ್ಷಾರ್ಹ ಅಪರಾಧವಾಗಿದ್ದು, ಕಾಯ್ದೆಯ ಕಲಂ 10 ಮತ್ತು 11 ರನ್ವಯ ಬಾಲ್ಯವಿವಾಹದಲ್ಲಿ ಭಾಗವಹಿಸಿದವರು, ಪ್ರೋತ್ಸಾಹಿಸಿದವರು, ಸಹಕರಿಸಿದವರು ಹಾಗೂ ನಡೆಸಿದವರಿಗೆ ಕನಿಷ್ಟ 1 ರಿಂದ 2 ವರ್ಷಗಳ ಜೈಲು ಶಿಕ್ಷೆ ಮತ್ತು ರೂ.1 ಲಕ್ಷದವರೆಗೆ ದಂಡವನ್ನು ವಿಧಿಸಬಹುದಾಗಿದೆ.

ಸರ್ವೋಚ್ಛ ನ್ಯಾಯಾಲಯವು ಬಾಲ್ಯವಿವಾಹದಿಂದ ಮಕ್ಕಳ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಬೀರುವುದಲ್ಲದೆ ಮಕ್ಕಳ ಮೇಲೆ ಲೈಂಗಿಕ ಅಪರಾಧಗಳನ್ನು ಎಸಗಲು ಅವಕಾಶಗಳನ್ನು ನೀಡಿದಂತಾಗುತ್ತದೆ. ಆದ್ದರಿಂದ ಬಾಲ್ಯವಿವಾಹಗಳನ್ನು ಕಡ್ಡಾಯವಾಗಿ ತಡೆಗಟ್ಟಿ ಮತ್ತು ಸಮುದಾಯಗಳಲ್ಲಿ ಜಾಗೃತಿಯನ್ನು ಮೂಡಿಸಲು ಅವಶ್ಯಕ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶಿಸಿದೆ.

ಆದ್ದರಿಂದ ತಾವುಗಳು ನೆರವೇರಿಸುವ ವಿವಾಹಗಳಲ್ಲಿ ವಧುವಿನ ವಯಸ್ಸು 18 ವರ್ಷ ಹಾಗೂ ವರನ ವಯಸ್ಸು 21 ವರ್ಷ ಪೂರ್ಣವಾಗಿರುವ ಬಗ್ಗೆ ಖಾತ್ರಿ ಪಡಿಸಿಕೊಂಡ ನಂತರವೇ(ಜನನ ಪ್ರಮಾಣ ಪತ್ರ ಅಥವಾ ಶಾಲಾ ದಾಖಲಾತಿ ಪ್ರಮಾಣ ಪತ್ರ ಅಥವಾ ಎರಡೂ ದಾಖಲಾತಿ ಇಲ್ಲದ ಸಂದರ್ಭದಲ್ಲಿ ಮಾತ್ರ ಜಿಲ್ಲಾ ಶಸ್ತç ಚಿಕಿತ್ಸಕರು ನೀಡಿದ ವೈದ್ಯಕೀಯ ಪ್ರಮಾಣ ಪತ್ರಗಳು ಮಾತ್ರ ಮಾನ್ಯವಾಗಿದ್ದು, ಇನ್ಯಾವುದೇ ದಾಖಲಾತಿಗಳು ಮಾನ್ಯವಲ್ಲ) ಅಂತಹ ವಿವಾಹಗಳಿಗೆ ಅವಕಾಶ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology