ಬೀದರ.14.ಫೆ.25:- ಇಂದು ಬೀದರ ನಗರದಲ್ಲಿ ಜಿಲ್ಲಾ ರಾಷ್ಟ್ರೀಯ ಬಸವ ದಳ ಮತ್ತು ಲಿಂಗಾಯತ ಸಮಾಜದ ಸಹಯೋಗದಲ್ಲಿ ಬೀದರ್ ನಗರದಲ್ಲಿ “ಚನ್ನಬಸವಣ್ಣನವರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ”12ನೇ ಶತಮಾನದಲ್ಲಿ ಬಸವಾದಿ ಶರಣರು ಕೊಟ್ಟ ವಚನ ಸಾಹಿತ್ಯದಲ್ಲಿ ಆತ್ಮದ ಹಸಿವು ನೀಗಿಸುವ ಶಕ್ತಿ ಇದೆ”ಎಂದು ಕೂಡಲಸಂಗಮ ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಹೇಳಿದರು.
ಕಲ್ಯಾಣ ಕ್ರಾಂತಿಯ ನಂತರ ಸನಾತನ ಶಕ್ತಿಗಳು ವಚನ ಸಾಹಿತ್ಯವನ್ನು ನಾಶಪಡಿಸಲು ಯುದ್ಧ ಸಾರಿದ್ದರು. ಚನ್ನಬಸವಣ್ಣ, ಮಡಿವಾಳ ಮಾಚಿದೇವ, ಅಕ್ಕನಾಗಮ್ಮನವರ ನೇತೃತ್ವದ ಶರಣರ ಪಡೆ ಅವರ ವಿರುದ್ಧ ಹೋರಾಟ ನಡೆಸಿ, ಉಳಿಸಿದ್ದರು.
ಈ ಹೋರಾಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಚನ್ನಬಸವಣ್ಣನವರು ದಟ್ಟಾರಣ್ಯದಲ್ಲಿ ಲಿಂಗೈಕ್ಯರಾಗಿದ್ದರು. ಅವರ ಕೊನೆಯ ದಿನಗಳಲ್ಲಿ ಉಳಿದುಕೊಂಡಿದ್ದ ಸ್ಥಳಕ್ಕೀಗ ಉಳವಿ ಸುಕ್ಷೇತ್ರ ಎಂದು ಕರೆಯಲಾಗುತ್ತದೆ. ಪ್ರತಿ ವರ್ಷ ಚನ್ನಹುಣ್ಣಿಮೆಯ ದಿನ ಉಳವಿಯಲ್ಲಿ ಜಾತ್ರೆ ನಡೆಯುತ್ತದೆ.
ಎಲ್ಲರಿಗೂ ಅಲ್ಲಿಗೆ ಹೋಗಲು ಆಗುವುದಿಲ್ಲ ಎಂದು ಭಾವಿಸಿ ಮಾತೆ ಮಹಾದೇವಿಯವರು, ಪ್ರತಿಯೊಬ್ಬರೂ ಅವರಿರುವ ಸ್ಥಳದಲ್ಲಿಯೇ ಚನ್ನಹುಣ್ಣಿಮೆ ಆಚರಿಸಬೇಕೆಂದು ಕರೆ ಕೊಟ್ಟರು. ಅಂದಿನಿಂದ ಇದು ಚಾಲ್ತಿಗೆ ಬಂದಿದೆ ಎಂದರು.
ಕಲ್ಯಾಣ ಕ್ರಾಂತಿ ನಂತರ ವಚನ ಸಾಹಿತ್ಯ ಗುಪ್ತಗಾಮಿನಿಯಾಗಿತ್ತು ಅದನ್ನು ಬೆಳಕಿಗೆ ತಂದ ಕೀರ್ತಿ ಫ.ಗು ಹಳಕಟ್ಟಿ ಅವರಿಗೆ ಸಲ್ಲುತ್ತದೆ. ವಿಶ್ವವಿದ್ಯಾಲಯಕ್ಕೆ ಸೀಮಿತವಾಗಿದ್ದ ವಚನ ಸಾಹಿತ್ಯವನ್ನು ಮನೆ ಮನೆಗೆ ತಲುಪಿಸಿದ ಕೀರ್ತಿ ಲಿಂಗಾನಂದ ಸ್ವಾಮೀಜಿ, ಮಾತೆ ಮಹಾದೇವಿ ಅವರಿಗೆ ಸಲ್ಲುತ್ತದೆ.
ಈಗ ವಚನ ಸಾಹಿತ್ಯ ಇಡೀ ಜಗತ್ತಿಗೆ ಪರಿಚಯವಾಗಿರುವುದು ಖುಷಿಯ ಸಂಗತಿ ಎಂದು ಹೇಳಿದರು.
ಚಿಂತಕ ಸಂಜಯ ಮಾಕಾಲ ಮಾತನಾಡಿ, ಕಾಯಕದಲ್ಲಿ ನಿರತನಾದೆಡೆ ಗುರು, ಲಿಂಗಪೂಜೆ ಕೂಡ ಮರೆಯಬಹುದು.
ಕಾಯಕದಿಂದಲೇ ಕೈಲಾಸ ಎಂದು ಹೇಳಿ ಧರ್ಮಕ್ಕಿಂತ ಕಾಯಕ ದೊಡ್ಡದು ಎಂದು ಹೇಳಿದವರು ಬಸವಣ್ಣ. ಕಾಯಕ ಸಿದ್ಧಾಂತದ ಮೇಲೆ ಜಪಾನ್ ಸೇರಿದಂತೆ ಅನೇಕ ರಾಷ್ಟ್ರಗಳು ಮುನ್ನಡೆಯುತ್ತಿವೆ. ಆದರೆ, ಭಾರತೀಯರು ಆ ಸಿದ್ಧಾಂತವನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಅದರ ಮಹತ್ವ ಅರಿತರೆ ಭಾರತವನ್ನು ಸಮೃದ್ಧ ರಾಷ್ಟ್ರವಾಗಿ ಕಟ್ಟಬಹುದು ಎಂದರು.
ರಾಷ್ಟ್ರೀಯ ಶಿಕ್ಷಣ ನ್ಯಾಸ ಅಧ್ಯಕ್ಷ ಡಾ. ಬಸವರಾಜ ಪಾಟೀಲ ಅಷ್ಟೂರ ಅವರು ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ಬಸವ ಮಂಟಪದ ಮಾತೆ ವಿಜಯಾಂಬಿಕಾ ಅವರು ಸಮ್ಮುಖ ವಹಿಸಿದ್ದರು.
ಗಾಂಧಿ ಗಂಜ್ ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ವಿಜಯಕುಮಾರ ಪಾಟೀಲ ಗಾದಗಿ, ಸಂಗೋಳಗಿ ಪಿಕೆಪಿಎಸ್ ಅಧ್ಯಕ್ಷ ಶಿವಕುಮಾರ ಹಿಂದಾ, ಬ್ಯಾಲಹಳ್ಳಿ ಪಿಕೆಪಿಎಸ್ ಸದಸ್ಯ ಓಂಕಾರ ಪಸರ್ಗೆ ಅವರನ್ನು ಸನ್ಮಾನಿಸಲಾಯಿತು.
ಲಿಂಗಾಯತ ಸಮಾಜದ ಜಿಲ್ಲಾಧ್ಯಕ್ಷ ಕುಶಾಲರಾವ್ ಪಾಟೀಲ ಖಾಜಾಪೂರ, ರಾಷ್ಟ್ರೀಯ ಬಸವ ದಳದ ಜಿಲ್ಲಾಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ಪ್ರಧಾನ ಕಾರ್ಯದರ್ಶಿ ಸುರೇಶ ಸ್ವಾಮಿ, ಡಾ.ಸಿ.ಆನಂದರಾವ್, ಚಂದ್ರಶೇಖರ ಹೆಬ್ಬಾಳೆ, ರಾಜೇಂದ್ರಕುಮಾರ ಗಂದಗೆ, ಕಂಟೆಪ್ಪ ಗಂದಿಗುಡೆ, ರಾಜೇಂದ್ರ ಜೊನ್ನಿಕೇರಿ, ವಿಜಯಕುಮಾರ ಪಾಟೀಲ, ಗಂಗಶೆಟ್ಟಿ ವಕೀಲರು, ಸಿದ್ರಾಮ ಶೆಟಕಾರ, ಗಣೇಶ ಬಿರಾದಾರ ಮತ್ತಿತರರು ಹಾಜರಿದ್ದರು.