ಮಂಗಳೂರು.19.ಏಪ್ರಿಲ್.25:- ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ವಕ್ಫ್ ಕಾಯ್ದೆ ತಿದ್ದುಪಡಿ ವಿರೋಧಿಸಿ ಕರ್ನಾಟಕ ಉಲಮಾ ಒಕ್ಕೂಟ ನಗರ ಹೊರವಲಯದ ಅಡ್ಯಾರ್ ಷಾ ಗಾರ್ಡನ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರತಿಭಟನಾ ಸಮಾವೇಶದ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಜನಸಾಗರವಾಗಿ ಪರಿವರ್ತನೆಯಾಯಿತು.
ಸಮಾವೇಶ ನಡೆದ ವಿಶಾಲ ಅಂಗಳದಲ್ಲಿ ಸಂಜೆಯ ಬಿಸಿಲು ಲೆಕ್ಕಿಸದೆ ಅಪಾರ ಜನರು ಜಮಾಯಿಸಿದ್ದರು. ಬಿಸಿ ರೋಡ್ ಮತ್ತು ಮಂಗಳೂರು ಕಡೆಯಿಂದ ಬಂದವರು ಕಿಲೊಮೀಟರ್‌ಗಳಷ್ಟು ದೂರ ವಾಹನ ನಿಲ್ಲಿಸಿ ನಡೆದುಕೊಂಡು ಬಂದರು. ನಾಲ್ಕು ಗಂಟೆಯ ವೇಳೆಗೆ ಸಮಾವೇಶ ಆರಂಭವಾಯಿತು. ನಂತರವೂ ಬಂದವರು ಜಾಗ ಸಾಕಾಗದೆ ರಸ್ತೆಬದಿಯಲ್ಲಿ ನಿಂತರು. ಮತ್ತೂ ಬಂದವರು ರಸ್ತೆಯನ್ನು ಆಕ್ರಮಿಸಿಕೊಂಡರು. ಪ್ರತಿಭಟನೆಗಾಗಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಬಾರದು ಎಂದು ಹೈಕೋರ್ಟ್ ಗುರುವಾರ ಪೊಲೀಸರಿಗೆ ಸೂಚಿಸಿತ್ತು. ಸುಗಮ ಸಂಚಾರಕ್ಕಾಗಿ 350 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ವಾಹನ ಸಂಚಾರಕ್ಕೆ ಅಡ್ಡಿಪಡಿಸಬಾರದು, ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಸಂಘಟಕರು ಪದೇ ಪದೇ ಸೂಚಿಸುತ್ತಿದ್ದರು.
ಕಾರ್ಯಕ್ರಮ ಮುಂದುವರಿದಂತೆ ರಸ್ತೆಯಲ್ಲಿ ಜನರ ಸಂಖ್ಯೆ ಹೆಚ್ಚುತ್ತಲೇ ಹೋಯಿತು. ಐದು ಗಂಟೆಯ ವೇಳೆ ಹೆದ್ದಾರಿಯಲ್ಲಿ ಕಿಲೊಮೀಟರ್‌ಗಟ್ಟಲೆ ದೂರದ ವರೆಗೆ ಜನಸಾಗರ ಕಂಡುಬಂತು. ದೂರದ ಊರುಗಳಿಂದ ವಿಶೇಷ ಬಸ್ ಮತ್ತು ಇತರ ವಾಹನಗಳಲ್ಲಿ ಬಂದವರು ವಾಪಸ್ ಹೋಗುವಾಗ ಕೆಲವರು ವಾಹನಗಳ ಮೇಲೆ ಕುಳಿತು ವಿಡಿಯೊ ಮಾಡತೊಡಗಿದರು. ಕೆಲವೇ ನಿಮಿಷಗಳಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
ಪಡೀಲ್‌ನಿಂದ ಅರ್ಕುಳದ ವರೆಗೆ ಸಂಚಾರ ವ್ಯತ್ಯವಾಯಿತು. ಉಡುಪಿ, ಕೊಡಗು, ಚಿಕ್ಕಮಗಳೂರು, ಕಾಸರಗೋಡು ಜಿಲ್ಲೆಯ ಜನರು ಭಾಗವಹಿಸಿದ್ದರು. ಹರೇಕಳ, ಪಾವೂರು, ಕೊಣಾಜೆ, ಪಜೀರ್, ಅಂಬ್ಲವೊಗರು, ಮುನ್ನೂರು, ಬೆಳ್ಮ, ಮಂಜನಾಡಿ, ಕಿನ್ಯ, ಕುರ್ನಾಡು, ಇರಾ ಗ್ರಾಮಗಳ ಜನರು ಹರೇಕಳ-ಅಡ್ಯಾರ್ ಸೇತುವೆ ಮೂಲಕ ಮತ್ತು ಕೆಲವರು ನೇತ್ರಾವತಿ ನದಿಯಲ್ಲಿ ದೋಣಿ ಬಳಸಿಕೊಂಡು ಬಂದರು.
ಆಕ್ರೋಶಕ್ಕೆ ಒಳಗಾಗದಂತೆ ಸಂಘಟಕರು ಪದೇ ಪದೇ ಮನವಿ ಮಾಡಿದರು. ಶಾಂತಿಯುತ ಹೋರಾಟ ಮಾಡಬೇಕು, ಆವೇಶ, ಆಕ್ರೋಶವನ್ನು ಬದಿಗೊತ್ತಿ ‘ನಮ್ಮ ಸಂಸ್ಕೃತಿಯ ಪ್ರಕಾರ ವರ್ತಿಸಬೇಕು’ ಎಂದು ಕೋರಲಾಗುತ್ತಿತ್ತು. ಸಮಾವೇಶದ ಪರವಾಗಿ ಒಗ್ಗಟ್ಟಿನ ಘೋಷಣೆಗಳನ್ನು ವೇದಿಕೆಯಿಂದಲೇ ಕೂಗಲಾಗುವುದು. ಆದ್ದರಿಂದ ಉದ್ರೇಕಕಾರಿ ಘೋಷಣೆಯನ್ನು ಯಾರೂ ಕೂಗಬಾರದು ಎಂದು ಕೂಡ ತಿಳಿಸಲಾಯಿತು.
ಮೊಳಗಿದ ಒಗ್ಗಟ್ಟಿನ ಘೋಷಣೆಗಳು
ಏ ವಕ್ಫ್ ಹಮಾರಿ ಆಜಾದಿ; ಜಾನ್‌ಸೇ ಪ್ಯಾರಿ ಆಜಾದಿ; ಪ್ಯಾರಿ ಪ್ಯಾರಿ ಆಜಾದಿ; ಬಿಟ್ಟು ಕೊಡಲ್ಲ, ಬಿಟ್ಟು ಕೊಡಲ್ಲ; ವಕ್ಫ್ ಆಸ್ತಿ ಬಿಟ್ಟು ಕೊಡಲ್ಲ; ಕರಾಳ ಕಾಯ್ದೆಯ ಕಾನೂನು ಆಗಿ ಒಪ್ಪಿಕೊಳ್ಳಲು ನಾವು ಸಿದ್ಧರಿಲ್ಲ; ವಕ್ಫ್ ಆಸ್ತಿಯ ಒಂದಿಂಚನ್ನೂ ಬಿಟ್ಟುಕೊಡಲು ಸಿದ್ಧರಿಲ್ಲ; ವಕ್ಫ್ ತಿದ್ದುಪಡಿ ಮಸೂದೆಯನ್ನು ಎಂದಿಗೂ ಒಪ್ಪುವುದಿಲ್ಲ; ವಕ್ಫ್ ಯಾರದೇ ಔದಾರ್ಯವಲ್ಲ, ಅದು ಪೂರ್ವಕರ ಸೊತ್ತು, ಮುಟ್ಟಿದರೆ ನಿಮಗೆ ಅಪತ್ತು; ವಕ್ಫ್ ಎಂಬುದು ಧರ್ಮದ ಭಾಗ, ಅದರಲ್ಲಿ ಹಸ್ತಕ್ಷೇಪಕ್ಕೆ ಸರ್ಕಾರಕ್ಕಿಲ್ಲ ಅಧಿಕಾರ ಎಂಬ ಘೋಷಣೆಗಳನ್ನು ವೇದಿಕೆಯಿಂದ ಕೂಗಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಮಂಡಳಿ ಸದಸ್ಯ ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್ ಮಾತನಾಡಿ ಮುಸ್ಲಿಮರ ಆರ್ಥಿಕ ಶಕ್ತಿಯನ್ನು ಹೆಚ್ಚಿಸುವುದಕ್ಕಾಗಿ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ ಈಚೆಗೆ ಮುಸ್ಲಿಮರಿಗಿರುವ ಯೋಜನೆಗಳಿಗೆ ಕತ್ತರಿ ಹಾಕಿ ಅನುದಾದ ಮೊತ್ತವನ್ನು ಕಡಿತಗೊಳಿಸಲಾಗಿದೆ ಎಂದರು. ಈಗ ಇರುವ ಕಾಯ್ದೆಯ ಸೆಕ್ಷನ್ 52ಎ ಪ್ರಕಾರ ವಕ್ಫ್ ಆಸ್ತಿಯನ್ನು ವಶಪಡಿಸಿಕೊಂಡರೆ ಕಠಿಣ ಶಿಕ್ಷೆ ಇದೆ. ಅದನ್ನು ತಿದ್ದುಪಡಿಯಲ್ಲಿ ಬದಲಿಸಲಾಗಿದೆ. ಈ ತಿದ್ದುಪಡಿ ಅಸಾಂವಿಧಾನಿಕ ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಕರ್ನಾಟಕ ಉಲಮಾ ಒಕ್ಕೂಟದ ನೇತೃತ್ವದಲ್ಲಿ ಅಡ್ಯಾರ್ ಕಣ್ಣೂರಿನ ಶಾ ಗಾರ್ಡನ್‌ನಲ್ಲಿ ಪ್ರತಿಭಟನಾ ಸಮಾವೇಶದಿಂದ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಯಿತು : ಪ್ರಜಾವಾಣಿ ಚಿತ್ರಕರ್ನಾಟಕ ಉಲಮಾ ಒಕ್ಕೂಟದ ಕೋಶಾಧಿಕಾರಿ ಎಂ.ಕೆ ಶಾಫಿ ಸಅದಿ ಮಾತನಾಡಿದರು :ಪ್ರಜಾವಾಣಿ ಚಿತ್ರ
ಎಂ.ಕೆ ಶಾಫಿ ಸಅದಿ ಕರ್ನಾಟಕ ಉಲಮಾಗಳ ಒಕ್ಕೂಟದ ಕೋಶಾಧಿಕಾರಿ ಬುಲ್ಡೋಜರ್ ಹತ್ತಿಸಿದವರ ಇಂಧನ ತಾತ್ಕಾಲಿಕವಾಗಿ ಖಾಲಿಯಾಗಿದೆ. ವಕ್ಫ್ ವಿಷಯದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಬಂದಾಗ ಬುಲ್ಡೋಜರ್‌ಗಳೇ ಖಾಲಿಯಾಗಿ ಜಾತ್ಯತೀತ ಪ್ರಜಾಪ್ರಭುತ್ವದ ಸೌಂದರ್ಯ ಕಂಗೊಳಿಸಲಿದೆ.
ಎರಡು ವಿಭಾಗಗಳ ಒಗ್ಗಟ್ಟು
ಸುನ್ನಿ ಸಂಘಟನೆಗಳ ಎರಡು ವಿಭಾಗದ ಉಲೆಮಾಗಳ ನಾಯಕತ್ವದಲ್ಲಿ ಒಕ್ಕೂಟವನ್ನು ರೂಪುಗೊಳಿಸಲಾಗಿತ್ತು. ಈ ಸಮಾವೇಶ ಇಂಥ ಒಗ್ಗಟ್ಟಿಗೂ ಸಾಕ್ಷಿಯಾಯಿತು ಎಂದು ಮುಖಂಡರು ಹೇಳಿದರು. ಫಾಝಿಲ್ ಹಝ್ರತ್ ಕಾವಳಕಟ್ಟೆ ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ ಖಾಸಿಂ ದಾರಿಮಿ ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ ಕೆ.ಎಲ್ ಉಮರ್ ದಾರಿಮಿ ಪಟ್ಟೋರಿ ಅಬೂಸುಫಿಯಾನ್ ಸಖಾಫಿ ಅಬ್ದುಲ್ ರಹ್ಮಾನ್ ರಝ್ವಿ ಕಲ್ಕಟ್ಟ ಮೆಹಬೂಬ್ ಸಖಾಫಿ ಕಿನ್ಯ ಮೊಯ್ದಿನ್ ಬಾವಾ ಉಲೆಮಾಗಳಾದ ಎಸ್.ಬಿ.ಮುಹಮ್ಮದ್ ದಾರಿಮಿ ಅಮೀರ್ ತಂಙಳ್ ಕಿನ್ಯ ರಫೀಕ್ ಹುದವಿ ಕೋಲಾರ ಅನ್ವರ್ ಅಸ್‌ಅದಿ ಚಿತ್ರದುರ್ಗ ಶಾಸಕ ಐವನ್ ಡಿಸೋಜ ನಿವೃತ್ತ ಎಸ್‌ಪಿ ಜಿ.ಎ ಬಾವಾ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಉದ್ಯಮಿಗಳಾದ ಝಕರಿಯಾ ಜೋಕಟ್ಟೆ ಶರೀಫ್ ವೈಟ್‌ಸ್ಟೋನ್ ಎಸ್‌ಡಿಪಿಐ ಮುಖಂಡರಾದ ರಿಯಾಝ್ ಫರಂಗಿಪೇಟೆ ಅನ್ವರ್ ಸಾದತ್ ಬಜತ್ತೂರು ಅತಾವುಲ್ಲಾ ಜೋಕಟ್ಟೆ ಭಾಗವಹಿಸಿದ್ದರು.
ಮಲಯಾಳಂ ಭಾಷೆಯಲ್ಲಿ ಸ್ವಾಗತ
ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಉಸ್ಮಾನುಲ್ಲ ಫೈಜಿ ತೋಡಾರ್ ಮಲಯಾಳಂ ಭಾಷೆಯಲ್ಲೇ ಮಾತನಾಡಿದರು. ಇಸ್ಲಾಂನ ಆದಿಯಲ್ಲೇ ವಕ್ಫ್ ಇತ್ತು ಎಂಬುದಕ್ಕೆ ಸಾಕ್ಷಿಗಳಿವೆ. ವಕ್ಫ್‌ಗೆ ನಾಲ್ಕು ಭಾಗಗಳು ಇದ್ದು ಅದರಲ್ಲಿ ಎಲ್ಲವನ್ನೂ ಸ್ಟಷ್ಟಪಡಿಸಲಾಗಿದೆ. ವಕ್ಫ್ ಅರಬಿ ಭಾಷೆಯ ಪದ. ಅರಬಿ ಮುಸ್ಲಿಮರ ಭಾಷೆ ಆದ್ದರಿಂದ ಅದು ಮುಸ್ಲಿಮರಿಗೆ ಮಾತ್ರ ಸಂಬಂಧಿಸಿದ್ದು ಎಂಬುದು ಸ್ಪಷ್ಟ. ಹಿಂದು ಅಥವಾ ಕ್ರೈಸ್ತರ ಅಸ್ತಿಯನ್ನು ಕಬಳಿಸುವ ಯಾವ ಹುನ್ನಾರವೂ ಇದರಲ್ಲಿ ಇಲ್ಲ ಎಂದು ಅವರು ಹೇಳಿದರು.
ಮೊಬೈಲ್ ಫೋನ್ ನೆಟ್‌ವರ್ಕ್ ಜಾಮ್
ಶುಭ ಶುಕ್ರವಾರದ ರಜೆ ಇದ್ದುದರಿಂದ ಜನ ಮತ್ತು ವಾಹನಗಳ ಓಡಾಟ ಕಡಿಮೆ ಇತ್ತು. ಕೆಲವರು ಅಂಗಡಿಗಳನ್ನು ಮುಚ್ಚಿ ಕೆಲಸವನ್ನು ಸ್ಥಗಿತೊಳಿಸಿ ಸಮಾವೇಶಕ್ಕೆ ಬಂದಿದ್ದರು. ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದರೂ ಪೊಲೀಸರು ಎಲ್ಲ ವಾಹನಗಳ ಸಂಚಾರವನ್ನು ಚಿತ್ರೀಕರಿಸಿಕೊಂಡರು. ಸಮಾವೇಶ ನಡೆದ ಸ್ಥಳ ಮತ್ತು ಸುಮಾರು ಅರ್ಧ ಕಿಲೊಮೀಟರ್ ಸುತ್ತಳತೆಯಲ್ಲಿ ಡ್ರೋನ್‌ಗಳ ಹಾರಾಟ ನಿರಂತರವಾಗಿತ್ತು. ಜನರು ಭಾರಿ ಸಂಖ್ಯೆಯಲ್ಲಿ ಸೇರಿದ್ದರಿಂದ ಮೊಬೈಲ್ ಫೋನ್ ನೆಟ್‌ವರ್ಕ್ ಜಾಮ್ ಆಗಿತ್ತು.