• ಅಂಡಾಣುದಲ್ಲಿ ನೀರು ತುಂಬಿದ ಚೀಲದ ಶಸ್ಸ್ತಚಿಕಿತ್ಸೆ
• ಜಿಲ್ಲಾಧಿಕಾರಿಗಳಿಂದ ಶಸ್ಸ್ತ ಚಿಕಿತ್ಸೆಯ ವೀಕ್ಷಣೆ
• ರಿಮ್ಸ್ ವೈದ್ಯರಿಗೆ ಜಿಲ್ಲಾಧಿಕಾರಿಗಳಿಂದ ಶುಭಾಶಯ
• ರಿಮ್ಸಗೆ ಆಗಮಿಸಿ ಸೇವೆ ಪಡೆಯಲು ಜನತೆಗೆ ಸಲಹೆ
ರಾಯಚೂರು ಜುಲೈ 25 (ಕರ್ನಾಟಕ ವಾರ್ತೆ): ಅಂಡಾಣುವಿನಲ್ಲಿ ನೀರು ತುಂಬಿದ ಚೀಲದ ಶಸ್ತ್ರ ಚಿಕಿತ್ಸೆಯು ರಾಯಚೂರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ರಿಮ್ಸ್) ಬೋಧಕ ಆಸ್ಪತ್ರೆಯಲ್ಲಿ ಪ್ರಥಮ ಬಾರಿಗೆ ಜುಲೈ 25ರಂದು ಯಶಸ್ವಿಯಾಗಿ ನಡೆಯಿತು.
ಈ ಶಸ್ತ್ರ ಚಿಕಿತ್ಸೆಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಬೆಳಗ್ಗೆ ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯರು ಪ್ರಥಮ ಬಾರಿಗೆ ನಡೆಸುತ್ತಿರುವ ಶಸ್ತ್ರಚಿಕಿತ್ಸೆ ವಿಧಾನಗಳನ್ನು ಖುದ್ದು ವೀಕ್ಷಣೆ ನಡೆಸಿದರು.
ಅಂಡಾಣುವಿನಲ್ಲಿ ನೀರು ತುಂಬಿದ ಚೀಲದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿ ಆಗಮಿಸಿದ ಸ್ತ್ರೀ-ಪುರುಷ ವಿಭಾಗದ ಮುಖ್ಯಸ್ಥರಾದ ಡಾ.ರಾಧಾ ಸಂಘವಿ ನೇತೃತ್ವದ ಸಹ ಪ್ರಾಧ್ಯಾಪಕಿ ಡಾ.ಅನುಜಾ ಸಗಮನಕುಂಟಾ, ಅರವಳಿಕೆ ತಜ್ಞ ಡಾ.ಕಿರಣ್ ನಾಯಕ, ಡಾ.ಎಮ್.ಕೆ. ಪಾಟೀಲ್, ಶಸ್ತ್ರ ಚಿಕಿತ್ಸಾ ವಿಭಾಗದ ಪ್ರಭಾರ ಮುಖ್ಯಸ್ಥ ಅನಿಲಕುಮಾರ್, ಶುಶ್ರೂಷಕ ಅಧಿಕಾರಿ ಅನ್ನಪೂರ್ಣ, ಶಾಂಭವಿ, ಲಿಂಗರಾಜ್, ನಾರಾಯಣ ಅವರನ್ನೊಳಗೊಂಡ ತಂಡಕ್ಕೆ ಇದೆ ವೇಳೆ ಜಿಲ್ಲಾಧಿಕಾರಿಗಳು ಶುಭಾಶಯಗಳನ್ನು ತಿಳಿಸಿದರು. ಇನ್ನು ಹೆಚ್ಚಿನ ಮಟ್ಟದಲ್ಲಿ ಇಂತಹ ಚಿಕಿತ್ಸೆಗಳನ್ನು ನಡೆಸುವಂತೆ ವೈದ್ಯಾಧಿಕಾರಿಗಳು ಮತ್ತು ವೈದ್ಯರು ಮತ್ತು ಸಿಬ್ಬಂದಿಗೆ ಜಿಲ್ಲಾಧಿಕಾರಿಗಳು ಸಲಹೆ ನೀಡಿದರು.
*ಸಾರ್ವಜನಿಕರಲ್ಲಿ ಮನವಿ*:
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಲ್ಲಿ, ಉನ್ನತ ಮಟ್ಟದ ಉದರ ದರ್ಶಕ ಯಂತ್ರೋಪಕರಣದ ಮೂಲಕ ಅಂಡಾಣುವಿನಲ್ಲಿ ನೀರು ತುಂಬಿದ ಚೀಲದ ಶಸ್ತ್ರ ಚಿಕಿತ್ಸೆಯನ್ನು ಜಿಲ್ಲೆಯಲ್ಲಿ ಮೊದಲ ಬಾರಿಗೆ ಯಶಸ್ವಿಯಾಗಿ ನಡೆಸಲಾಗಿದೆ. ಇಂತಹ ಪ್ರಯತ್ನದಿಂದ ಮತ್ತು ಯಶೋಗಾಥೆಯಿಂದ ವೈದ್ಯರಲ್ಲಿ ಮತ್ತು ರೋಗಿಗಳಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಇಂತಹ ವಿಶೇಷತೆಗಳಿಂದ ರಿಮ್ಸ್ ಆಸ್ಪತ್ರೆಯು ಹೆಸರಾಗುತ್ತಿದೆ. ವಿಶೇಷವಾದ ವೈದ್ಯಕೀಯ ಸೌಕರ್ಯವಿರುವ ರಿಮ್ಸ್ ಆಸ್ಪತ್ರೆಗೆ ಸಾರ್ವಜನಿಕರು ಆಗಮಿಸಿ ವೈದ್ಯಕೀಯ ಸೌಕರ್ಯದ ಸದುಪಯೋಗ ಪಡೆದುಕೊಳ್ಳಬೇಕೆಂದು ಇದೆ ವೇಳೆ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ಜಿಲ್ಲೆಯ ಸಾರ್ವಜನಿಕರಲ್ಲಿ ಮನವಿ ಮಾಡಿದರು.
*ರಿಮ್ಸನಲ್ಲಿ ಉತ್ತಮ ಚಿಕಿತ್ಸೆ*: ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರ ನಿರ್ದೇಶನದಂತೆ ಜುಲೈ 25ರಂದು ರಿಮ್ಸ್ ಆಸ್ಪತ್ರೆಯ ಸ್ತ್ರಿ-ಪುರುಷ ವಿಭಾಗದಲ್ಲಿ ವಿಶೇಷವಾದ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಗುಣಮಟ್ಟ ಚಿಕಿತ್ಸೆ ಪಡೆಯಲು ಹೋದರೆ ಖಾಸಗಿ ಆಸ್ಪತ್ರೆಯಲ್ಲಿ ಕನಿಷ್ಠ ಒಂದರಿಂದ ಒಂದೂವರೆ ಲಕ್ಷ ರೂಪಾಯಿಗಳು ಖರ್ಚಾಗುತ್ತದೆ. ರಿಮ್ಸ್ ಆಸ್ಪತ್ರೆಯಲ್ಲಿ ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಸಾರ್ವಜನಿಕರು ಇಂತಹ ಸೇವೆಯನ್ನು ಪಡೆಯಬೇಕು. ಕನಿಷ್ಠ 10 ರಿಂದ 12 ಲಕ್ಷ ರೂಪಾಯಿ ವೆಚ್ಚವಾಗುವ ವಾಕ್ ಲ್ಯಾಂಡ್ ಚಿಕಿತ್ಸೆಯು ರಿಮ್ಸ್ ಆಸ್ಪತ್ರೆಯ ವಾಕ್ ಶ್ರಾವಣ ವಿಭಾಗದಲ್ಲಿ ಉಚಿತವಾಗಿ ಸಿಗಲಿದೆ. ಕಣ್ಣಿನ ವಿಭಾಗದಲ್ಲಿ ನಿರಂತರವಾಗಿ ಕಣ್ಣಿನ ತಪಾಸಣೆ ಮಾಡಲಾಗುತ್ತಿದೆ.
ಸಾರ್ವಜನಿಕರು ತಮ್ಮ ಕಣ್ಣಿನ ಚಿಕಿತ್ಸೆಗೆ ರಿಮ್ಸ್ ಆಸ್ಪತ್ರೆಗೆ ಬಂದು ಅಂಧತ್ವ ನಿರ್ಮೂಲನೆಗೆ ಸಂಸ್ಥೆಯೊಂದಿಗೆ ಕೈಜೋಡಿಸಬೇಕು. ಇದಕ್ಕಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ರೋಟರಿ ಹಾಗೂ ಲೈನ್ಸ್ ಕ್ಲಬ್ ವತಿಯಿಂದ ಕಣ್ಣಿನ ದೋಷದ ಲ್ಯಾನ್ಸ್ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ ಎಂದು ಇದೆ ವೇಳೆ ರಿಮ್ಸ್ ಸಂಸ್ಥೆಯ ನಿರ್ದೇಶಕರಾದ ಡಾ.ಬಿ.ಹೆಚ್.ರಮೇಶ ಅವರು ಜಿಲ್ಲೆಯ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ರಿಮ್ಸ್ ಸಂಸ್ಥೆಗೆ ನಿಯಮಿತವಾಗಿ ಭೇಟಿ ನೀಡಿ ಇಲ್ಲಿನ ವೈದ್ಯಾಧಿಕಾರಿಗಳು ಮತ್ತು ತಜ್ಞವೈದ್ಯರೊಂದಿಗೆ ನಿರಂತರವಾಗಿ ಸಭೆ ನಡೆಸಿ ಮಾರ್ಗದರ್ಶನ ನೀಡುತ್ತಿದ್ದು, ಇದರಿಂದಾಗಿ ಹೊಸ ಹೊಸ ಸೌಕರ್ಯ ಪಡೆಯುತ್ತ ರಿಮ್ಸ್ ಆಸ್ಪತ್ರೆಯ ಸಾಮರ್ಥ್ಯ ಬಲಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಇನ್ನು ಹೊಸ ಹೊಸ ಉಪಕರಣಗಳು ಬರಲಿವೆ. ಇದು ನಮಗೆ ಸಂತಸದ ಸಂಗತಿಯಾಗಿದೆ ಎಂದು ಇದೆ ವೇಳೆ ಡಾ.ಬಿ.ಹೆಚ್.ರಮೇಶ ಅವರು ಸಂತಷ ವ್ಯಕ್ತಪಡಿಸಿದರು.
ರಿಮ್ಸನ ಶಸ್ತ್ರ ಚಿಕಿತ್ಸಾ ವಿಭಾಗದಲ್ಲಿ ಕೀಲು ಬದಲಾವಣೆ, ಅರ್ಥಸ್ಕೋಪ್, ಬೆನ್ನು ನರರೋಗದ ದೌರ್ಬಲ್ಯ, ಉದರಕ್ಕೆ ಸಂಬಂಧಿಸಿದಂತೆ ಕ್ಯಾಸ್ಟ್ರೋ ಚಿಕಿತ್ಸೆಗಳನ್ನು ಗುಣಮಟ್ಟದ ರೀತಿಯಲ್ಲಿ, ಸಂಸ್ಥೆಯ ನುರಿತ ತಜ್ಞರು ಹಾಗೂ ಓಪೆಕ್ ಆಸ್ಪತ್ರೆ ಸಹಯೋಗದೊಂದಿಗೆ ಮಾಡಲಾಗುತ್ತಿದೆ. ಜಿಲ್ಲೆಯ ಸಾರ್ವಜನಿಕರು ಈ ಸೇವೆಗಳನ್ನು ಉಚಿತವಾಗಿ ಹೆಚ್ಚಿನ ಮಟ್ಟದಲ್ಲಿ ಪಡೆದುಕೊಳ್ಳಬೇಕು. ಆರ್ಥಿಕ ಹೊರೆಯನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಇದೆ ವೇಳೆ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ವಿಜಯಶಂಕರ ನವಸುಂಡಿ ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ರಿಮ್ಸ್ ಸಂಸ್ಥೆಯ ಔಷಧ ವಿಭಾಗದ ಮುಖ್ಯಸ್ಥರಾದ ಡಾ.ಬಾಸ್ಕರ್ ರಾವ್ ಹಾಗೂ ಆಸ್ಪತ್ರೆಯ ಇನ್ನೀತರ ವೈದ್ಯರು ಮತ್ತು ಸಿಬ್ಬಂದಿ ಇದ್ದರು.