ಬೆಂಗಳೂರು.06.ಜನವರಿ.26: ರಾಜ್ಯ ಸರ್ಕಾರಿ ನೌಕರರ ಸಂಘ ವತಿಯಿಂದ ಆಯೋಜಿಸಿದ್ದ ಮೂರು ದಿನಗಳ ರಾಜ್ಯೋತ್ಸವ ಹಾಗೂ ಹೊಸ ವರ್ಷದ ಸಂಭ್ರಮ ಕಾರ್ಯಕ್ರಮ ವಿಜೃಂಭಣೆಯಿಂದ ಸಮಾಪ್ತಿಗೊಂಡಿತು.
ಈ ಕಾರ್ಯಕ್ರಮದಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿ ಬಿಂಬಿಸುವ ಚಿತ್ರಗೀತೆಗಳಿಗೆ ಮತ್ತು ಜಾನಪದ ಗೀತೆಗಳಿಗೆ ಸರ್ಕಾರಿ ನೌಕರರು ನೃತ್ಯ ಪ್ರದರ್ಶಿಸಿ ನೋಡುಗರ ಗಮನ ಸೆಳೆದರು.
ರಾಜ್ಯದ ಹಿತಾಸಕ್ತಿ ಕಾಪಾಡಲು, ಕನ್ನಡವನ್ನು ಉಳಿಸಿ- ಬೆಳೆಸಲು ಸರ್ಕಾರಿ ನೌಕರರು ಸದಾ ನಿಲ್ಲುತ್ತಾರೆ ಎಂಬುದು ಕಾರ್ಯಕ್ರಮದ ಸಾರವಾಗಿತ್ತು. ಜಾನಪದ ಮತ್ತು ಕನ್ನಡ ಗೀತೆ ಗುಂಪು ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ವಾಣಿಜ್ಯ ತೆರಿಗೆ ಇಲಾಖೆಯ ಚಿತ್ರಾ ಪಾಟೀಲ್ ತಂಡಕ್ಕೆ 1 ಲಕ್ಷ ರೂ. ಬಹುಮಾನ ವಿತರಿಸಲಾಯಿತು. 2ನೇ ಸ್ಥಾನ ಪಡೆದ ಉಡುಪಿಯ ಶಾಲಾ ಶಿಕ್ಷಣ ಇಲಾಖೆ ತಂಡಕ್ಕೆ 75 ಸಾವಿರ ರೂ. ಮತ್ತು 3ನೇ ಸ್ಥಾನ ಪಡೆದ ಶಿವಮೊಗ್ಗದ ಶಾಲಾ ಶಿಕ್ಷಣ ಇಲಾಖೆ ತಂಡಕ್ಕೆ 50 ಸಾವಿರ ರೂ. ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.
ಮುಂದಿನ ವರ್ಷದಿಂದ ನಡೆಯುವ ರಾಜ್ಯಮಟ್ಟದ ಜಾನಪದ ಮತ್ತು ಕನ್ನಡ ಗೀತೆ ಗುಂಪು ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ 5 ಲಕ್ಷ ರೂ. ನಗದು ಬಹುಮಾನ ನೀಡಲಾಗುವುದು. ಜಿಲ್ಲಾ ಮಟ್ಟದಲ್ಲೂ ಈ ಕನ್ನಡ ರಾಜ್ಯೋತ್ಸವ ಸ್ಪರ್ಧೆಯನ್ನು ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಸಂಘ ಘೋಷಿಸಿತು.
ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಮಾತನಾಡಿ, ಕಲೆ ಯಾರೊಬ್ಬರ ಸ್ವತ್ತಲ್ಲ. ನಮ್ಮ ನೌಕರರು ಅದ್ಭುತವಾಗಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಜಾನಪದ ಕಲೆ ಅನೇಕ ಕೊಡುಗೆ ಕೊಟ್ಟಿದೆ. ಈ ಕಲೆಯನ್ನು ಉಳಿಸಲು ನಮ್ಮ ನೌಕರರು ಶ್ರಮಿಸಿದ್ದಾರೆ.
ಕನ್ನಡ ವಿಚಾರದಲ್ಲಿ ನಮ್ಮ ಸಂಘ ನಿರಂತರವಾಗಿ ಬೆಂಬಲ ನೀಡುತ್ತಿದೆ ಎಂದರು. ಸಂಘದ ಪ್ರಧಾನ ಕಾರ್ಯದರ್ಶಿ ಗಿರಿಗೌಡ, ಗೌರವಾಧ್ಯಕ್ಷ ಬಸವರಾಜು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಸಂಘದ ಅಧ್ಯಕ್ಷ ಎ. ಅಮೃತ್‌ರಾಜ್, ಹಿರಿಯ ಪತ್ರಕರ್ತ ಚಂದ್ರಹಾಸ ಮತ್ತಿತರರಿದ್ದರು.
ತಿಂಗಳಲ್ಲಿ ಒಪಿಎಸ್ ಅನುಷ್ಠಾನಪ್ರಸ್ತುತ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಶಿಫಾರಸ್ಸಿನಂತೆ ವೇತನ ದೊರೆಯುತ್ತಿದೆ. ಮುಂದಿನ ದಿನಗಳಲ್ಲಿ ಕೇಂದ್ರ ನೌಕರರ ಮಾದರಿಯಲ್ಲಿ ಅಂದರೆ 8ನೇ ವೇತನ ಆಯೋಗ ವೇತನವನ್ನು ರಾಜ್ಯದಲ್ಲಿ ಜಾರಿಗೆ ತರಲು ಹೋರಾಟ ನಡೆಸಲಾಗುವುದು.
ಮುಂದಿನ ತಿಂಗಳದೊಳಗೆ ಹಳೇ ಪಿಂಚಣಿ ಯೋಜನೆ (ಒಪಿಎಸ್) ಜಾರಿಗೆ ಬರುವ ಸಾಧ್ಯತೆ ಇದೆ. ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆ ಶುರುವಾಗಿದ್ದು, ಸರ್ಕಾರಕ್ಕೆ ವರದಿ ಸಲ್ಲಿಕೆಯಾದ ಬಳಿಕ ಕೂಡಲೇ ಒಪಿಎಸ್ ಅನುಷ್ಠಾನ ಬರುವ ನಿರೀಕ್ಷೆ ಇದೆ ಎಂದು ಸಿ.ಎಸ್. ಷಡಾಕ್ಷರಿ ಹೇಳಿದರು.
ನೌಕರರ ಹಿತಾಸಕ್ತಿ ಕಾಪಾಡುವ ಕೆಲಸವನ್ನು ನಾನು ಮಾಡಿದ್ದಾನೆ. 7ನೇ ವೇತನ ಆಯೋಗ, ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೊಳಿಸಿದ್ದೇವೆ. ಕೋವಿಡ್, ಪ್ರವಾಹಕ್ಕೆ ಸಂದರ್ಭದಲ್ಲಿ ನಮ್ಮ ನೌಕರರು, ನೂರಾರು ಕೋಟಿ ರೂ. ದೇಣಿಗೆ ಕೊಟ್ಟಿದ್ದಾರೆ ಎಂದರು.
ಇವತ್ತಿನ ಕಾಲಘಟ್ಟದಲ್ಲಿ ಸಾಕಷ್ಟು ಸರ್ಕಾರಿ ನೌಕರರು ಪ್ರತಿಭಾವಂತರು ಇದ್ದಾರೆ. ಸಣ್ಣ ಅಧಿಕಾರಿಗಳಿಂದ ದೊಡ್ಡ ಅಧಿಕಾರಿಗಳವರೆಗೂ ಕನ್ನಡ ಬೆಳೆಸಲು ತಮ್ಮ ಕರ್ತವ್ಯವೆಂದು ಕಾರ್ಯನಿರ್ವಹಿಸುತ್ತಿದ್ದಾರೆ. ದೊಡ್ಡ ಅಧಿಕಾರಿಗಳ ಪ್ರೋತ್ಸಾಹದಿಂದ ಇವತ್ತು ಕನ್ನಡ ಉಳಿದಿದೆ.
ಕೆಲಸದ ಒತ್ತಡದಿಂದ ಹೃದಯಾಘಾತ ಸೇರಿ ಅನೇಕ ಸಾವು- ನೋವು ಆಗುತ್ತದೆ. ಇಂತಹ ಒತ್ತಡದಿಂದ ಹೊರಗೆ ಬರಲು ಪ್ರತಿ 3 ತಿಂಗಳಿಗೊಮ್ಮೆ ಇಂತಹ ಕಾರ್ಯಕ್ರಮ ಆಯೋಜಿಸುವ ಅಗತ್ಯವಿದೆ. ಎಲ್ಲ ನೌಕರರಿಗೂ ಕಡ್ಡಾಯವಾಗಿ ಟರ್ಮ್ ಇನ್ಯೂರೆನ್ಸ್ ಮಾಡಿಸುವಂತಾಗಬೇಕು.






Any questions related to ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿ ವೇತನ.?