ಬೆಂಗಳೂರು.09.ಜನವರಿ.26: ರಾಜ್ಯದ 31 ಜಿಲ್ಲೆಗಳಲ್ಲೂ ಮತ್ತು 5 ಪೊಲೀಸ್ ಆಯುಕ್ತಾಲಯ ಅಕ್ಕಪಡೆ ಯೋಜನೆ ಜಾರಿಗೊಳಿಸಲು ಸಚಿವ ಸಂಪುಟ ಸಭೆ ಅನುಮೋದನೆ, ಗೃಹಲಕ್ಷ್ಮೀ ವಿವಿಧೋದ್ದೇಶ ಸಹಕಾರ ಸಂಘ ಅನುಮೋದನೆ ಸಿಗಲಿಲ್ಲ ಈ ವಿಷಯ ಮುಂದೂಡಲಾಗಿದೆ.
ರಾಜ್ಯಾದ್ಯಂತ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಾಗಿ ಈ ಅಕ್ಕಪಡೆಯು ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಕೆಲಸ ಮಾಡಲಿದ್ದು, ಮಹಿಳೆಯರ ರಕ್ಷಣೆ, ಸುರಕ್ಷತೆ ಹಾಗೂ ಭದ್ರತೆ ಕುರಿತು ಜಾಗೃತಿ ಮೂಡಿಸಲಿದೆ.
ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ತಕ್ಷಣದ ಬೆಂಬಲವನ್ನು ಈ ಅಕ್ಕಪಡೆ ನೀಡಲಿದೆ.
ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 27 ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು, ಸಭೆ ನಂತರ ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರು ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸಾರ್ವಜನಿಕ ಸ್ಥಳಗಳಲ್ಲಿ ಗಸ್ತು:
ಮಹಿಳೆಯರು, ಮಕ್ಕಳಿಗೆ ಕಾನೂನು ಅರಿವು, ಜಾಗೃತಿ ಶಿಕ್ಷಣ, ತಕ್ಷಣದ ರಕ್ಷಣೆ ಮತ್ತು ನೆರವು ನೀಡುವ ಉದ್ದೇಶದಿಂದ ಅನುಷ್ಠಾನಗೊಳಿಸಲು ಬೀದರ್ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಸ್ಥಾಪಿಸಿದ್ದ ಅಕ್ಕಪಡೆಯ ಯಶಸ್ಸಿನ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಇದನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಆಸಕ್ತರು ಈ ಪಡೆಯನ್ನು ಸೇರಿದರೆ ಅವರಿಗೆ ಸೂಕ್ತ ತರಬೇತಿ ಕೊಡಲಾಗುತ್ತದೆ.
ಈ ಪಡೆಗಳು ಬಸ್ ನಿಲ್ದಾಣ, ಶಾಲೆ, ಕಾಲೇಜು, ಮಾರುಕಟ್ಟೆ, ಉದ್ಯಾನವನ ಮತ್ತು ದೇವಾಲಯಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಗಸ್ತು ತಿರುಗಲಿದ್ದು, ಹೊಯ್ಸಳ ವಾಹನಗಳ ಮಾದರಿಯಲ್ಲಿ ಮಾರ್ಪಾಡು ಮಾಡಿದ ವಾಹನಗಳನ್ನು ಬಳಸಲಾಗುತ್ತದೆ. ಪ್ರತಿ ಘಟಕವು ಆರರಿಂದ ಹತ್ತು ಸದಸ್ಯರನ್ನು ಒಳಗೊಂಡಿದ್ದು, ಇದರಲ್ಲಿ ಕನಿಷ್ಠ ಇಬ್ಬರು ಮಹಿಳಾ ಪೊಲೀಸ್ ಕಾನ್ಸ್ಟೇಬಲ್ಗಳು ಮತ್ತು ತರಬೇತಿ ಪಡೆದ ಎನ್ಸಿಸಿ ಕೆಡೆಟ್ಗಳು ಇರುತ್ತಾರೆ. ಅಕ್ಕ ಪಡೆ ಪ್ರತಿದಿನ ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ಕಾರ್ಯನಿರ್ವಹಿಸುತ್ತದೆ.
2 ವಿಷಯಗಳು ಮುಂದೂಡಿಕೆ
ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತದ ಸ್ಥಾಪನೆ ಹಾಗೂ ಸಂಘದ ಉಪವಿಧಿಗಳಿಗೆ ಅನುಮೋದನೆ ನೀಡುವ ವಿಚಾರ ಸಂಪುಟ ಸಭೆಯ ಮುಂದೆ ಇತ್ತಾದರೂ ಯಾವುದೇ ಅನುಮೋದನೆ ನೀಡದೆ ವಿಷಯವನ್ನು ಮುಂದೂಡಲಾಯಿತು. ಅದೇ ರೀತಿ ಬೆಂಗಳೂರು ಉತ್ತರ ತಾಲೂಕು ದಾಸನಪುರ ಹೋಬಳಿ ರಾವುತ್ತನಹಳ್ಳಿ ಗ್ರಾಮದ ಸರ್ವೇ ನಂ. 57 ಮತ್ತು 58 ರಲ್ಲಿ ದಲಿತ ಹಾಗೂ ಹಿಂದುಳಿದ ವರ್ಗಗಳ 22 ಮಠಗಳಿಗೆ ಜಮೀನು ಮಂಜೂರು ಮಾಡುವ ವಿಷಯವೂ ಮುಂದೂಡಿಕೆಯಾಗಿದೆ.
ಕಲಬುರಗಿಗೆ 120 ಕೋಟಿ ರೂ.
ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧ ಸ್ಥಳಗಳಲ್ಲಿ ಮಹಾತ್ಮಾ ಗಾಂಧಿ, ಇಂದಿರಾ ಗಾಂಧಿ, ಜವಾಹರಲಾಲ್ ನೆಹರೂ ಮತ್ತು ರಾಜೀವ್ ಗಾಂಧಿ ಇವರ ಪುತ್ಥಳಿಗಳನ್ನು ಸ್ಥಾಪಿಸಲು ಸರ್ಕಾರ ಅನುಮತಿಸಿದ್ದು, ಮಹಾನಗರ ಪಾಲಿಕೆಯ ಆದಾಯದಿಂದಲೇ ಇದನ್ನು ಅನುಷ್ಠಾನಗೊಳಿಸಲಾಗುತ್ತದೆ.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ 50 ಕೋಟಿ ರೂ. ಅನುದಾನದಲ್ಲಿ ಮೆಗಾ ಡೈರಿ, 10 ಕೋಟಿ ರೂ. ವೆಚ್ಚದಲ್ಲಿ ಪ್ರಾದೇಶಿಕ ಸಹಕಾರ ಭವನ ಹಾಗೂ 66.75 ಕೋಟಿ ರೂ. ವೆಚ್ಚದಲ್ಲಿ ಕಲಬುರಗಿ ವಿವಿ ಆವರಣದಲ್ಲಿ ಜಿಟಿಟಿಸಿ ಬಹುಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆಗೆ ಅನುಮೋದನೆ ನೀಡಿದೆ.
31 ಜೀವಾವಧಿ ಶಿಕ್ಷಾ ಬಂಧಿಗಳಿಗೆ ಅವಧಿಗೆ ಮುನ್ನ ಬಿಡುಗಡೆ ಭಾಗ್ಯ
ರಾಜ್ಯದ ವಿವಿಧ ಕೇಂದ್ರ ಕಾರಾಗೃಹಗಳಲ್ಲಿರುವ 31 ಜೀವಾವಧಿ ಶಿಕ್ಷಾ ಬಂಧಿಗಳನ್ನು ಸನ್ನಡತೆ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆ ಮಾಡಲು ಸಂಪುಟ ಸಭೆ ನಿರ್ಣಯಿಸಿದೆ. ಅಲ್ಲದೆ, ಶಸ್ತ್ರಾಸ್ತ್ರ ಕಾಯ್ದೆಯಡಿ ಬಂಧನಕ್ಕೊಳಗಾಗಿದ್ದ ಇನ್ನಿಬ್ಬಿರ ಬಿಡುಗಡೆಗಾಗಿ ಕೇಂದ್ರ ಸರ್ಕಾರದ ಅನುಮತಿ ಪಡೆದು ಬಿಡುಗಡೆ ಮಾಡಲು ತೀರ್ಮಾನಿಸಿದೆ. ಕರ್ನ
ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮಕ್ಕೆ 17.70 ಕೋಟಿ ರೂ. ವೆಚ್ಚದಲ್ಲಿ ಸಾಬೂನು ತಯಾರಿಸುವ ಯಂತ್ರ ಖರೀದಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.






Any questions related to ರಾಜ್ಯವ್ಯಾಪಿ ಅಕ್ಕ ಪಡೆ ಯೋಜನೆ ಜಾರಿ: ಸಚಿವ ಸಂಪುಟ ಅನುಮೋದನೆ?