|

ರಾಜ್ಯದ 9 ವಿಶ್ವವಿದ್ಯಾಲಯಗಳ ಉನ್ನತ ಅಧಿಕಾರಿಗಳ ಅಕ್ರಮದ ತನಿಖೆಗೆ ಆಯೋಗ ರಚನೆ: ಡಾ.ಎಂ.ಸಿ.ಸುಧಾಕರ್

ಬೆಂಗಳೂರು.23.ಮಾರ್ಚ್.26: ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿರುವ ರಾಜ್ಯದ 31 ವಿವಿಗಳಲ್ಲಿ 9 ವಿವಿಗಳ ಉನ್ನತ ಅಧಿಕಾರಿಗಳ ಮೇಲೆ ಭ್ರಷ್ಟಾಷಾರ, ಅಕ್ರಮ, ಅವ್ಯವಹಾರದ ತನಿಖೆ, ವಿಚಾರಣೆ ನಡೆಯುತ್ತಿದೆ. ಕುವೆಂಪು ವಿವಿಯಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ಮಾತ್ರ ಸರ್ಕಾರ ಶಿಸ್ತು ಕ್ರಮಕ್ಕೆ ಮುಂದಾಗಿದ್ದರೆ, ಉಳಿದ 8 ವಿಶ್ವವಿದ್ಯಾಲಯಗಳಲ್ಲಿನ ಅಕ್ರಮಗಳು ಇನ್ನೂ ವಿಚಾರಣೆ ಹಂತ ಅಥವಾ ಸರ್ಕಾರದ ಪರಿಶೀಲನೆಯಲ್ಲಿ ಉಳಿದುಕೊಂಡಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ತಿಳಿಸಿದರು.

ಬೆಂಗಳೂರು ಉತ್ತರ ವಿವಿಯ ಕುಲಸಚಿವರ (ಆಡಳಿತ) ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ವಿಚಾರಣಾ ಆಯೋಗ ರಚನೆಯಾಗಿದ್ದು, ವರದಿ ಇನ್ನೂ ಸಲ್ಲಿಕೆಯಾಗಿಲ್ಲ. ತುಮಕೂರು ವಿಶ್ವವಿದ್ಯಾಲಯ ಹಿಂದಿನ ಕುಲಪತಿಗಳ ವಿರುದ್ಧ ನಿಯಮ ಉಲ್ಲಂಘಣೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿದೆ.

ಮಂಗಳೂರು ವಿವಿಯಲ್ಲಿ ನಡೆದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ವಿಚಾರಣಾ ಸಮಿತಿ ತನಿಖೆ ನಡೆಸಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಸರ್ಕಾರದ ಮಟ್ಟದಲ್ಲಿ ವರದಿ ಪರಿಶೀಲನೆ ನಡೆಯುತ್ತಿದೆ. ಕರ್ನಾಟನ ಜಾನಪದ ವಿವಿಯ ಹಿಂದಿನ ಪ್ರಭಾರ ಕುಲಪತಿಯಾಗಿದ್ದ ಪ್ರೊ. ಕೆ.ಎನ್.ಗಂಗಾ ನಾಯಕ್ ಅವರ ಮೇಲಿನ ಹಣ ಮತ್ತು ಅಧಿಕಾರ ದುರುಪಯೋಗಪಡಿಸಿಕೊಂಡಿರುವ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರ ಸಚಿವಾಲಯವು ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಏಕ ಸದಸ್ಯ ಶೋಧನಾ ಸಮಿತಿ ರಚಿಸಿದ್ದು, ವರದಿ ನಿರೀಕ್ಷೆಯಲ್ಲಿದೆ.

ಇನ್ನು ಕರ್ನಾಟಕ ಸಂಸ್ಕೃತ ವಿವಿಯಲ್ಲಿನ ನೇಮಕಾತಿಯಲ್ಲಿನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರ ಸಚಿವಾಲಯವು ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದ್ದು, ವರದಿ ಸಲ್ಲಿಕೆ ಬಾಕಿಯಿದೆ.

ಇನ್ನು ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ಮಂಜೂರಾದ ಹುದ್ದೆಗಳಿಗಿಂತ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಿರುವ ಹಾಗೂ ಆರ್ಥಿಕ ಅವ್ಯವಹಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ರಾಜ್ಯಪಾಲರ ಸಚಿವಾಲಯವು ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಮೂರ್ತಿಗಳ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಶೋಧನಾ ಸಮಿತಿ ರಚಿಸಿದೆ.

ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿಯ ಹಿಂದಿನ ಕುಲಪತಿ ಪ್ರೊ. ನಾಗೇಶ್ ವಿ. ಬೆಟಕೋಟೆ ಅವರು ವಿವಿಯಲ್ಲಿ ಕುಲ ಸಚಿವರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ವಿವಿಗೆ ಆರ್ಥಿಕ ನಷ್ಟ ಹಾಗೂ ಇನ್ನಿತರ ಆರೋಪಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ನಿವೃತ್ತ ಜಿಲ್ಲಾ ನ್ಯಾಯಾಧೀಶರನ್ನು ನೇಮಿಸಲಾಗಿದ್ದು, ಸರ್ಕಾರ ವರದಿ ನಿರೀಕ್ಷೆಯಲ್ಲಿದೆ.

ಅಕ್ಕಮಹಾದೇವಿ ವಿವಿಯಲ್ಲಿ ಭದ್ರತಾ ಸಿಬ್ಬಂದಿಯ ಟೆಂಡರ್ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಬಗ್ಗೆ ತನಿಖೆ ನಡೆಸಲು ತನಿಖಾ ಸಮಿತಿಯನ್ನು ರಚಿಸಿದ್ದು, ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ.

ಒಂದೇ ಒಂದು ಅಕ್ರಮ ತನಿಖೆಯಲ್ಲಿ ಸಾಬೀತು
ಇನ್ನು ಶಿವಮೊಗ್ಗದ ಕುವೆಂಪು ವಿವಿಯಲ್ಲಿ ಸ್ಮಾರ್ಟ್ ಕ್ಲಾಸ್‌ಗಳ ಅಳವಡಿಕೆಗೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆಯಿಂದ ಬಿಡುಗಡೆಯಾದ ಅನುದಾನ ದುರುಪಯೋಗಕ್ಕೆ ಸಂಬಂಧಿಸಿ ಕುಲಪತಿಗಳು, ಕುಲಸಚಿವರು (ಆಡಳಿತ) ಹಾಗೂ ಇನ್ನಿತರರ ವಿರುದ್ಧ ವಿಚಾರಣೆ ನಡೆಸಲು ನೇಮಿಸಲಾಗಿದ್ದ ನಿವೃತ್ತ ನ್ಯಾಯಾಧೀಶರು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ.

ಪ್ರಕರಣದಲ್ಲಿನ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಗಳಾದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಹಣಕಾಸು ಇಲಾಖೆಗೆ ಪತ್ರ ಬರೆಯಲಾಗಿದೆ. ಹಾಗೆಯೇ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ರಾಜ್ಯಪಾಲರ ಅನುಮತಿ ಪಡೆಯಲು ಪ್ರಯತ್ನಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ತಿಳಿಸಿದ್ದಾರೆ.

Similar Posts

Leave a Reply

Your email address will not be published. Required fields are marked *