ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಸಾಧನಾ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ಹರಿಹಾಯ್ದರು. ಜನ ಬದುಕಿದ್ದರೆ ಇಂತಹ ಗ್ಯಾರಂಟಿಯಿಂದಲೇ ಹೊರತು, ಸುಳ್ಳು ಪ್ರಚಾರದಿಂದ ಅಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶನಿವಾರ ಹೇಳಿದ್ದಾರೆ.
ಸಾಮಾಜಿಕ ನ್ಯಾಯಕ್ಕೆ ನಾವು ಬದ್ಧ, ಕಾಂಗ್ರೆಸ್ ತನ್ನ ಮೂಲ ಸಿದ್ಧಾಂತವನ್ನು ಎಂದಿಗೂ ಬಿಡುವುದಿಲ್ಲ. ಜನ ಬದುಕಿದ್ದರೆ ಇಂತಹ ಗ್ಯಾರಂಟಿಯಿಂದಲೇ ಹೊರತು, ಸುಳ್ಳು ಪ್ರಚಾರದಿಂದ ಅಲ್ಲ ಎಂದು ಟೀಕಿಸಿದರು.
ಇದೇ ವೇಳೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮೋದಿ ಸುಳ್ಳಿನ ಸರದಾರ. ಉದ್ಯೋಗ ಕೊಡುವುದಾಗಿ ಹೇಳಿದರು, ಕೊಟ್ರಾ? ಎಲ್ಲರಿಗೂ 2 ಕೋಟಿ ರೂ. ಕೊಡುವುದಾಗಿ ಹೇಳಿದರು ಕೊಟ್ರಾ? ರೈತರಿಗೆ ಆದಾಯ ದ್ವಿಗುಣಗೊಳಿಸುವುದಾಗಿ ಹೇಳಿದರು ಮಾಡಿದರೆ? ಭ್ರಷ್ಟಾಚಾರ ಕಡಿಮೆ ಮಾಡಲಿಲ್ಲ. ಮೋದಿ ಸುಳ್ಳಿನ ಸರದಾರ ಎಂದು ಕಟುವಾಗಿ ಟೀಕಿಸಿದರು.
ರಾಜ್ಯದಲ್ಲಿ ಮಹಾರಾಜರ ಕಾಲದಲ್ಲಿ ಅಭಿವೃದ್ಧಿ ಆಯಿತು ಮೋದಿಯವರೇ, ನಿಮ್ಮ ಮತ್ತು ನಿಮ್ಮ ಶಿಷ್ಯರ ಕೊಡುಗೆ ಏನು ಎಂಬುದನ್ನು ತಿಳಿಸಿ. ಮುಂಜಾನೆಯಿಂದ ಸಂಜೆವರೆಗೆ ಟಿವಿಯಲಿ ಕಾಣಿಸಿಕೊಳ್ಳಬೇಕು. ಮಣಿಪುರದಲ್ಲಿ ಕೋಮು ಗಲಭೆ ಆಗುತ್ತಿದೆ. ಅವರನ್ನು ಭೇಟಿಯಾಗದ ನೀವು 42 ದೇಶಕ್ಕೆ ಹೋಗಿದ್ದೀರಿ.
ಕಾಂಗ್ರೆಸ್ ಮುಕ್ತ ಭಾರತ ನಿರ್ಮಿಸುವುದಾಗಿ ಪ್ರಧಾನಿ ಮೋದಿ ಹೇಳಿದ್ದರು. 400ಕ್ಕಿಂತ ಹೆಚ್ಚು ಸ್ಥಾನಗಳಿಸುವುದಾಗಿ ಹೇಳಿದರು. ಆದರೆ ಏನಾಯಿತು? ಕಾಂಗ್ರೆಸ್ ಮತ್ತು ಬಿಜೆಪಿಗೆ ಕೇವಲ ಶೇ.2 ಪರ್ಸೆಂಟ್ ಸ್ಥಾನ ವ್ಯತ್ಯಾಸ. ಅಹಂಕಾರ ಇದ್ದವರು ಎಷ್ಟು ಮೇಲೆ ಹೋದರೂ ಕೆಳಗೆ ಬೀಳಲೇಬೇಕು. ನಮ್ಮ ಪಕ್ಷ ದೇಶದ ಮೂಲೆ ಮೂಲೆಯಲ್ಲಿಯೂ ಇದೆ ಎಂದರು.
ರಾಜ್ಯದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸ್ವಲ್ಪ ಶ್ರಮವಹಿಸಿ 10 ಸ್ಥಾನ ಕೊಡಬೇಕಿತ್ತು, ಮಹಾರಾಷ್ಟ್ರ, ಮಧ್ಯಪ್ರದೇಶ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಮೂರು, ಎರಡು ಸ್ಥಾನಗಳು ಹೆಚ್ಚು ಬಂದಿದ್ದರೂ ನಾವೇ ಹೆಚ್ಚು ಸ್ಥಾನ ಗೆಲ್ಲುತ್ತಿದ್ದೆವು ಎಂದು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಲ್ಲಿ ಕೆಲಸ ಮಾಡುವ ಜನ ಇದ್ದಾರೆ. ಮೋದಿ ಪಕ್ಷದಲ್ಲಿ ಟೀಕಿಸುವವರು ಇದ್ದಾರೆ. ಗ್ಯಾರಂಟಿ ಯೋಜನೆಯಿಂದ ಬಾಡಿಗೆದಾರರೂ ಮಾಲೀಕರಾಗಿದ್ದಾರೆ. ದೇಶದ ಅಭಿವೃದ್ಧಿ ಹೊಂದಬೇಕಾದರೆ ದೊಡ್ಡ ದೊಡ್ಡ ಕಾರ್ಖಾನೆ ಇರಬೇಕು. ಆಗ ಉದ್ಯೋಗ ಲಭಿಸುತ್ತದೆ. ಆದರೆ, ಬಿಜೆಪಿಗೆ ಆ ಜ್ಞಾನವೇ ಇಲ್ಲ. ಏಕೆಂದರೆ ಬಡವರ ಬಗ್ಗೆ ಅವರಿಗೆ ಆಸಕ್ತಿಯೇ ಇಲ್ಲ ಎಂದು ಕುಟುಕಿದರು.
ಈ ದೇಶದ ಜನ ಸಂವಿಧಾನ ಬದಲಾಯಿಸಲು ಬಿಡಲ್ಲ, ನಿಮ್ಮ ತಾತ ಬಂದರೂ ಅದು ಸಾಧ್ಯವಿಲ್ಲ. ನೀವು ಸಂವಿಧಾನದಿಂದಲೇ ಪ್ರಧಾನಿ ಆಗಿರುವುದು. ಆದರೆ, ಈಗ ಅದನ್ನೇ ಕೊಲ್ಲಲು ಮುಂದಾಗಿದ್ದೀರಿ ಎಂದು ಟೀಕಿಸಿದರು.