* ಯುವಜನರಿಗೆ ಪ್ರತಿಜ್ಞಾವಿಧಿ ಬೋಧಿಸಿದ ಜಿಲ್ಲಾ ಉಸ್ತುವಾರಿ ಸಚಿವರು;
* 14.75 ಕೋಟಿ ರೂ. ವೆಚ್ಚದ ಭಾಲ್ಕಿ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ;
* ವ್ಯಸನಕ್ಕೆ ಬಲಿಯಾಗದೆ, ಸದೃಢರಾಗಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಚಿವ ಈಶ್ವರ ಖಂಡ್ರೆ ಕರೆ
ಬೀದರ.20.ಜುಲೈ.25:- ಯಾವುದೇ ವ್ಯಸನಗಳಿಗೆ ಬಲಿಯಾಗದೆ, ನಿಯಮಿತ ವ್ಯಾಯಾಮ, ಕ್ರೀಡಾ ಚಟುವಟಿಕೆಯಲ್ಲಿ ಭಾಗಿಯಾಗಿ ಸದೃಢರಾಗಿ ಆರೋಗ್ಯವಂತ ಸಮಾಜ ನಿರ್ಮಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ಅವರು ಯುವಜನರಿಗೆ ಕರೆ ನೀಡಿದ್ದಾರೆ.

ಅವರು ಶನಿವಾರ ಬೀದರ ಜಿಲ್ಲೆಯ ಭಾಲ್ಕಿಯಲ್ಲಿ ಸುಮಾರು 14.75 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಅತ್ಯಾಧುನಿಕ ರಾಷ್ಟ್ರಮಟ್ಟದ ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಕ್ರೀಡೆಗಳು ನೋಡುಗರಿಗೆ ಮನರಂಜನೆ ನೀಡಿದರೆ, ಆಡುವವರಿಗೆ ಆರೋಗ್ಯವನ್ನು ನೀಡುತ್ತದೆ. ದೇಹ ಸದೃಢವಾಗುತ್ತದೆ. ಬುದ್ಧಿ ಮತ್ತು ಮನಸ್ಸು ಎರಡನ್ನೂ ಸಮತೋಲನದಲ್ಲಿಡುತ್ತದೆ. ಏಕೆಂದರೆ ಕ್ರೀಡೆಯಲ್ಲಿ ಗೆಲ್ಲಲು ಯೋಜನೆ (ಗೇಮ್ ಪ್ಲಾನ್) ಮಾಡಲಾಗುತ್ತದೆ. ಆಗ ಮೆದುಳು ಕೆಲಸ ಮಾಡುತ್ತದೆ. ಗೆಲ್ಲುವ ಛಲದಿಂದ ಆಡುತ್ತಾರೆ ಆಗ ದೇಹ ಕೆಲಸ ಮಾಡುತ್ತದೆ. ಹೀಗಾಗಿ ಬುದ್ಧಿ ಮತ್ತು ದೇಹ ಎರಡೂ ಬೆಳೆಯಲು ಕ್ರೀಡೆಗಳು ಸಹಕಾರಿ ಎಂದರು.

ಸ್ವಾಮಿ ವಿವೇಕಾನಂದರು ಗೀತಾಧ್ಯಯನಕ್ಕಿಂತ ಫುಟ್ಬಾಲ್ ಮೂಲಕ ಸ್ವರ್ಗಕ್ಕೆ ಹತ್ತಿರ ಆಗಬಹುದು ಎಂದು ಹೇಳಿದ್ದರು. ಅಂದರೆ ನೀವು ದೈಹಿಕವಾಗಿ ಸದೃಢರಾಗಿದ್ದರೆ, ಅದುವೇ ಸ್ವರ್ಗ, ಆರೋಗ್ಯವೇ ಭಾಗ್ಯ ಎಂಬುದು ಅವರ ಮಾತಿನ ಅರ್ಥವಾಗಿದೆ ಎಂದು ಹೇಳಿದರು.
ಕ್ರೀಡಾಂಗಣದ ನಿರ್ಮಾಣ ಮಾಡುತ್ತಿರುವ ಉದ್ದೇಶ. ನಮ್ಮ ಭಾಗದ ಯುವಜನರು ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ವಹಿಸಬೇಕು.
ಆಸಕ್ತರು ಇಲ್ಲಿ ಬಂದು ಅಭ್ಯಾಸ ಮಾಡಬೇಕು. ಆ ಮೂಲಕ ಕ್ರೀಡಾ ಪ್ರತಿಭೆಗಳಾಗಿ ಹೊರಹೊಮ್ಮಬೇಕು. ತಾಲೂಕು ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗಿಯಾಗಿ, ಅಲ್ಲಿ ಗೆದ್ದು, ಜಿಲ್ಲಾಮಟ್ಟದಲ್ಲಿ ಮಿಂಚಿ ನಂತರ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಬೇಕು ಎಂಬುದಾಗಿದೆ ಎಂದರು.

ಗ್ರಾಮೀಣ ಯುವಜನರ ಸುಪ್ತ ಪ್ರತಿಭೆಯನ್ನು ಗುರುತಿಸಿ, ಅವರನ್ನು ಉತ್ತಮ ಕ್ರೀಡಾಪಟುಗಳಾಗಿ ರೂಪಿಸಬೇಕಾದರೆ ಅವರಿಗೆ ಅಭ್ಯಾಸ ಮಾಡಲು ಸೂಕ್ತ ಅನುಕೂಲತೆ ಬೇಕು. ಅದನ್ನು ಈ ಕ್ರೀಡಾಂಗಣ ನಿಮಗೆ ಒದಗಿಸಲಿದೆ ಎಂದು ಹೇಳಿದರು.
ಕಾರ್ಯಕ್ರಮದ ಕೊನೆಯಲ್ಲಿ ಸಚಿವರು ಈ ಕೆಳಕಂಡಂತೆ ಪ್ರತಿಜ್ಞಾವಿಧಿ ಬೋಧಿಸಿದರು:- ಈ ದೇಶದ ಯುವಶಕ್ತಿಯಾಗಿ ಭವಿಷ್ಯದ ಪ್ರಜೆಯಾಗಿರುವ ನಾನು ನನ್ನ ದೇಹವನ್ನು ಸದೃಢವಾಗಿಟ್ಟುಕೊಳ್ಳಲು ಇಚ್ಛಿಸುತ್ತೇನೆ. ನಿತ್ಯ ವ್ಯಾಯಾಮ, ನಡಿಗೆಯ ಮೂಲಕ ನನ್ನ ದೇಹವನ್ನು ಸದೃಢವಾಗಿ ಮತ್ತು ಆರೋಗ್ಯಪೂರ್ಣವಾಗಿಟ್ಟುಕೊಂಡು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತೇನೆ. ಸ್ವಾಮಿ ವಿವೇಕಾನಂದರು ಹೇಳುವಂತೆ ನನ್ನ ಜೀವನದ ಶಿಲ್ಪಿ ನಾನೇ ಆಗುತ್ತೇನೆ.
ಸಾರಾಯಿ, ಮದ್ಯ, ಸಿಗರೇಟ್, ಗಾಂಜಾ, ಮಾದಕದ್ರವ್ಯ ವ್ಯಸನಕ್ಕೆ ಬೀಳದೆ, ಮೊಬೈಲ್ ಗೇಮ್, ಬೆಟ್ಟಿಂಗ್ ನಂತಹ ದುಶ್ಚಟಗಳ ದಾಸನಾಗದೆ ವಿದ್ಯಾವಂತನಾಗಿ, ಬುದ್ಧವಂತನಾಗಿ ಈ ದೇಶಕ್ಕೆ ನನ್ನ ಕೈಲಾದ ಕೊಡುಗೆ ನೀಡುವ ಮೂಲಕ ನನ್ನ ಹೆತ್ತು ಹೊತ್ತು ಸಲಹಿದ ತಂದೆ ತಾಯಿಗಳಿಗೆ, ವಿದ್ಯೆ ಕಲಿಸಿದ ಗುರುಗಳಿಗೆ, ಆಶ್ರಯ ನೀಡಿದ ಈ ನಾಡಿಗೆ ಹೆಸರು ತರುತ್ತೇನೆ.
ಪ್ರಕೃತಿ ಪರಿಸರ ಇದ್ದರೆ ನಾವು ಎಂಬುದು ನನಗೆ ಚೆನ್ನಾಗಿ ಅರಿವಾಗಿದೆ. ಮರ ಗಿಡ ಬೆಳೆಸಿದರೆ ನಮಗೆ ಪ್ರಾಣವಾಯು ಲಭಿಸುತ್ತದೆ. ಹೀಗಾಗಿ ನಾನು ಮನೆಯ ಮುಂದೆ ಒಂದು ಸಸಿ ನೆಟ್ಟು ಅದು ಹೆಮ್ಮರವಾಗಿ ಬೆಳೆಯುವಂತೆ ನೀರೆರೆದು ಪೆÇೀಷಿಸುತ್ತೇನೆ.
ಹಸಿರೇ ಉಸಿರು, ಆರೋಗ್ಯವಂತ ಯುವಕರಿಂದ ಆರೋಗ್ಯಪೂರ್ಣ ಸಮಾಜದ ನಿರ್ಮಾಣ ಸಾಧ್ಯ ಎಂಬ ಸಂದೇಶವನ್ನು ಜಗತ್ತಿಗೆ ಸಾರುತ್ತೇನೆ.
ನನ್ನ ಬೀದರ್ ಹಸಿರು ಬೀದರ್, ನನ್ನ ಭಾಲ್ಕಿ ಹಸಿರು ಭಾಲ್ಕಿ.. ನನ್ನ ಆರೋಗ್ಯ ಸಮುದಾಯದ ಆರೋಗ್ಯ.
ಜೈ ಹಿಂದ್., ಜೈ ಕರ್ನಾಟಕ..