ತುಮಕೂರು.21.ಜುಲೈ .25:- ನಗರದ ಬಾವಿಕಟ್ಟೆ ಕಲ್ಯಾಣ ಮಂಟಪದ ಬಳಿ ಘಟನೆ ನಡೆದಿದ್ದು, ಮೃತರನ್ನು ರಾಜೇಶ್ವರಿ (45) ಅಂತ ಗುರುತಿಸಲಾಗಿದೆ.
ಸೋಮವಾರ ಬೆಳ್ಳಂಬೆಳಗ್ಗೆ ತುಮಕೂರಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಹಿಟ್ ಅಂಡ್ ರನ್ ಗೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ.
ಮಹಿಳೆಯ ತಲೆ ಮೇಲೆ KSRTC ಬಸ್ ಹತ್ತಿದ ಎನ್ನಲಾಗಿದ್ದು , ಸ್ಥಳದಲ್ಲೇ ರಾಜೇಶ್ವರಿ ಪ್ರಾಣಬಿಟ್ಟಿದ್ದಾರೆ.
ಮೃತ ರಾಜೇಶ್ವರಿಯನ್ನು ತುಮಕೂರು ತಾಲೂಕಿನ ಅರಕೆರೆ ಗ್ರಾಮದವರು ಎನ್ನಲಾಗಿದೆ. ನಗರದ ಗುಬ್ಬಿ ಗೇಟ್ ಸರ್ಕಲ್ ಬಳಿ ರಾಜೇಶ್ವರಿ ಹೋಟೆಲ್ ನಡೆಸುತ್ತಿದ್ದರು.ಇವತ್ತು ಬೆಳಗ್ಗೆ ಹೋಟೆಲ್ ಗೆ ತೆರಳುತ್ತಿರುವಾಗ ನಡೆದಿರುವ ಅಪಘಾತ ನಡೆದಿದೆ.
ಸ್ಥಳಕ್ಕೆ ತುಮಕೂರು ನಗರ ಸಂಚಾರಿ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ತುಮಕೂರು ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಾರ್ವಜನಿಕರು ಶಾಕ್..!
ಘಟನೆಯಿಂದ ಪ್ರತ್ಯಕ್ಷದರ್ಶಿಗಳು ಶಾಕ್ ಆಗಿದ್ದಾರೆ. ರಕ್ತದ ಮಡುವಿನಲ್ಲಿ ರಾಜೇಶ್ವರಿ ನೋಡಿ ಎಲ್ಲರೂ ಮರುಕಪಟ್ಟಿದ್ದಾರೆ. ಮೃತ ರಾಜೇಶ್ವರಿ ಕುಟುಂಬದ ಸದಸ್ಯರ ಆಕ್ರಂದನ ಮುಗಿಲುಮುಟ್ಟಿದೆ. ಮೃತ ರಾಜೇಶ್ವರಿ ಶವವನ್ನು ಪರೀಕ್ಷೆಗೆ ರವಾನೆ ಮಾಡಲಾಗಿದೆ.
ಇನ್ನು ರಾಜ್ಯದಲ್ಲಿ ಮಳೆ ಅಬ್ಬರ ಜೋರಿದ್ದು, ಕಳೆದ 2 ದಿನಗಳಿಂದ ವರುಣ ಅಬ್ಬರಿಸುತ್ತಿದ್ದಾನೆ. ವಿವಿಧ ಜಿಲ್ಲೆಗಳಲ್ಲಿ ಸಂಭವಿಸಿದ ಮಳೆ ಸಂಬಂಧಿ ಅವಘಡಗಳಿಂದ ಭಾನುವಾರ ಒಂದೇ ದಿನ ಐವರು ಮೃತಪಟ್ಟಿದ್ದಾರೆ.
ಭಾರೀ ಮಳೆಗೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಅಬ್ಬಿ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದೆ. ಪ್ರವಾಸಿಗ ಬೆಂಗಳೂರು ಮೂಲದ ರಮೇಶ್ ನೀರುಪಾಲಾಗಿದ್ದಾರೆ. ಫಾಲ್ಸ್ ಮುಂದೆ ಫೋಟೊಗೆ ಪೋಸ್ ಕೊಡುವಾಗಲೇ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ನೀರಿನಲ್ಲಿ ಕೊಚ್ಚಿ ಹೋದ ದೃಶ್ಯ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಮೈಸೂರಿನ ಮೀನಾಕ್ಷಿಪುರ ಬಳಿಯ ಕೆಆರ್ಎಸ್ ಹಿನ್ನೀರಿನಲ್ಲಿ ಮೂವರು ವಿದ್ಯಾರ್ಥಿಗಳು ನೀರು ಪಾಲಾಗಿದ್ದಾರೆ. ಕೆಆರ್ಎಸ್ ಹಿನ್ನೀರಿನ ಪ್ರದೇಶ ಮೋಜು ಮಸ್ತಿಗೆ ಕುಖ್ಯಾತಿ ಪಡೆದಿದೆ. ಸಮುದ್ರದಂತೆಯೇ ಕಾವೇರಿ ಹಿನ್ನೀರಿನಲ್ಲಿ ಅಲೆಗಳು ಬರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಭಾನುವಾರ ಮೋಜು ಮಸ್ತಿಗೆಂದು ಬಂದಿದ್ದ ಮಂಡ್ಯ ನರ್ಸಿಂಗ್ ಕಾಲೇಜಿನ ಪ್ರಶಾಂತ್, ಸಿದ್ದೇಶ್, ಕೃಷ್ಣ ದಾರುಣವಾಗಿ ಸಾವಿಗೀಡಾಗಿದ್ದಾರೆ
ಇನ್ನು, ಕರ್ನಾಟಕದಲ್ಲಿ ಮುಂದಿನ 3-4 ದಿನಗಳ ಕಾಲ ಭಾರಿ ಮಳೆಯಾಗಲಿದ್ದು, ಜುಲೈ 24ರವರೆಗೂ ಕರಾವಳಿ, ಮಲೆನಾಡು ಭಾಗಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಗೂ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಜುಲೈ 23 ಹಾಗೂ 24ರಂದು ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ವರುಣ ಅಬ್ಬರಿಸಲಿದ್ದಾನೆ ಎನ್ನಲಾಗಿದೆ.
ಇನ್ನು, ಕರಾವಳಿ ಹಾಗೂ ಕರಾವಳಿ ತಟದ ಹತ್ತಿರ ಪ್ರತಿ ಗಂಟೆಗೆ 60 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದೆ ಈ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಕಠಿಣ ಸೂಚನೆ ನೀಡಲಾಗಿದೆ.